ಒಂದು ಕಾಲದಲ್ಲಿ ಕುಡಿತದ ಚಟ ಬಿಡಿಸಲು ನಿಮ್ಹಾನ್ಸ್‌ಗೆ ಹೋಗುತ್ತಿದ್ದರು, ಇಂದು ಮೊಬೈಲ್ ಚಟ ಬಿಡಿಸಲು ನಿಮ್ಹಾನ್ಸ್‌ಗೆ ಹೋಗುವ ಸ್ಥಿತಿ ಬಂದಿದೆ.
ಕನ್ನಡಪ್ರಭ ವಾರ್ತೆ ಗದಗ
ಒಂದು ಕಾಲದಲ್ಲಿ ಕುಡಿತದ ಚಟ ಬಿಡಿಸಲು ನಿಮ್ಹಾನ್ಸ್‌ಗೆ ಹೋಗುತ್ತಿದ್ದರು, ಇಂದು ಮೊಬೈಲ್ ಚಟ ಬಿಡಿಸಲು ನಿಮ್ಹಾನ್ಸ್‌ಗೆ ಹೋಗುವ ಸ್ಥಿತಿ ಬಂದಿದೆ. ಮಕ್ಕಳ ಕೈಗಳು ನಡುಗುತ್ತಿವೆ, ನಿದ್ರೆಯಲ್ಲೂ ಮೊಬೈಲ್ ಹುಡುಕುತ್ತಿದ್ದಾರೆ. ಇದು ಮುಂದಿನ ಪೀಳಿಗೆಯನ್ನೇ ನುಂಗುವ ಮಾನಸಿಕ ಅಸ್ವಸ್ಥತೆಯ ಸಾಧನ ಎಂದು ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಇಲ್ಲಿಯ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ನಡೆದ ಜೀವನ ದರ್ಶನ 62ನೇ ಮಾಲಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಗಂಡ-ಹೆಂಡತಿ ನಡುವೆ, ತಂದೆ-ತಾಯಿ ಮಕ್ಕಳ ನಡುವೆ ಮಾತು, ಚರ್ಚೆ ಇಲ್ಲದಂತೆ ಮಾಡಿದೆ. ಈ ಮೊಬೈಲ್ ಎದುರಿಗೆ ಬಂದವರಿಗೆ ನಮಸ್ಕಾರ ಮಾಡುತ್ತಿದ್ದೆವು, ಇಂದು ದ್ವೇಷ, ಅಸೂಯೆ, ಮತ್ಸರ ತುಂಬಿಕೊಂಡಿದೆ. ಇದಕ್ಕೆಲ್ಲ ಕಾರಣ ನಾವು ಮಾತನಾಡುವುದನ್ನೇ ಮರೆತಿದ್ದೇವೆ. ಸಿನಿಮಾ ಸುದ್ದಿ, ಗಾಳಿ ಮಾತು ಮಾತನಾಡಿದರೆ ಮನೆ ಹಾಳಾಗುತ್ತದೆ. ಆದ್ದರಿಂದ ವಾರದಲ್ಲಿ ಒಂದು ದಿನ ಮೊಬೈಲ್ ಮುಟ್ಟದೇ ಇರಿ. ಅದೇ ನಿಜವಾದ ಉಪವಾಸ ಎಂದರು.ಬರಲಿರುವ ದಿನಗಳಲ್ಲಿ ಮೊಬೈಲ್ ವ್ಯಸನ ಬಿಡಿಸಲು, ಮೊಬೈಲ್‌ದಿಂದ ಆರೋಗ್ಯ ಕೆಡಿಸಿಕೊಂಡವರನ್ನು ತಪಾಸಣೆ ಮಾಡಲು ಪ್ರತ್ಯೇಕ ಡಾಕ್ಟರ್, ಪ್ರತ್ಯೇಕ ಆಸ್ಪತ್ರೆ ಬಂದರೂ ಆಶ್ಚರ್ಯವಿಲ್ಲ. ಮೊಬೈಲ್ ಹಿತಮಿತ ಬಳಕೆಯಾಗಬೇಕು. ಮೊಬೈಲ್ ತಿಕ್ಕುವುದೇ ಜೀವನವಲ್ಲ. ಮೊಬೈಲ್ ಇಲ್ಲದೇ 100 ವರ್ಷ ಗಟ್ಟಿ ಜೀವನ ನಡೆಸಿದ್ದು ಇತಿಹಾಸವಿದೆ ಎಂದರು.
ನಿವೃತ್ತ ಪ್ರಾ. ಡಾ. ಎಫ್.ಸಿ. ಹೊಸೂರು ಮಾತನಾಡಿ, ಪಾಲಕ ಪೋಷಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಧರ್ಮ, ಸತ್ಯದ ಹಾದಿಯಲ್ಲಿ ಮುನ್ನಡೆಯಲು ತಿಳುವಳಿಕೆ ನೀಡಬೇಕು. ಇದರಿಂದ ಅವರ ಬದುಕು ಬಂಗಾರವಾಗುವದು. ಮಕ್ಕಳ ಕೈಗೆ ಒಳ್ಳೆ ಪುಸ್ತಕ ಕೊಡಿ, ಸ್ಮಾರ್ಟ್ ಫೋನ್‌ಗಳನ್ನಲ್ಲ. ಈ ಮೊಬೈಲ್‌ಗಳಿಂದ ಮಕ್ಕಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ ಮಾತನಾಡಿದರು. ಗಣ್ಯರಾದ ಡಾ.ಎಫ್.ಸಿ. ಹೊಸೂರು, ಬಸವರಾಜ ಕಮ್ಮಾರ, ಈರಣ್ಣ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.
ಸಮಿತಿ ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ, ಸುದರ್ಶನ ಹಾನಗಲ್ಲ, ಎಸ್.ಎಸ್. ಪಾಳೇಗಾರ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ ಸೇರಿ ಗಣ್ಯರು ಇದ್ದರು. ಕಸ್ತೂರಿ ಕಮ್ಮಾರ ಪ್ರಾರ್ಥಿಸಿದರು. ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಸ್ವಾಗತಿಸಿದರು. ನಿರ್ಮಲಾ ಪಾಟೀಲ ಹಾಗೂ ಗೀತಾ ಅಣ್ಣಿಗೇರಿ ಭಾವಗೀತೆ ಹಾಡಿದರು. ಬಿ.ಎಚ್. ಗರಡಿಮನಿ ನಿರೂಪಿಸಿದರು. ಸಂಗೀತಾ ಕುರಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಾಶಿ ವಿಶ್ವನಾಥನ ಪಾಲಕಿ ಸೇವೆ ಶ್ರದ್ಧಾಭಕ್ತಿಯಿಂದ ಜರುಗಿತು.