ಅಕ್ರಮ ಸಂಬಂಧಕ್ಕೆ ಬೇಸತ್ತು ಮಗು ಅಪಹರಿಸಿದ ಅಪ್ರಾಪ್ತ!

| Published : Oct 28 2024, 12:51 AM IST

ಸಾರಾಂಶ

ತನ್ನ ಅಕ್ಕನ ಅಕ್ರಮ ಸಂಬಂಧದಿಂದ ರೋಸಿಹೋದ ಅಪ್ರಾಪ್ತನೊಬ್ಬ ಆಕೆಯ ಮಗುವನ್ನು ಅಪಹರಿಸಿ, ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ, ದಾವಣಗೆರೆ ರೈಲ್ವೆ ಪೊಲೀಸರು ಮಗು ಹಾಗೂ ಅಪಹರಣ ಕೃತ್ಯ ಎಸಗಿದ ಅಪ್ರಾಪ್ತನನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.

- ಬೆಂಗಳೂರಿನಿಂದ ನಿಜಾಮುದ್ದೀನ್‌ ರೈಲಿನಲ್ಲಿ ಪ್ರಯಾಣ ವೇಳೆ ದಾವಣಗೆರೆಯಲ್ಲಿ ಪೊಲೀಸರ ಅತಿಥಿ

- - -

- ಬೆಂಗಳೂರು ಪೊಲೀಸರ ಮಾಹಿತಿ ಮೇರೆಗೆ ದಾವಣಗೆರೆಯಲ್ಲಿ ಅಪ್ರಾಪ್ತ-ಮಗು ಪೊಲೀಸರ ವಶ

- 3 ವರ್ಷದ ಗಂಡುಮಗು ಎತ್ತಿಕೊಂಡು ತನ್ನ ರಾಜ್ಯಕ್ಕೆ ಪ್ರಯಾಣಿಸುತ್ತಿದ್ದ 17 ವರ್ಷದ ಅಪ್ರಾಪ್ತ

- ದಾವಣಗೆರೆ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್‌ ಎ.ಕೆ.ರೆಡ್ಡಿ-ಸಿಬ್ಬಂದಿ ತಂಡದಿಂದ ಕಾರ್ಯಾಚರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ತನ್ನ ಅಕ್ಕನ ಅಕ್ರಮ ಸಂಬಂಧದಿಂದ ರೋಸಿಹೋದ ಅಪ್ರಾಪ್ತನೊಬ್ಬ ಆಕೆಯ ಮಗುವನ್ನು ಅಪಹರಿಸಿ, ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ, ದಾವಣಗೆರೆ ರೈಲ್ವೆ ಪೊಲೀಸರು ಮಗು ಹಾಗೂ ಅಪಹರಣ ಕೃತ್ಯ ಎಸಗಿದ ಅಪ್ರಾಪ್ತನನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.

3 ವರ್ಷದ ಮಗು ಅಪಹರಿಸಿದ ಅಪ್ರಾಪ್ತನಿಗೆ 17 ವರ್ಷವಾಗಿದೆ. ಬೆಂಗಳೂರಿನಿಂದ ಅಕ್ಕನ ಗಂಡು ಮಗು ಅಪಹರಿಸಿ, ನಿಜಾಮುದ್ದೀನ್ ರೈಲಿನಲ್ಲಿ ಹೊರಟಿದ್ದ. ಈ ಬಗ್ಗೆ ಬೆಂಗಳೂರು ಪೊಲೀಸರು ದಾವಣಗೆರೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ರೈಲು ದಾವಣಗೆರೆಯ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮಗುವಿನ ಸಮೇತ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದರು.

ಅಪ್ರಾಪ್ತನ ಅಕ್ಕ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸ ಮಾಡುತ್ತಿದ್ದಳು. ಆಕೆಯು ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿ, ವಾಸಿಸುತ್ತಿದ್ದಳು. ಈ ಹಿನ್ನೆಲೆ ಆಕೆಯ ಸಹೋದರನಾದ ಅಪ್ರಾಪ್ತನು ಸಾಕಷ್ಟು ತಿಳಿಹೇಳಿ, ಬುದ್ಧಿ ಹೇಳಿದ್ದಾನೆ. ಆದರೂ, ಅಕ್ರಮ ಸಂಬಂಧ ಬಿಡಲು ಆಕೆ ಒಪ್ಪಲಿಲ್ಲ. ಹಾಗಾಗಿ ಅಪ್ರಾಪ್ತನು ಅಕ್ಕನ 3 ವರ್ಷದ ಮಗುವನ್ನು ಎತ್ತಿಕೊಂಡು, ರೈಲಿನಲ್ಲಿ ತನ್ನ ರಾಜ್ಯಕ್ಕೆ ಹೊರಟಿದ್ದನು. ದಾವಣಗೆರೆ ನಿಲ್ದಾಣಕ್ಕೆ ರೈಲು ಬಂದ ತಕ್ಷಣ, ಪೊಲೀಸರು ರೈಲನ್ನೇರಿ ತಪಾಸಣೆ ಮಾಡಿದರು. ಆಗ, 3 ವರ್ಷದ ಮಗುವಿನ ಸಮೇತ ಇದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದರು. ಮಗು ಬಗ್ಗೆ ವಿಚಾರಿಸಿದಾಗ, ಅದು ತನ್ನ ಅಕ್ಕನ ಮಗುವಾಗಿದ್ದು, ಆಕೆ ಬೇರೊಬ್ಬನ ಜತೆ ಹೊಂದಿದ್ದ ಅಕ್ರಮ ಸಂಬಂಧ ತ್ಯಜಿಸಲಿಲ್ಲ. ಸಾಕಷ್ಟು ತಿಳಿಹೇಳಿ ಬೇಡಿಕೊಂಡರೂ ಕೇಳಲಿಲ್ಲ. ಆದಕಾರಣಕ್ಕೆ ಅಕ್ಕನ ಮಗುವನ್ನು ಎತ್ತಿಕೊಂಡು, ತಮ್ಮ ಊರಿಗೆ ಹೊರಟಿದ್ದೇನೆ ಎಂದು ನಡೆದ ಘಟನೆಯನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ರೈಲಿನಲ್ಲಿ ಅಪ್ರಾಪ್ತ ಹಾಗೂ ಆತನೊಂದಿಗಿದ್ದ ಮಗುವನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಮಗು ಹಾಗೂ ಅಪ್ರಾಪ್ತನನ್ನು ಪೊಲೀಸರು ಬಾಲಕರ ಬಾಲ ಮಂದಿರಕ್ಕೆ ಹಸ್ತಾಂತರಿಸುತ್ತಾರೋ, ಬೆಂಗಳೂರು ಪೊಲೀಸರ ವಶಕ್ಕೆ ನೀಡುತ್ತಾರೋ ಎಂಬುದು ಕಾದುನೋಡಬೇಕಿದೆ.

ದಾವಣಗೆರೆ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್‌ ಎ.ಕೆ.ರೆಡ್ಡಿ, ಸಿಬ್ಬಂದಿ ಶಿವಾನಂದ, ಅಮಿತ್, ಬಿಂದು, ಮಾಧುರಿ ಅವರಿದ್ದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

- - - -27ಕೆಡಿವಿಜಿ1, 2: ದಾವಣಗೆರೆ ರೈಲ್ವೆ ನಿಲ್ದಾಣದ ಒಂದು ಹೊರ ದೃಶ್ಯ.