ಸಾರಾಂಶ
ಹಾವೇರಿ:ಇಲ್ಲಿಯ ತಹಸೀಲ್ದಾರ್ ಕಚೇರಿ, ಎಸಿ ಕಚೇರಿ, ಉಪನೋಂದಣಾಧಿಕಾರಿ, ಭೂಮಾಪನ ಇಲಾಖೆ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಅಲ್ಲಿನ ಅವ್ಯವಸ್ಥೆ ಕಂಡು ದಂಗಾದರು. ಒಂದು ತಿಂಗಳೊಳಗೆ ವ್ಯವಸ್ಥೆ ಸರಿಪಡಿಸದಿದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಕಚೇರಿ, ಭೂಮಾಪನಾ ಇಲಾಖೆ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಹರಿದುಬಂದವು. ಕಚೇರಿಗೆ ಬಂದಿದ್ದ ಸಾರ್ವಜನಿಕರ ಅಹವಾಲು ಕೇಳಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ವಿವರಣೆ ಕೇಳಿದರು.ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆಸಬೇಡಿ, ತಕ್ಷಣ ಅವರ ಕೆಲಸ ಮಾಡಿಕೊಡಿ, ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಯಾವ ಯಾವ ಸಿಬ್ಬಂದಿ ಎಷ್ಟು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ? ಸಾರ್ವಜನಿಕರಿಂದ ಯಾವ ಕಾರಣಕ್ಕೆ ದೂರುಗಳು ಬರುತ್ತಿವೆ? ನಿಮ್ಮ ಕೆಲಸ ಏನು? ದಾಖಲೆಗಳನ್ನು ಏಕೆ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬೆಳೆ ವಿವರಣೆಯನ್ನು ಪಹಣಿ ಪತ್ರದಲ್ಲಿ ಸರಿಪಡಿಸಲು ರಾಣಿಬೆನ್ನೂರು ತಹಸೀಲ್ದಾರ್‌ಗೆ ಅರ್ಜಿ ಕೊಟ್ಟರೆ ಅಲ್ಲಿ ತೆಗೆದುಕೊಳ್ಳಲಿಲ್ಲ, ಹೀಗಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ರೈತರೊಬ್ಬರು ಸಚಿವರ ಗಮನಕ್ಕೆ ತಂದರು. ತಕ್ಷಣ ಸಂಬಂಧಪಟ್ಟ ಸಿಬ್ಬಂದಿಯನ್ನು ಕರೆದು ವಿಚಾರಣೆ ಮಾಡಿದರು. ಉಪವಿಭಾಗಾಧಿಕಾರಿಯನ್ನೂ ಕರೆದು ರಾಣಿಬೆನ್ನೂರು ತಹಸೀಲ್ದಾರ್ ಕಚೇರಿ ನಿಮ್ಮ ಅಧೀನದಲ್ಲಿಯೇ ಬರಲಿದೆ. ಈ ಬಗ್ಗೆ ಏಕೆ ಗಮನ ಹರಿಸಲಿಲ್ಲ ಎಂದು ತರಾಟೆ ತೆಗೆದುಕೊಂಡರು.
ಭೂಮಾಪನಾ ಇಲಾಖೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ರೈತ ಸಂಘದ ಮುಖಂಡರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಸಚಿವರಿಗೆ ದೂರಿದರು. ರೈತ ಸಂಘದ ಮುಖಂಡರು ಕೊಟ್ಟ ಅರ್ಜಿ ಇನ್‍ವಾರ್ಡ್ ಆಗಿರುವ ಬಗ್ಗೆ ಮಾಹಿತಿ ಕೇಳಿದರು. ಆದರೆ ದಾಖಲಾಗದ್ದಕ್ಕೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.ಐಎಂಪಿ ಪ್ರಕರಣಗಳು ಎಷ್ಟು ಮಾಡುತ್ತೀರಿ? ಎಂದು ಸಚಿವರು ಭೂಮಾಪನಾ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ನೂರು ಅರ್ಜಿ ಬರುತ್ತವೆ. 80 ವಿಲೇವಾರಿ ಮಾಡುತ್ತೇವೆ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು. ಆದರೆ ವಿಲೇವಾರಿ ಮಾಡಿದ ಬಗ್ಗೆ ದಾಖಲೆ ಕೊಡಲಿಲ್ಲ. ಅವ್ಯವಸ್ಥೆಯ ಬಗ್ಗೆ ವರದಿ ಕೊಡಿ ಎಂದು ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದರು.ಆಧಾರ್ ಕಾರ್ಡ್ ತಿದ್ದುಪಡಿ ಸರಿಯಾಗುತ್ತಿಲ್ಲ, ತಿದ್ದುಪಡಿ ಮಾಡಿಸಿದರೂ ಮತ್ತೆ ಅದೇ ಲೋಪಗಳು ಬರುತ್ತಿವೆ. ಪಡಿತರ ಚೀಟಿಗಳು ಐದು ವರ್ಷಗಳಿಂದ ಪೆಂಡಿಂಗ್ ಇವೆ. ಬೆಳೆ ವಿಮೆ ಬಿಡುಗಡೆಯಾಗಿಲ್ಲ. ಸಾಮಾಜಿಕ ಯೋಜನೆಯ ಪಿಂಚಣಿ ಸಕಾಲಕ್ಕೆ ಬರುತ್ತಿಲ್ಲ ಎಂಬ ದೂರುಗಳು ಬಂದವು.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು, ಇನ್ನು ಮುಂದೆ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ದೂರುಗಳು ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಶಂಕರ್, ಎಡಿಎಲ್‍ಆರ್ ನಾಗರಾಜ ಚಕ್ರಸಾಲಿ, ಉಪನೋಂದಣಾಧಿಕಾರಿ ವಿದ್ಯಾಸಾಗರ ದೇವರುಷಿ ಇತರರು ಇದ್ದರು.ಸಿಕ್ಕಿಬಿದ್ದ ಮಧ್ಯವರ್ತಿ: ಉಪನೋಂದಣಾಧಿಕಾರಿ ಕಚೇರಿಗೆ ಸಚಿವರು ಭೇಟಿ ನೀಡಿದಾಗ ಕಚೇರಿಯಲ್ಲೇ ಮಧ್ಯವರ್ತಿಯೊಬ್ಬರು ಸಿಕ್ಕುಬಿದ್ದರು. ಅವರು ಯಾರು ಎಂದು ಸಚಿವರು ಪ್ರಶ್ನೆ ಮಾಡಿದಾಗ ಅಧಿಕಾರಿಗಳು ಉತ್ತರ ನೀಡಲು ತಡವರಿಸಿದರು. ಕಚೇರಿ ಸ್ವಚ್ಛಗೊಳಿಸುವ ಸಿಬ್ಬಂದಿ, ಟೀ ತರಲು ಇದ್ದಾರೆ ಎಂದು ಅಧಿಕಾರಿ ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು. ಸಚಿವರು ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಎಲ್ಲರೂ ಗುರುತಿನ ಚೀಟಿ ಧರಿಸಿದರು. ಆದರೆ ಮಧ್ಯವರ್ತಿಗೆ ಗುರುತಿನ ಚೀಟಿ ಇರಲಿಲ್ಲ. ತಕ್ಷಣ ಸಚಿವರು ಆತನನ್ನು ಕಚೇರಿಯಿಂದ ಹೊರಗೆ ಕಳುಹಿಸಿದರು.ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಕಚೇರಿಯೊಳಗೆ ಬಿಟ್ಟುಕೊಳ್ಳಬಾರದು. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇನ್ನು ಮುಂದೆ ಇಂತಹ ದೂರುಗಳಿಗೆ ಅವಕಾಶ ಇರಬಾರದು ಎಂದು ಎಚ್ಚರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))