ಡಿವಿಜಿಯವರ ಮಂಕುತಿಮ್ಮನ ಕಗ್ಗದ ಜೀವನದೃಷ್ಟಿಯನ್ನು ಉಲ್ಲೇಖಿಸಿದ ಶ್ರೀಗಳು, ಶಾಂತಿ ಮತ್ತು ಸಮತೋಲನಕ್ಕಾಗಿ ಪರಿಮಿತಿಯನ್ನರಿತ ಆಸೆ, ಪರವಶತೆ ಇಲ್ಲದ ಸುಖ, ವಿರತಿಯೊಡಗೂಡಿದ ಲೋಕೋದ್ಯೋಗ ಹಾಗೂ ಸತ್ಯವನ್ನು ಗ್ರಹಿಸುವ ಮನಸ್ಸು ಎಂಬ ನಾಲ್ಕು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿರಸಿ: ಮಾನವನ ಚಿತ್ತ ನಿರಂತರವಾಗಿ ಹರಿಯುವ ನದಿಯಂತಿದ್ದು, ಅದರ ಪ್ರವಾಹವು ಉರ್ಧ್ವಗತಿ ಅಥವಾ ಅಧೋಗತಿಯತ್ತ ಸಾಗಬಹುದು. ರಾಗ, ದ್ವೇಷ ಮತ್ತು ಮೋಹಗಳು ಮನುಷ್ಯನನ್ನು ಅಧೋಗತಿಯತ್ತ ಕೊಂಡೊಯ್ಯುವ ಪ್ರಮುಖ ದೋಷಗಳಾಗಿದ್ದು, ಅವುಗಳನ್ನು ತ್ಯಜಿಸಿ ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು,ಚಿನ್ನಾಪುರ ಸೀಮೆಯ ಮೇಲ್ತರ್ಪು ಹಾಗೂ ಕೆಳ್ತರ್ಪು ಸೀಮೆಯ ಭಕ್ತರು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಅಂಗವಾಗಿ ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.
ಚಂಚಲ ಮನಸ್ಸನ್ನು ಉರ್ಧ್ವಗತಿಯತ್ತ ಕೊಂಡೊಯ್ಯಲು ನಿರಂತರ ಅಭ್ಯಾಸ ಮತ್ತು ವೈರಾಗ್ಯ ಅತ್ಯಗತ್ಯ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಜೀವನದೃಷ್ಟಿಯನ್ನು ಉಲ್ಲೇಖಿಸಿದ ಶ್ರೀಗಳು, ಶಾಂತಿ ಮತ್ತು ಸಮತೋಲನಕ್ಕಾಗಿ ಪರಿಮಿತಿಯನ್ನರಿತ ಆಸೆ, ಪರವಶತೆ ಇಲ್ಲದ ಸುಖ, ವಿರತಿಯೊಡಗೂಡಿದ ಲೋಕೋದ್ಯೋಗ ಹಾಗೂ ಸತ್ಯವನ್ನು ಗ್ರಹಿಸುವ ಮನಸ್ಸು ಎಂಬ ನಾಲ್ಕು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತನ್ನ ಸಾಮರ್ಥ್ಯ ಹಾಗೂ ಮಿತಿಯನ್ನು ಅರಿತು ಆಸೆಗಳನ್ನು ಹೊಂದುವುದು, ಬಾಹ್ಯ ವಸ್ತುಗಳಿಗೆ ಅವಲಂಬನೆಯಾಗದೆ ಸುಖವನ್ನು ಕಂಡುಕೊಳ್ಳುವುದು, ಕರ್ತವ್ಯ ನಿರ್ವಹಿಸುತ್ತಲೇ ಫಲದ ಮೇಲಿನ ಅತಿಯಾದ ಮೋಹವನ್ನು ಬಿಡುವುದು ಮತ್ತು ಪೂರ್ವಾಗ್ರಹರಹಿತ ಮನಸ್ಸಿನಿಂದ ಸತ್ಯವನ್ನು ಸ್ವೀಕರಿಸುವುದು ಉತ್ತಮ ಜೀವನಕ್ಕೆ ಅಗತ್ಯ ಎಂದರು.ಹಣ, ಆಸ್ತಿ ಮತ್ತು ಪ್ರಸಿದ್ಧಿಯ ಬೆನ್ನತ್ತುವುದಕ್ಕಿಂತ ನಿಸ್ವಾರ್ಥ ಜನಸೇವೆಗೆ ಹೆಚ್ಚಿನ ಮೌಲ್ಯವಿದೆ. ಸೇವೆಯಿಂದ ದೊರೆಯುವ ಜನರ ಪ್ರೀತಿ, ಆಶೀರ್ವಾದ ಮತ್ತು ಆತ್ಮತೃಪ್ತಿಯೇ ಶಾಶ್ವತ ಸಂಪತ್ತು. ಆಧ್ಯಾತ್ಮಿಕ ಸಾಧನೆಯನ್ನು ಮುಂದೂಡುವ ಪ್ರವೃತ್ತಿಯ ವಿರುದ್ಧ ಎಚ್ಚರಿಸಿದ ಶ್ರೀಗಳು, ‘ನಾಳೆ ಮಾಡೋಣ, ನಿವೃತ್ತಿಯ ನಂತರ ಭಗವಂತನ ಚಿಂತನೆ ಮಾಡೋಣ’ ಎಂಬ ಆಲೋಚನೆ ಅಪಾಯಕಾರಿ ಎಂದರು.
ವೈದಿಕ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಅತ್ಯುನ್ನತ ಸ್ಥಾನವಿದೆ. ಪರಮಾತ್ಮನೇ ಜಗತ್ತಿನ ಪ್ರಥಮ ಗುರುವಾಗಿದ್ದು, ಚಾತುರ್ಮಾಸ್ಯದ ಅವಧಿಯಲ್ಲಿ ಯೋಗನಿದ್ರೆಯಲ್ಲಿರುವ ಪರಮಾತ್ಮನ ಧ್ಯಾನಾರ್ಥವಾಗಿ ಸನ್ಯಾಸಿಗಳು ಮತ್ತು ಯತಿಗಳು ದೇಶಸಂಚಾರವನ್ನು ಸ್ಥಗಿತಗೊಳಿಸಿ ಒಂದೇ ಸ್ಥಳದಲ್ಲಿ ನೆಲೆಸುತ್ತಾರೆ. ಇದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಈ ಪವಿತ್ರ ಅವಧಿಯಲ್ಲಿ ಗುರುಗಳ ದರ್ಶನ ಮತ್ತು ನಮಸ್ಕಾರಕ್ಕೆ ವಿಶೇಷ ಮಹತ್ವವಿದೆ ಎಂದು ಶ್ರೀಗಳು ತಿಳಿಸಿದರು.ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತಿ ಶ್ರೀಗಳು, ನಾರಾಯಣ ಹೆಗಡೆ, ದತ್ತಾತ್ರೇಯ ಭಟ್, ಮಹಾಲಕ್ಷ್ಮಿ ಗಾಂವಕರ, ದತ್ತಾತ್ರೇಯ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.