ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರವಾಲ್ಮೀಕಿ ನಿಗಮದ ಅವ್ಯವಹಾರವು ಪರಿಶಿಷ್ಟ ಪಂಗಡಕ್ಕೆ ಮಾಡಿರುವ ಮಹಾ ಅನ್ಯಾಯ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲು ದರೋಡೆಯಾಗಿದೆ. ನಿಗಮದ ಹಗರಣಕ್ಕೆ ಸಂಬಂಧಿಸಿದ ಸಚಿವರಿಂದ ಕೂಡಲೇ ರಾಜೀನಾಮೆ ಪಡೆದು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ(ಭುಯ್ಯಾರ) ಆಗ್ರಹಿಸಿದರು.
ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣ ಇದಾಗಿದ್ದು, ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಹಾಗೂ ಸಚಿವ ನಾಗೇಂದ್ರರನ್ನು ವಜಾಗೊಳಿಸದಿದ್ದರೇ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ವಿಚಾರದಲ್ಲಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಉಗ್ರ ಹೋರಾಟ ನಡೆಸಲಿದ್ದು, ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರು ಹೋರಾಟದ ರೂಪುರೇಷೆ ರೂಪಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರೊಬ್ಬರು ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರ ಹೆಸರು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಾಗ ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾರದರ್ಶಕ ತನಿಖೆಗೆ ಸಹಕರಿಸಿದ್ದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಚಂದ್ರಶೇಖರನ್ ಆತಹತ್ಯೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಮೃತ ಚಂದ್ರಶೇಖರನ್ ಬರೆದಿರುವ ಡೆತ್ ನೋಟ್‌ನಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡದೇ ಇಲಾಖೆಯಲ್ಲಿ ಮುಂದವರೆದರೇ ರಾಜ್ಯಾದ್ಯಂತ ಎಸ್ಟಿ ಮೋರ್ಚಾದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎ.ರಾಜಶೇಖರ್ ನೀಡಿದ ದೂರಿನನ್ವಯ 6 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಸಚಿವರ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಡೆತ್‌ನೋಟ್ ಬರೆದಿದ್ದಾರೆ. ಆದರೆ, ಸಚಿವರ ಹೆಸರನ್ನು ಬಿಟ್ಟು ಉಳಿದವರ ವಿರುದ್ಧ ಮಾತ್ರ ಎಫ್‌ಐಆರ್‌ನಲ್ಲಿ ದಾಖಲು ಮಾಡಿರುವುದರ ಹಿಂದೆ ಸರ್ಕಾರ ಇದೆ ಎಂಬುವುದು ಸ್ಪಷ್ಟವಾಗಿದೆ. ಅವ್ಯವಹಾರದ ಹಗರಣಕ್ಕೆ ರಾಜ್ಯವೇ ನೇರ ಹೊಣೆಯಾಗಿದ್ದರೂ ಮುಖ್ಯಮಂತ್ರಿಗಳು ಇದರ ಬಗ್ಗೆ ಧ್ವನಿ ಎತ್ತದಿರುವುದು ನೋಡಿದರೇ ಸಚಿವರ ರಕ್ಷಣೆ ನಿಂತಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದರು.ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರ್ ದೂರು ನೀಡಿದ್ದು, ಬ್ಯಾಂಕ್‌ನಿಂದ ಓವರ್ ಡ್ರಾಫ್ಟ್ ಸೌಲಭ್ಯ ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ನಿಗಮದ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ನಿಗಮದ ಯಾವುದೇ ಅಧಿಕಾರಿಗಳ ಉಪಸ್ಥಿತಿ ಇಲ್ಲದೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಭೌತಿಕ ಪರಿಶೀಲನೆ ಇಲ್ಲದೇ ಹಣ ವರ್ಗಾವಣೆ ನಡೆಸಲಾಗಿದೆ ತಿಳಿಸಿದ್ದಾರೆ. ಈ ಅಕ್ರಮಕ್ಕೆ ಬ್ಯಾಂಕಿನ ಸಿಇಒ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರುಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣವಾಗಿದ್ದರಿಂದ ಸಮಗ್ರ ತನಿಖೆಯಾಗಬೇಕು. ನಿಗಮದ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಬ್ಯಾಂಕಿನ ಉನ್ನತ ಆಡಳಿತ ವರ್ಗದ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
---------------ಪ್ರಕರಣದ ಕುರಿತಂತೆ ಸರ್ಕಾರ ಎಫ್‌ಐಆರ್ ದಾಖಲಿಸುವ ಮುನ್ನವೇ ಸಿಐಡಿ ತನಿಖೆಗೆ ಆದೇಶಿಸಿದೆ. ಸಮಗ್ರ, ನಿಷ್ಪಕ್ಷಪಾತ ತನಿಖೆಗಾಗಿ ಕೇಂದ್ರ ಸರ್ಕಾರದ ಏಜೆನ್ಸಿಗಳ ಮೂಲಕ ತನಿಖೆಯಾಗಬೇಕು. ಸಿಬಿಐ ಕಚೇರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದಲೇ ತನಿಖೆ ನಡೆಯಬೇಕು.
- ರವಿ ವಗ್ಗೆ(ಭುಯ್ಯಾರ), ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷರು.