ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ

| Published : May 02 2025, 12:15 AM IST

ಸಾರಾಂಶ

ಹನೂರು ಪಟ್ಟಣದಲ್ಲಿ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.

ಹನೂರು: ತಾಲೂಕು ಆಡಳಿತದ ವತಿಯಿಂದ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ತಹಸೀಲ್ದಾರ್ ವೈಕೆ ಗುರುಪ್ರಸಾದ್ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯತು. ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹನೂರು ತಾಲೂಕು ಅದ್ಯಕ್ಷ ಸೋಮಶೇಖರ್‌ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆಯವರನ್ನು ಒಂದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತಗೊಳಿಸಿದರು. ಈ ಮೂಲಕ ಸಮಾನತೆಯ ತತ್ವ ವಿಚಾರಗಳಿಗೆ ಮುನ್ನುಡಿ ಬರೆದ ಬಸವಣ್ಣ ಶ್ರೇಷ್ಠ ಸಮಾಜ ಸುಧಾರಕರಾದರು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು. ಬಸವಣ್ಣನವರು ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ಶೋಷಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾದರು. ಅಂದು ಸ್ಥಾಪಿಸಿದ ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ಈ ವೇಳೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ತಹಸೀಲ್ದಾರ್ ವೈಕೆ ಗುರುಪ್ರಸಾದ್, ಬಿಇಒ ಗುರಲಿಂಗಯ್ಯ, ಸಬ್ ಇನ್ಸ್‌ಪೆಕ್ಟರ್ ರವಿ ಲೋಕೋಪಯೋಗಿ ಇಲಾಖೆಯ ಎಇ ಸುರೇಂದ್ರ ರಾಜಶ್ವ ನಿರೀಕ್ಷಕ ಶೇಷಣ್ಣ ಸೇರಿದಂತೆ ಕನ್ನಡಪರ ಹೋರಾಟಗಾರ ವಿನೋದ್ ಹಲವರು ಹಾಜರಿದ್ದರು.

ವಿವಿಧಡೆ ಬಸವೇಶ್ವರ ಜಯಂತಿ:

ಪಟ್ಟಣದ ಪೊಲೀಸ್ ಠಾಣೆ ಹಾಗೂ ರಾಮಪುರ ಪೊಲೀಸ್ ಠಾಣೆ ಮಲೆಮಾದೇಶ್ವರ ಬೆಟ್ಟ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಮತ್ತು ವಿವಿಧಡೆ ಸಾಂಪ್ರದಾಯದಂತೆ ಬಸವ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಯಿತು.