ಸಾರಾಂಶ
ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುವುದು ಸಾಮಾನ್ಯ. ಆದರೆ ಕಾನೂನು ಮೀರಬಾರದು. ಲಾಠಿಚಾರ್ಜ್ ನಂತಹ ಘಟನೆಗಳು ನಡೆಯಬಾರದು ಇದು ಬೇಸರ ತಂದಿದೆ
ಕನ್ನಡಪ್ರಭ ವಾರ್ತೆ ಜಮಖಂಡಿ
ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಯಬಾರದಿತ್ತು. ಕಾನೂನು ಕೈಗೆತ್ತಿಕೊಂಡಾಗ ಇಂತಹ ಘಟನೆಗಳಾಗುತ್ತವೆ. ಹೋರಾಟ ಮಾಡುವುದು ಎಲ್ಲರ ಹಕ್ಕು. ಆದರೆ ನಿಯಮ ಮೀರಬಾರದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಗುರುವಾರ ರಾತ್ರಿ ಉದ್ಯಮಿ ತೌಫಿಕ್ ಪಾರ್ಥನಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಶಾಂತರೀತಿಯಿಂದ ತಮ್ಮ ಹೋರಾಟ ನಡೆಸಬೇಕಿತ್ತು. ಆದರೆ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾವಣೆಯಾಗಿ ಕಾನೂನು ಕೈಗೆತ್ತಿಕೊಂಡಾಗ ಲಾಠಿಪ್ರಹಾರ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸರ್ಕಾರ ತನಿಖೆ ನಡೆಸಲಿದೆ. ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುವುದು ಸಾಮಾನ್ಯ. ಆದರೆ ಕಾನೂನು ಮೀರಬಾರದು. ಲಾಠಿಚಾರ್ಜ್ ನಂತಹ ಘಟನೆಗಳು ನಡೆಯಬಾರದು ಇದು ಬೇಸರ ತಂದಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನ ಹಾಗೂ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿದೆ. ಸದಸ್ಯರಾದ ಉಮಾಶ್ರೀ, ಪಿ.ಎಚ್.ಪೂಜಾರ, ನಿರಾಣಿ ಮಾತನಾಡಲಿದ್ದಾರೆ ಅದಾದ ನಂತರ ಸರ್ಕಾರ ಉತ್ತರ ನೀಡಲಿದೆ. ಹಾಗೂ ಮುಖಂಡರ ಜತೆಗೆ ಚರ್ಚಿಸಲು ಸರ್ಕಾರ ಮುಂದಾಗಿದ್ದು ಬರುವ ಸೋಮವಾರ ಸಿಎಂ, ಡಿಸಿಎಂ ಹಾಗೂ ಮುಖಂಡರ ಜತೆಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉದ್ಯಮಿಗಳಾದ ತಫಿಕ್ ಪಾರ್ಥನಳ್ಳಿ, ಮಾಮೂನ ರಶೀದ ಪಾರ್ಥನಳ್ಳಿ, ಅಬುಬಕರ ಕುಡಚಿ ಸೇರಿದಂತೆ ಅನೇಕ ಮುಖಂಡರು ಇದ್ದರು.