ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವ ಜಾಗದ ವಿಷಯವಾಗಿ ಅಂತಿಮ ನಿರ್ಧಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವೇ ಹೊರತು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರಲ್ಲ ಎಂದು ಪರಿಷತ್ತಿನ ರಾಜ್ಯ ಕಾರ್‍ಯಕಾರಿ ಸಮಿತಿ ಸದಸ್ಯ ಡಾ.ಎಚ್.ಎಸ್.ಮುದ್ದೇಗೌಡ ತಿಳಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹೊರವಲಯದ ಸಂಜೋ ಆಸ್ಪತ್ರೆ ಬಳಿ ಸಮ್ಮೇಳನ ನಡೆಯುವ ಜಾಗದ ಜೊತೆಗೆ ಸಮಿತಿಗಳ ರಚನೆ, ಅವುಗಳ ಜವಾಬ್ದಾರಿ ವಿಷಯದಲ್ಲೂ ರಾಜ್ಯಾಧ್ಯಕ್ಷರ ಪಾತ್ರವಿಲ್ಲ. ವಿನಾಕಾರಣ ಅವರನ್ನು ಗೊಂದಲಗಳಿಗೆ ಸಿಲುಕಿಸುವ ಪ್ರಯತ್ನ ಹಲವರಿಂದ ನಡೆಯುತ್ತಿದೆ ಎಂದು ದೂರಿದರು.
ಸಮ್ಮೇಳನಕ್ಕೆ ಬೇಕಾದ ಸುಮಾರು 900 ಮಳಿಗೆ, ಊಟಕ್ಕೆ ದೊಡ್ಡ ಸ್ಥಳ, ಮುಖ್ಯ ವೇದಿಕೆ, ಎರಡು ಸಮನಾಂತರ ವೇದಿಕೆ, ಪಾರ್ಕಿಂಗ್ ವ್ಯವಸ್ಥೆಗೆ ಒದಗಿಸುವಷ್ಟು ದೊಡ್ಡ ಸ್ಥಳ ನಗರದಲ್ಲಿ ಇಲ್ಲದ ಕಾರಣ ನಗರದ ಹೊರಗಿನ ಸ್ಥಳವನ್ನು ಆಯ್ಕೆ ಮಾಡುವುದು ಅನಿವಾರ್‍ಯವಾಗಿತ್ತು ಎಂದು ಹೇಳಿದರು.ಇದಕ್ಕೂ ಮುನ್ನ ಚಿಕ್ಕಮಂಡ್ಯ ಬಳಿಯೂ ಜಾಗವನ್ನು ನೋಡಲಾಯಿತು. ಆದರೆ, ತಾಂತ್ರಿಕ ಸಮಿತಿ ಅದನ್ನು ತಿರಸ್ಕರಿಸಿತು. ಹಾಗಾಗಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಹೊರವಲಯದ ಜಾಗವೇ ಸೂಕ್ತವೆಂದು ಜಾಗದ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದ್ದಾರೆ. ಇದರಲ್ಲಿ ಜೋಷಿಯವರ ಪಾತ್ರವೇನು? ಎಂದು ಪ್ರಶ್ನಿಸಿದರು.
ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಅವರದ್ದೇ ಆದ ಗೌರವವಿದೆ. ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು. ಏಕ ವಚನದಲ್ಲಿ ಮಾತನಾಡುವುದು, ಅವರನ್ನೇ ಗುರಿಯಾಗಿಸಿಕೊಂಡು ದೂಷಿಸುವ ಕೆಲಸ ಮಾಡಬಾರದು. ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 30 ಕೋಟಿ ರು. ನೀಡುವುದಾಗಿ ಹೇಳಿದ್ದು, ಸಮ್ಮೇಳನ ಮುಗಿದ ನಂತರ ಆದ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಕೊಟ್ಟು ಉಳಿದ ಹಣವನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ ಎಂದರು.ಜಿಲ್ಲಾಡಳಿತ ಆ ಹಣದಿಂದ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕೆಂಬುದನ್ನು ನಿರ್ಧರಿಸುತ್ತದೆ. ಸಮ್ಮೇಳನ ನಡೆಯುವ ಮುನ್ನವೇ ಎಷ್ಟು ಹಣ ಉಳಿಸುತ್ತೀರಿ ಎಂದು ಹೇಳಲು ಹೇಗೆ ಸಾಧ್ಯ ಎಂದು ಪರೋಕ್ಷವಾಗಿ ಪ್ರೊ. ಜಯಪ್ರಕಾಶಗೌಡರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರರನ್ನು ಏಕೆ ಪರಿಗಣಿಸಬಾರದು ಎಂದಷ್ಟೇ ಹೇಳಿದ್ದಾರೆಯೇ ಹೊರತು ಅವರನ್ನೇ ಆಯ್ಕೆ ಮಾಡಬೇಕು ಎಂದೇನೂ ಹೇಳಿಲ್ಲ. ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಾಧ್ಯಕ್ಷರಿಗಿಲ್ಲ. ಅವರ ಹೇಳಿಕೆ ಅಕ್ಷಮ್ಯ ಎಂದು ನಾನೇ ಹೇಳಿದ್ದೇನೆ. ಈಗ ಈ ವಿಚಾರ ಅಪ್ರಸ್ತುತವಾಗಿದೆ. ಮತ್ತೆ ಅದನ್ನು ಪ್ರಸ್ತಾಪಿಸದಂತೆ ಮನವಿ ಮಾಡಿದರು.ಚುನಾವಣಾ ಪೂರ್ವದಲ್ಲಿ ಮಹೇಶ್ ಜೋಷಿ ಮಂಡ್ಯಕ್ಕೆ ಸಮ್ಮೇಳನ ತರುವುದಾಗಿ ಹೇಳಿಕೆ ಕೊಟ್ಟು ಅಂದರಂತೆ ತಾವಾಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಸಮ್ಮೇಳನದ ಬಗ್ಗೆ ಟೀಕೆ, ಟಿಪ್ಪಣಿಗಳು ಬರುತ್ತಿದ್ದು, ಅದು ಹಿತವಲ್ಲ. ಅದರ ಅಗತ್ಯವೂ ಇಲ್ಲ ಎಂದು ತಿಳಿಸಿದರು.
ಪುಸ್ತಕ ಪ್ರಕಟಣಾ ಸಮಿತಿ ಅಧ್ಯಕ್ಷನಾಗಿರುವ ನಾನು, ಹಲವು ಸಾಹಿತಿಗಳಿಗೆ ಪುಸ್ತಕ ಪ್ರಕಟಣೆಗಾಗಿ ಕೃತಿಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದೇವೆ. 87 ಪುಸ್ತಕ ಪ್ರಕಟಣೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆದರೆ, ಈವರೆಗೆ ಬಂದಿರುವುದು ಕೇವಲ ೨೮ ಕೃತಿಗಳು ಮಾತ್ರ. ಪರಿಷತ್ತು ಪ್ರಕಟ ಮಾಡುವ ಪುಸ್ತಕಗಳಲ್ಲಿ ಪದಾಧಿಕಾರಿಗಳ ಪುಸ್ತಕ ಪ್ರಕಟ ಮಾಡದಂತೆ ಮಹೇಶ್ ಜೋಷಿಯವರು ಕಟುವಾದ ನಿರ್ಣಯ ಕೈಗೊಂಡರು ಎಂದರು.ಈ ಹಿಂದಿನ ಸಮ್ಮೇಳನದಲ್ಲಿ ಪುಸ್ತಕ ಪ್ರಕಟಣೆಯಲ್ಲಿ ರಾಜ್ಯಾಧ್ಯಕ್ಷರ ಭಾವಚಿತ್ರ ಮುದ್ರಿಸಿರುವುದು ತಪ್ಪು. ಅದನ್ನು ಬದಲಾಯಿಸುತ್ತಿದ್ದೇವೆ. ಈ ವಿಚಾರವಾಗಿ ಮಾತನಾಡುವ ಅಗತ್ಯವೂ ಇಲ್ಲ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಸಂಚಾಲಕಿ ಮೀರ ಶಿವಲಿಂಗಯ್ಯ, ಹರ್ಷ ಪಣ್ಣೇದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಅಪ್ಪಾಜಪ್ಪ, ಚಂದ್ರಲಿಂಗು, ಸುಜಾತ ಕೃಷ್ಣ ಇದ್ದರು.ಜಗದೀಶ್ ಕೊಪ್ಪ ವರ್ತನೆ ಸರಿಯಲ್ಲ: ಮಂಡ್ಯ ಸಮ್ಮೇಳವನ್ನು ಬಹಿಷ್ಕರಿಸುವ ಮೂಲಕ ಜಗದೀಶ್ ಕೊಪ್ಪ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಮ್ಮೇಳನ ಯಶಸ್ವಿಗೊಳಿಸಲು ದುಡಿಯುತ್ತಿರುವ ಶ್ರಮಕ್ಕೆ ನೀರು ಚೆಲ್ಲುತ್ತಿದ್ದಾರೆ. ಮಂಡ್ಯ ಸಮ್ಮೇಳನವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಮಹೇಶ್ ಜೋಷಿ ಅವರನ್ನು ಏಕ ವಚನದಲ್ಲಿ ಜರಿದಿರುವುದು ಸರಿಯಲ್ಲ ಎಂದು ಟೀಕಿಸಿದರು.
ಸಮ್ಮೇಳನದ ಹಲವು ವಿಷಯಗಳ ಚರ್ಚೆ ಸಂಬಂಧ ಜಿಲ್ಲೆಯ ಸಾಹಿತಿಗಳ ಸಭೆಯನ್ನು ಈ ಹಿಂದೆ ಕರೆಯಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೇ ಹಾಜರಿದ್ದು ಸಭೆಯಲ್ಲಿ ಸಲಹೆ, ವಿಚಾರಗಳನ್ನು ಚರ್ಚಿಸದೇ ಜಗದೀಶ್ ಕೊಪ್ಪ ಸಭೆಯನ್ನು ವಿರೋಧಿಸುತ್ತೇನೆ ಎಂದು ಹೊರಟರು ಎಂದು ತಿಳಿಸಿದರು.ರಾಜ್ಯಾಧ್ಯಕ್ಷರು ವಿದೇಶಕ್ಕೆ ಹೋಗಿದ್ದು ಪ್ರವಾಸದ ಉದ್ದೇಶಕ್ಕಲ್ಲ. ಅಲ್ಲಿರುವ ಕನ್ನಡಿಗರನ್ನು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಬೇಕೆಂಬ ಉದ್ದೇಶದಿಂದ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ತೆರಳಿದ್ದರು. ಅದಕ್ಕೆ ಪರಿಷತ್ತಿನ ಹಣ ಬಳಕೆ ಮಾಡಿಕೊಂಡಿಲ್ಲ. ಇದರಲ್ಲೂ ಹಲವರು ಕೊಂಕು ಹುಡುಕುತ್ತಾರೆ. ವಿದೇಶಿ ಕನ್ನಡಿಗರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬಾರದೇ, ಅವರನ್ನು ಆಹ್ವಾನಿಸುವುದು ತಪ್ಪೇ?
ಡಾ.ಎಚ್.ಎಸ್.ಮುದ್ದೇಗೌಡ, ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ