ಪಿಎಸ್ಐ ಎತ್ತಂಗಡಿ ಮಾಡುವ ಮನಸ್ಸು ಸಚಿವರಿಗಿಲ್ಲ

| Published : Nov 08 2024, 12:33 AM IST

ಸಾರಾಂಶ

ಪಿಎಸ್ಐ ಈರಪ್ಪ ರಿತ್ತಿ ಅವರನ್ನು ರಕ್ಷಿಸುವದಕ್ಕಾಗಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಬಡವರಿಗೆ ನೀವು ಮಾಡುತ್ತಿರುವ ಅನ್ಯಾಯ

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗಳು ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ಹಾಗೂ ಅತ್ಯಾಚಾರ ಎಸಗಿರುವ ಗುರುತರ ಆರೋಪಿಗಳು ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಹೇಶ ರೋಖಡೆ ಆರೋಪಿಸಿದರು.

ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗೋಸಾವಿ ಸಮಾಜದವರು ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ ಗೋಸಾವಿ ಸಮಾಜದ ಮಹಿಳೆಯರ ಹಾಗೂ ಯುವಕರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಿದ್ದಾರೆ. ಕಳೆದ 9 ದಿನಗಳಿಂದ ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿ ಎದುರು ಗೋಸಾವಿ ಸಮಾಜದ ಹಾಗೂ ಶ್ರೀರಾಮ ಸೇನೆ ಪ್ರತಿಭಟನೆ ನಡೆಸುತ್ತಿದ್ದರೂ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ರಕ್ಷಿಸುವದಕ್ಕಾಗಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಬಡವರಿಗೆ ನೀವು ಮಾಡುತ್ತಿರುವ ಅನ್ಯಾಯವಾಗಿದೆ.

ದುರ್ಗಾದೇವಿಯ ಮೆರವಣಿಗೆ ನಡೆಯುತ್ತಿರುವ ವೇಳೆ ಕೆಲ ಮುಸ್ಲಿಂ ಯುವಕರು ಗೋಸಾವಿ ಸಮಾಜದ ಯುವಕರೊಂದಿಗೆ ಜಗಳವಾಡಿ ಕೇಸರಿ ಶಾಲು ಹರಿದು ಹಾಕಿ ಅವಾಚ್ಯವಾಗಿ ನಿಂದಿಸಿದ್ದಾರೆ, ಬಗ್ಗೆ ಪೊಲೀಸ್‌ ಠಾಣೆಗೆ ತೆರಳಿ ದೂರು ಕೊಡಲು ಬಂದ ಗೋಸಾವಿ ಸಮಾಜದ ಅಮಾಯಕ ಮಹಿಳೆಯರ ಹಾಗೂ ಯುವಕರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೆ ಅವರ ಮೇಲೆ ಪ್ರಕರಣ ದಾಖಲಿಸಿ ಬೆದರಿಸುವ ಕಾರ್ಯ ನಡೆಸುತ್ತಿರುವ ಬಗ್ಗೆ ಶ್ರೀರಾಮ ಸೇನೆ ಹಾಗೂ ಗೋಸಾವಿ ಸಮಾಜದವರು ಕಳೆದ 9 ದಿನಗಳಿಂದ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಎಸ್ಪಿ ಅವರಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜದವರು ಮನವಿ ಸಲ್ಲಿಸಿದ್ದರೂ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ಎತ್ತಂಗಡಿ ಮಾಡುವ ಮನಸ್ಸು ಮಾಡಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಪಿಎಸ್ಐ ಈರಪ್ಪ ರಿತ್ತಿ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂಬುದು ಬಹಿರಂಗ ಸತ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರಿಗೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಪಿಎಸ್ಐ ಈರಪ್ಪ ರಿತ್ತಿ ನಡೆಸುತ್ತಿರುವ ದುರಾಡಳಿತ ಬಗ್ಗೆ ಮಾಹಿತಿ ಇಲ್ಲವೇ. ಇದ್ದರೂ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಕೂಡಲೆ ಈರಪ್ಪ ರಿತ್ತಿ ಅವರನ್ನು ಎತ್ತಂಗಡಿ ಮಾಡುವವರೆಗೆ ಶ್ರೀರಾಮ ಸೇನೆಯು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ನ. 11 ರಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈರಪ್ಪ ರಿತ್ತಿ ಅವರನ್ನು ಮನೆಗೆ ಕಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಪಿಎಸ್ಐ ಈರಪ್ಪ ರಿತ್ತಿ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಸಂಘಟನಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈರಪ್ಪ ರಿತ್ತಿ ಮಾಡುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಮಾಮೂಲಿ ವಿಷಯಗಳ ಮಾಹಿತಿ ನಮ್ಮ ಬಳಿ ಇವೆ. ಸಮಯ ಬಂದಾಗ ಅವುಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.

ಈ ವೇಳೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಸೋಮು ಗುಡಿ, ಬಸವರಾಜ ಕುರ್ತಕೋಟಿ, ಸತೀಶ್ ಕುಂಬಾರ, ಬಾಳಪ್ಪ ಗೋಸಾವಿ, ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಕಿರಣ್ ಚಿಲ್ಲೂರಮಠ, ಪ್ರಾಣೇಶ ವ್ಯಾಪಾರಿ. ಹರೀಶ್ ಗೋಸಾವಿ, ಬಾಳಾಬಾಯಿ ಗೋಸಾವಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.