ಸಾರಾಂಶ
ನ್ಯಾಯ, ಸತ್ಯ, ಕಾಯಕದ ಹಾದಿಯಲ್ಲಿ ಸಾಗುವುದೇ ಧರ್ಮದ ಧ್ಯೇಯ.
ನೂತನ ಬನ್ನಿಕಟ್ಟೆ ನಿರ್ಮಾಣದ ಪೂಜೆ, ನಾಗರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಕನೂರುನ್ಯಾಯ, ಸತ್ಯ, ಕಾಯಕದ ಹಾದಿಯಲ್ಲಿ ಸಾಗುವುದೇ ಧರ್ಮದ ಧ್ಯೇಯ ಎಂದು ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಮಹಾಮಾಯಾ ನಗರದಲ್ಲಿ ನೂತನ ಬನ್ನಿಕಟ್ಟೆ ನಿರ್ಮಾಣದ ಪೂಜೆ ಹಾಗೂ ನಾಗರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಹಬ್ಬಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಮನೆ ಕುಟುಂಬ ಸದಸ್ಯರ ಮಧ್ಯೆ, ಕುಟುಂಬ ಕುಟುಂಬಗಳ ಮಧ್ಯೆ, ಕಾಲನಿಗಳ ಮಧ್ಯೆ ಉತ್ತಮ ಬೇಸುಗೆ ಉಂಟು ಮಾಡುತ್ತವೆ. ದೇವರ ನಾಮದಲ್ಲಿ ನಿತ್ಯ ಪೂಜೆ ಮಾಡುತ್ತಾ ಸಾಗಿದರೆ ಭಕ್ತಿ ಪ್ರಾಪ್ತವಾಗುತ್ತದೆ. ಭಕ್ತಿಯಿಂದ ಮನುಷ್ಯನ ಮನಸ್ಸು ಹಗುರವಾಗಿರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಭಕ್ತಿ ಮಾರ್ಗದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಮನುಷ್ಯ ಸತ್ಸಂಗದ ಹಾದಿಯಲ್ಲಿ ಸಾಗಿದರೆ ಅವನ ಬದುಕು ಸಾರ್ಥಕ ಆಗುತ್ತದೆ. ನೆರೆಹೊರೆಯವರಿಗೆ ಎಲ್ಲರಿಗೂ ಪ್ರೀತಿಯಿಂದ ಕಾಣಬೇಕು. ಯಾರನ್ನೂ ದ್ವೇಷ, ಅಸೂಯೆಯಿಂದ ನೋಡಬಾರದು. ನಾಗರ ಮೂರ್ತಿ ಪ್ರತಿಷ್ಠಾಪನೆ ಆದ ನಂತರ ನಿತ್ಯ ಎಲ್ಲರೂ ಬಂದು ನಾಗರ ಮೂರ್ತಿಗೆ ಪೂಜೆ ಸಲ್ಲಿಸಬೇಕು. ಇದರಿಂದ ಪ್ರತಿಯೊಬ್ಬರಿಗೂ ನೆಮ್ಮದಿ ಪ್ರಾಪ್ರತವಾಗುತ್ತದೆ ಎಂದರು.ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ದೇವರು ಮಾತನಾಡಿ, ಬದುಕಿನ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕು. ಸಮಯಕ್ಕೆ ಬೆಲೆ ಇದೆ. ಆ ಸಮಯ ಸಾರ್ಥಕ ಆಗುವುದು ನಗುವಿನಿಂದ ಮಾತ್ರ ಸಾಧ್ಯ.ನಿತ್ಯ ಬದುಕಿನಲ್ಲಿ ನಗುತ್ತಾ ಇದ್ದರೆ ಅದುವೇ ಸಾರ್ಥಕ ಜೀವನ ಎಂದರು.
ಬೆಳಗ್ಗೆ ನಾಗರಮೂರ್ತಿ ಪ್ರತಿಷ್ಠಾಪನೆ ಪೂಜೆ ಜರುಗಿತು. ನಂತರ ಅನ್ನಸಂತರ್ಪಣೆ ಜರುಗಿತು. ಕಾಲನಿಯ ನಿವಾಸಿಗಳು ನಾಗರ ಮೂರ್ತಿಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.ಪಪಂ ಸದಸ್ಯ ಶಿವರಾಜ ಯಲ್ಲಪ್ಪಗೌಡರ, ಪ್ರಮುಖರಾದ ಪ್ರದೀಪ ಬಣ್ಣದಭಾವಿ, ಬಸವರಾಜ ಉಪ್ಪಾರ, ಉಮೇಶ ಕಂಬಳಿ, ದೇವಪ್ಪ ಪತ್ತಾರ, ರಾಜಶೇಖರ ಹೊಸಮನಿ, ದೇವರಾಜ ಈಬೇರಿ, ಬಸವರಾಜ ಸಜ್ಜನ, ಶಂಕ್ರಯ್ಯ ಹಿರೇಮಠ, ಸಾಹಿತಿ ಭೋಜರಾಜ ಸೊಪ್ಪಿಮಠ ಇತರರಿದ್ದರು.