ಸಾರಾಂಶ
ರೈತ ನಾಯಕ ಭದ್ರಾಪುರದ ಹನುಮಂತ ಕಂಬಳಿ ಎಂಬುವರು ರಾಜ್ಯ ಸರ್ಕಾರದ ಕೆಲವು ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಈ ಮಾತನ್ನು ಕೇಳಿದ ಶಾಸಕ ಕೋನರಡ್ಡಿ ಕೋಪಗೊಂಡು ಮನವಿ ನೀಡುವ ವೇಳೆ ಏನನ್ನೂ ಮಾತನಾಡಬಾರದು ಎಂದು ಹೇಳಿ ನಂತರ ಅವಾಚ್ಯ ಪದ ಬಳಸಿದ್ದಾರೆ.
ಅಣ್ಣಿಗೇರಿ:
ಪಟ್ಟಣದ ಉಗ್ರಾಣದ ಬಳಿ ರೈತರ ಚೀಲಗಳ ಕಳ್ಳತನ ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಹೋರಾಟಗಾರರಿಗೆ ಶಾಸಕ ಎನ್.ಎಚ್. ಕೋನರಡ್ಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಂದಿಸಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಪಟ್ಟಣದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಮಹಾದೇವಿ ಹುಯಿಲಗೋಳ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ರೈತರು ಮನವಿ ನೀಡುತ್ತಿದ್ದರು. ಈ ವೇಳೆ ರೈತ ನಾಯಕ ಭದ್ರಾಪುರದ ಹನುಮಂತ ಕಂಬಳಿ ಎಂಬುವರು ರಾಜ್ಯ ಸರ್ಕಾರದ ಕೆಲವು ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಈ ಮಾತನ್ನು ಕೇಳಿದ ಶಾಸಕ ಕೋನರಡ್ಡಿ ಕೋಪಗೊಂಡು ಮನವಿ ನೀಡುವ ವೇಳೆ ಏನನ್ನೂ ಮಾತನಾಡಬಾರದು ಎಂದು ಹೇಳಿ ನಂತರ ಅವಾಚ್ಯ ಪದ ಬಳಸಿದ್ದಾರೆ. ಇದರಿಂದಾಗಿ ಕೆಲ ರೈತರು ಆಕ್ರೋಶಗೊಂಡರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಶಾಸಕರನ್ನು ಅಲ್ಲಿಂದ ಕರೆದುಕೊಂಡು ಹೋದ ಘಟನೆ ನಡೆಯಿತು.
ಹೋರಾಟಕ್ಕೆ ತೀರ್ಮಾನ:
ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಶಾಸಕ ಎನ್.ಎಚ್. ಕೋನರಡ್ಡಿ ಇದೀಗ ರೈತರನ್ನೇ ಅವಾಚ್ಯ ಮಾತುಗಳನ್ನಾಡಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತಹದಲ್ಲ. ನಾನು ಕೂಡಾ ಹೋರಾಟದ ಹಾದಿಯಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ. ಈ ಕುರಿತು ರೈತರೊಂದಿಗೆ ಚರ್ಚಿಸಿ ಶಾಸಕರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಹೋರಾಟಗಾರ ಹನುಮಂತಪ್ಪ ಕಂಬಳಿ ತಿಳಿಸಿದರು.