ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆಕ್ಷೇತ್ರದ ಜನರ ಭಾವನೆಗಳನ್ನು ಅರಿತು ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.ಸಮೀಪದ ಸೀಗೆಹಳ್ಳಿಯಲ್ಲಿ ೨ ಕೋಟಿ ರು.ಗಳ ವೆಚ್ಚದ ಡಾಂಬರು ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಸೀಗೇಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ಶಿಥಿಲಗೊಂಡು ಪಾಳು ಬೀಳುವ ಹಂತದಲ್ಲಿತ್ತು. ಈಗ ಅದೇ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದೇ ರೀತಿಯಲ್ಲಿ ಹೆಗ್ಗೆರೆ, ಸಿರಿಗೆರೆ-ಮೆದಿಕೆರಿಪುರ, ಹಳವುದರ ಗ್ರಾಮಗಳ ರಸ್ತೆಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಸಮೀಪದ ಪಳಿಕೆಹಳ್ಳಿ- ದೊಡ್ಡಿಗನಾಳ್ ರಸ್ತೆಯ ಕಾಮಗಾರಿಯನ್ನೂ ಸಹ ಕೈಗೆತ್ತಿಕೊಳ್ಳಲಾಗುವುದು. ಕ್ಷೇತ್ರದ ಎಲ್ಲೆಡೆ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಶ್ರದ್ಧಾ ಕೇಂದ್ರಗಳಾದ ದೇವಾಲಯಗಳಿಗೂ ಅನುದಾನ ನೀಡಿರುವೆ. ಜೊತೆಗೆ ವಿದ್ಯಾದೇಗುಲಗಳಾದ ಶಾಲೆಗಳ ನಿರ್ಮಾಣಕ್ಕೆ ಒತ್ತು ಕೊಟ್ಟು ಕೆಲಸ ಮಾಡಿರುವೆ ಎಂದರು.ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದಾಗ ಈಗ ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡಿರುವ ರಸ್ತೆ ಮೌರಿಯ ರೂಪದಲ್ಲಿತ್ತು. ಮನುಷ್ಯರು ಅದರಲ್ಲಿ ಇಳಿದು ಹೋಗಲು ಭಯಪಡುತ್ತಿದ್ದರು. ಒಮ್ಮೆ ಗ್ರಾಮಕ್ಕೆ ಆಗಮಿಸಿದ್ದಾಗ ಅದರ ಅನುಭವ ನನಗೂ ಆಗಿತ್ತು. ೨೦ ವರ್ಷಗಳ ಹಿಂದೆಯೇ ಪಾಳು ಕಾಲುವೆಗಳನ್ನು ಮುಚ್ಚು ರಸ್ತೆ ಮಾಡಿಸಿದ್ದೆ ಎಂಬುದನ್ನು ನೆನಪು ಮಾಡಿಕೊಂಡರು.ಜನರು ನನಗೆ ಐದು ವರ್ಷಗಳ ಅಧಿಕಾರ ನೀಡಿದ್ದಾರೆ. ಅವರು ನೀಡಿರುವ ಅಧಿಕಾರವನ್ನು ಅವರ ವಿಶ್ವಾಸಕ್ಕೆ ಮೆಚ್ಚುಗೆಯಾಗುವಂತೆ ಕೆಲಸ ಮಾಡಿ ತೋರಿಸುವೆ. ಜನರಿಗೆ ಆಸರೆಯಾಗಿ ಕೆಲಸ ಮಾಡುವ ಅಪೇಕ್ಷೆ ನನ್ನದು.
ಈ ಭಾಗದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳೌರ ಸಂಕಲ್ಪಶಕ್ತಿಯಿಂದ ಕೆರೆಗಳು ತುಂಬಿವೆ. ಈಗ ನೀರಿಗೆ ಬರವಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಅದಕ್ಕಾಗಿ ಅಜ್ಜಪ್ಪನಹಳ್ಳಿ ಬಳಿ ೨೨೦ ಮೆಗಾ ವ್ಯಾಟ್ ವಿದ್ಯುತ್ ಕೇಂದ್ರದ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಒಂದು ವರ್ಷದ ಒಳಗೆ ಅದರ ಕಾಮಗಾರಿ ಮುಗಿದರೆ ರೈತರಿಗೆ ಸಾಕಷ್ಟ ವಿದ್ಯುತ್ ದೊರೆಯುತ್ತದೆ ಎಂದರು.ಬಿಜೆಪಿ ಯುವ ಮೋರ್ಚಾದ ಶೈಲೇಶ್ ಕುಮಾರ್ ಮಾತನಾಡಿ, ಶಾಸಕರಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳ ಜನರ ಸಂಕಷ್ಟದ ಅರಿವಿದೆ. ಆದುದರಿಂದಲೇ ಅವರು ಜನರು ಕೇಳುವ ಮುನ್ನವೇ ಹಳ್ಳಿಗಳಲ್ಲಿ ಆಗಬೇಕಾಗಿರುವ ಕೆಲಸಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಭರಮಸಾಗರ ಹೋಬಳಿ ಭಾಗದಲ್ಲಿ ಸುಮಾರು ೫೨ ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಆಡಳಿತಾರೂಢ ಪಕ್ಷಗಳ ಶಾಸಕರೂ ಮಾಡದೇ ಇರುವಂತಹ ಕೆಲಸವನ್ನು ಶಾಸಕ ಎಂ. ಚಂದ್ರಪ್ಪ ಮಾಡುತ್ತಿದ್ದಾರೆ ಎಂದರು.ಗ್ರಾಮದ ಎಸ್.ಬಿ. ಮಂಜಪ್ಪ ಮಾತನಾಡಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.ಸಿರಿಗೆರೆ ಗ್ರಾಪಂ ಅಧ್ಯಕ್ಷೆ ರೂಪಾ, ಸದಸ್ಯ ಕೆ.ಬಿ. ಮೋಹನ್, ಬಸವರಾಜ್, ಆರ್. ಹರೀಶ್, ಸತೀಶ್, ಯತೀಶ್, ಗೌಡ್ರ ಫಾಲಾಕ್ಷಪ್ಪ, ಜಯಪ್ಪ, ಗೌಡ್ರ ಬಸವರಾಜಪ್ಪ, ಕಲೀಶ್, ಗೀತಾ, ರತ್ನಮ್ಮ, ಶ್ವೇತಾ, ಆಶಾ ಇದ್ದರು.