The minister rushed to the hospital after hearing the news of the accident.
ದಾವಣಗೆರೆ: ವರಮಹಾಲಕ್ಷ್ಮೀ ಹಬ್ಬ ಮುಗಿಸಿಕೊಂಡು ತವರು ಮನೆಯಿಂದ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಆನಗೋಡು ಸಮೀಪದ ಆರಾಧ್ಯ ಫ್ಯಾಕ್ಟರಿ ಬಳಿ ನಡೆದಿದೆ.
ಆನಗೋಡು ಗ್ರಾಮದ ಲಕ್ಷ್ಮೀ (28) ಮೃತಪಟ್ಟ ಮಹಿಳೆ. ಅಪಘಾತದಲ್ಲಿ ಮೃತಳ ತಂದೆ ಕೃಷ್ಣಪ್ಪ (62) ಗಂಭೀರವಾಗಿ ಗಾಯಗೊಂಡಿದ್ದು, ಪುತ್ರಿ ಶರಣ್ಯ (5) ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ವರಮಹಾಲಕ್ಷ್ಮೀ ಹಬ್ಬ ಆಚರಿಸಲು ತವರು ಮನೆಯಾದ ಚಿತ್ರದುರ್ಗಕ್ಕೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ತಂದೆಯ ಜೊತೆಗೆ ಬೈಕ್ ನಲ್ಲಿ ಗಂಡನ ಮನೆ ಆನಗೋಡಿಗೆ ಬರುತ್ತಿದ್ದಾಗ ಸಮೀಪದ ಆರಾಧ್ಯ ಫ್ಯಾಕ್ಟರಿ ಬಳಿ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸ ಮೊಟಕು: ಕ್ಷೇತ್ರದ ಮಹಿಳೆಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯೂರಿನ ಪ್ರವಾಸದಲ್ಲಿದ್ದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ದಾವಣಗೆರೆಗೆ ಧಾವಿಸಿ, ಆಸ್ಪತ್ರೆಗೆ ಭೇಟಿ ನೀಡಿಗಾಯಾಳುಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು. ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಿದರು.ಮೃತ ಮಹಿಳೆಯ ಕುಟುಂಬದ ಪರಿಸ್ಥಿತಿಯನ್ನು ವಿಚಾರಿಸಿದ ಸಚಿವರು, ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಬಳಿಕ ಮೃತಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ದುಃಖದ ಸಂದರ್ಭದಲ್ಲಿ ಸರ್ಕಾರ ಹಾಗೂ ತಾವು ಕುಟುಂಬದೊಂದಿಗೆ ಇರುವುದಾಗಿ ಧೈರ್ಯ ತುಂಬಿದರು.
ಅಪಘಾತದ ಸುದ್ದಿ ತಿಳಿದ ತಕ್ಷಣ ತಮ್ಮ ಅಧಿಕೃತ ಪ್ರವಾಸವನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿ, ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಬಸವಂತಪ್ಪ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ..........
ಫೋಟೊ: 23ಕೆಡಿವಿಜಿ39ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಘಾತ ಸುದ್ದಿ ತಿಳಿದು ಸಚಿವ ಕೆ.ಎಸ್.ಬಸವಂತಪ್ಪ ಹಿರಿಯೂರು ಪ್ರವಾಸ ಮೊಟಕುಗೊಳಿಸಿ ದಾವಣಗೆರೆಗೆ ಆಗಮಿಸಿ ಮೃತ ಪಟ್ಟ ಮಹಿಳೆಯ ಕುಟುಂಬದವರಿಗೆ ಸಾಂತ್ವನ ಹೇಳಿದರು.