ಶ್ರೀರಾಮ ದೇಗುಲದ ಹಣ ಖಾಸಗಿ ವ್ಯಕ್ತಿಗಳ ಪಾಲು..!

| Published : Feb 21 2025, 11:47 PM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಶ್ರೀರಾಮ ದೇವರ ದೇವಾಲಕ್ಕೆ ಸೇರಿದ ೧.೭೧ ಲಕ್ಷ ರು. ಹಣವನ್ನು ಖಾಸಗಿ ವ್ಯಕ್ತಿಗಳು ಅರ್ಚಕರ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಶ್ರೀರಾಮ ದೇವರ ದೇವಾಲಕ್ಕೆ ಸೇರಿದ ೧.೭೧ ಲಕ್ಷ ರು. ಹಣವನ್ನು ಖಾಸಗಿ ವ್ಯಕ್ತಿಗಳು ಅರ್ಚಕರ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಕುರಿತಂತೆ ಸಾಮಾಜಿಕ ಹೋರಾಟಗಾರ ಕಿರಂಗೂರು ಪಾಪು ನೀಡಿದ ದೂರಿನನ್ವಯ ತನಿಖೆ ನಡೆಸಿದ ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್ ಅವರು ಹಣ ಪಾವತಿಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸದೆ, ದಾಖಲೆಗಳನ್ನು ನಿರ್ವಹಿಸದೆ ದೇವಸ್ಥಾನದ ಅರ್ಚಕರಲ್ಲದವರಿಗೆ ಹಣ ಪಾವತಿ ಮಾಡಿರುವ ಮುಜರಾಯಿ ತಹಸೀಲ್ದಾರ್, ಶಾಖೆ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರಿಂದ ಹಣ ವಸೂಲಿ ಮಾಡಿ ದೇವಾಲಯದ ಖಾತೆಗೆ ಜಮೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಕಿರಂಗೂರು ಗ್ರಾಮದ ಶ್ರೀರಾಮ ದೇವರು ದೇವಾಲಯಕ್ಕೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ ೧೯೬೧ರಡಿ ೫೪೦ ರು.ಗಳ ವರ್ಷಾಸನ ನಿಗದಿಯಾಗಿದೆ. ಈ ಮೊತ್ತವನ್ನು ೨೦೧೮-೧೯ನೇ ಸಾಲಿನಿಂದ ೪೮೦೦೦ ರು., ೨೦೨೩-೨೪ನೇ ಸಾಲಿನಿಂದ ೬೦ ಸಾವಿರ ರು.ಗಳಿಗೆ ಏರಿಸಲಾಗಿದೆ. ದೇವಸ್ಥಾನದ ಮೂಲ ಅರ್ಚಕ ರಾಮಸ್ವಾಮಿ ಅಯ್ಯಂಗಾರ್ ವರ್ಷಾಸನ ಪಡೆದಿರುವುದಕ್ಕೆ ದಾಖಲೆ ಇಲ್ಲ. ೨೦೦೩-೦೪ನ ಸಾಲಿನಿಂದ ೨೦೨೦-೨೧ನೇ ಸಾಲಿನವರೆಗೆ ಡಿ.ಪದ್ಮನಾಭ ಹಾಗೂ ೨೦೨೧ನೇ ಸಾಲಿನಿಂದ ೨೦೨೩ರವರೆಗೆ ರಾಮಚಂದ್ರ ಎಂಬುವರು ವರ್ಷಾಸನ ಪಡೆದಿದ್ದಾರೆ. ಆದರೆ, ಇವರಿಬ್ಬರು ದೇವಾಲಯದ ಅರ್ಚಕರಾಗಿ ನೇಮಕಗೊಂಡಿರುವ ಬಗ್ಗೆ ಮಾಹಿತಿ ಇಲ್ಲದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ದೇವಾಲಯಕ್ಕೆ ಸರ್ಕಾರದಿಂದ ಬರುತ್ತಿರುವ ವರ್ಷಾಸನ ಹಣವನ್ನು ಪೂಜಾ ಕಾರ್ಯಗಳ ವೆಚ್ಚಗಳನ್ನು ಭರಿಸಲು ಅರ್ಚಕರಿಗೆ ಪಾವತಿ ಮಾಡಬೇಕಿದ್ದು, ವರ್ಷಾಸನ ಪಾವತಿಗೆ ಸಂಬಂಧಿಸಿದಂತೆ ಹಣ ಪಾವತಿಸಿರುವ ಕಡತ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ದೇಗುಲದ ಹಣಕಾಸಿನ ವ್ಯವಹಾರಗಳಿಗೆ ನಗದು ನಿರ್ವಹಿಸದೆ ಬೇಜವಾಬ್ದಾರಿತನ ಪ್ರದರ್ಶಿಸಸಲಾಗಿದೆ. ತಾಲೂಕು ಕಚೇರಿಯಲ್ಲಿ ಮುಜರಾಯಿ ಶಾಖೆಯ ವಿಷಯ ನಿರ್ವಾಹಕರಾಗಿರುವ ರಾಹುಲ್‌ರವರು ಶ್ರೀರಾಮ ದೇವಾಲಯದ ಆದಾಯ ಮತ್ತು ವಿವಿಧ ಬಾಬ್ತುಗಳಿಗೆ ಮಾಡಿರುವ ವೆಚ್ಚಗಳು, ಹಣಕಾಸಿನ ವ್ಯವಹಾರಗಳ ಕಡತಗಳು, ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಯಾವುದೇ ಕಡತಗಳನ್ನು ನಿರ್ವಹಿಸಿಲ್ಲ.

ಹೀಗಾಗಿ ದೇಗುಲದ ಅರ್ಚಕರಲ್ಲದವರಿಗೆ ವರ್ಷಾಸನ ಹಣ ಪಾವತಿಸಿ ದೇವಾಲಯಕ್ಕೆ ಆರ್ಥಿಕ ನಷ್ಟವನ್ನು ಉಂಟುಮಾಡಿರುವ ಹಾಗೂ ಕಡತಗಳು, ದಾಖಲೆಗಳನ್ನು ನಿರ್ವಹಿಸದ ಮುಜರಾಯಿ ತಹಸೀಲ್ದಾರ್, ಶಾಖೆಯ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರಿಂದಲೇ ೧.೭೧ ಲಕ್ಷ ರು. ಹಣವನ್ನು ವಸೂಲಿ ಮಾಡಿ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.