ನೀರಿನ ಸಮಸ್ಯೆ ಪರಿಹರಿಸಲು ಮುಂದಾದ ಸಚಿವರು

| Published : Jan 11 2025, 12:48 AM IST

ಸಾರಾಂಶ

ಜೆಜಿ ಹಳ್ಳಿ ಭಾಗದ ಕೆರೆಗಳಿಗೆ ಮತ್ತು ಧರ್ಮಪುರ ಕೆರೆಯಿಂದ ಕೆಲ ಹಳ್ಳಿಗಳಿಗೆ ನೀರಿನ ಯೋಜನೆಗೆ ಅನುದಾನ ಒದಗಿಸಲು ಸಚಿವ ಡಿ.ಸುಧಾಕರ್ ರವರು ಸಣ್ಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜೆಜಿ ಹಳ್ಳಿ ಭಾಗದ ಕೆರೆಗಳನ್ನು ತುಂಬಿಸಿ ಎಂದು 200ಕ್ಕೂ ಹೆಚ್ಚು ದಿನಗಳಿಂದ ಧರಣಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಸಚಿವ ಡಿ.ಸುಧಾಕರ್ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಮತ್ತೆ ನೀರಿನ ವಿಚಾರದಲ್ಲಿ ಬದ್ಧತೆ ತೋರಿದ್ದಾರೆ.

ಸದಾ ಬರಗಾಲಕ್ಕೆ ತುತ್ತಾಗುವ ಜೆಜಿ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಜನ ಜಮೀನುಗಳಿಗಿರಲಿ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪ್ರತಿವರ್ಷ ಪರದಾಡುತ್ತಾರೆ. ಟ್ಯಾಂಕರ್‌ಗಳ ಮೂಲಕ ತಿಂಗಳುಗಟ್ಟಲೇ ನೀರು ಹೊಡೆದು ಆ ಭಾಗದ ಜನರ ಕುಡಿಯುವ ನೀರಿನ ಬವಣೆ ನೀಗಿಸಬೇಕಿದೆ. ಹಾಗಾಗಿ ಆ ಭಾಗದ ರೈತರು, ಮುಖಂಡರು ಜೆಜಿ ಹಳ್ಳಿ ಹೋಬಳಿ ಭಾಗದ ಕೆರೆಗಳಿಗೆ ನೀರು ಹರಿಸಿ ಈ ಭಾಗದ ನೀರಿನ ಬರ ನೀಗಿಸಿ ಎಂದು ಶುರು ಮಾಡಿದ ಧರಣಿ 200 ದಿನ ದಾಟಿದೆ. ಈ ಹಿಂದೆ ಧರಣಿ ನಿರತರ ಸಭೆ ನಡೆಸಿದ್ದ ಸಚಿವರು, ಕಲ್ವಳ್ಳಿ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೊಟ್ಟ ಮಾತಿನಂತೆ ಇದೀಗ ಸಣ್ಣ ನೀರಾವರಿ ಸಚಿವರನ್ನು ಭೇಟಿಮಾಡಿ ನೀರು ಒದಗಿಸುವ ಯೋಜನೆಗೆ ಹಣ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ಜೆಜಿ ಹಳ್ಳಿ ಹೋಬಳಿ ಜನರ ನೀರಿನ ಹಾಹಾಕಾರವನ್ನು ಸವಿವರವಾಗಿ ಸಣ್ಣ ನೀರಾವರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಜೆಜಿ ಹಳ್ಳಿ ಹೋಬಳಿ ಭಾಗದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು ಜನ ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಆ ಭಾಗದಲ್ಲಿ 0.97 ಟಿಎಂಸಿ ಸಾಮರ್ಥ್ಯದ ಗಾಯಿತ್ರಿ ಜಲಾಶಯವಿದ್ದು ಸದರಿ ಜಲಾಶಯದಿಂದ 2035 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಆದರೆ 2022ನೇ ಸಾಲಿನಲ್ಲಿ ಹೊರತುಪಡಿಸಿ ಕಳೆದ 20ವರ್ಷಗಳಿಂದ ಆ ಭಾಗ ಮಳೆಯ ಕೊರತೆ ಅನುಭವಿಸುತ್ತಿದೆ. ನಿಗದಿತ ಪ್ರಮಾಣದ ಒಳಹರಿವು ಸಹ ಆ ಜಲಾಶಯಕ್ಕೆ ಇಲ್ಲದಂತಾಗಿದೆ. ಹಾಗಾಗಿ ಆ ಭಾಗದ ಕೆರೆಗಳನ್ನು ತುಂಬಿಸುವ ಅವಶ್ಯಕತೆ ಇದೆ. ತಾಲೂಕಿನ ಕೂನಿಕೆರೆ ಬಳಿ ವೇದಾವತಿ ನದಿಯಿಂದ ಗಾಯಿತ್ರಿ ಜಲಾಷಯ ಸೇರಿದಂತೆ ಇತರೆ 15ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೆ 2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ 225 ಕೋಟಿ ರು. ಅನುದಾನ ಮಂಜೂರು ಮಾಡಲು ಕೋರಿದ್ದಾರೆ. ಜೊತೆಗೆ ಧರ್ಮಪುರ ಹೋಬಳಿಯ ಧರ್ಮಪುರ ಕೆರೆಯಿಂದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು, ಅರಳಿಕೆರೆ, ಹೊಸಕೆರೆ ಮತ್ತು ಇತರೆ ಗೋಕಟ್ಟೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೂ ಸಹ 2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ 28 ಕೋಟಿ ರು.ಅನುದಾನ ಮಂಜೂರು ಮಾಡಲು ಮನವಿ ಮಾಡಿರುವ ಸಚಿವರು, ರೈತರ ಉಳಿವು ಮತ್ತು ಬೆಳವಣಿಗೆಗೆ ಆದ್ಯತೆ ನೀಡಿದ್ದಾರೆ.

ಸಣ್ಣ ನೀರಾವರಿ ಸಚಿವರು ಸಹ ಅನುದಾನ ಒದಗಿಸುವ ಭರವಸೆ ನೀಡಿದ್ದು, ಎರಡು ಹೋಬಳಿಗಳ ಜನರ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ದೊರೆಯುವ ಸೂಚನೆ ಸಿಕ್ಕಿದೆ.

ಸಚಿವರಿಂದ ಶಾಶ್ವತ ಪರಿಹಾರ ಒದಗಿಸುವ ನಿರ್ಧಾರ

ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ ಪ್ರತಿಕ್ರಿಯಿಸಿ ತಾಲೂಕಿನ ಜೆಜಿ ಹಳ್ಳಿ ಭಾಗದ ಜನರ ನೀರಿನ ಸಂಕಷ್ಟಗಳ ಬಗ್ಗೆ ಸದಾ ಯೋಚಿಸುತ್ತಿದ್ದ ಸಚಿವರು, ಶಾಶ್ವತ ಪರಿಹಾರ ಒದಗಿಸುವ ದೃಢ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಸಂಬಂಧಪಟ್ಟ ಸಣ್ಣ ನೀರಾವರಿ ಸಚಿವರಿಗೆ ಜೆಜಿ ಹಳ್ಳಿ ಮತ್ತು ಧರ್ಮಪುರ ಭಾಗದ ನೀರಿನ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದು, ಸಣ್ಣ ನೀರಾವರಿ ಸಚಿವರ ಕಡೆಯಿಂದಲೂ ಸಕಾರಾತ್ಮಕ ಉತ್ತರ ದೊರಕಿದೆ. ಜೆಜಿ ಹಳ್ಳಿ ಭಾಗದ ಕೆರೆಯ ನೀರಿನ ಯೋಜನೆಗೆ 225 ಕೋಟಿ ರು. ಹಾಗೂ ಧರ್ಮಪುರ ಕೆರೆಯಿಂದ ಕೆಲ ಹಳ್ಳಿಗಳ ನೀರಿಗೆ 28 ಕೋಟಿ ರು. ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಟೀಕೆಗಳನ್ನು ಬದಿಗಿಟ್ಟು ಕೆಲಸ ಮಾಡುವ ಅವರ ಗುಣ ಮತ್ತೊಮ್ಮೆ ಸಾಬೀತಾಗಿದೆ.