ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಎಸ್ಪಿ
ಕನ್ನಡಪ್ರಭ ವಾರ್ತೆ ಬಳ್ಳಾರಿಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗೆ ಸಾಕಷ್ಟು ಮಹತ್ವವಿದೆ. ಮಾರ್ಕ್ಸ್ ಎಂದರೆ ಬರೀ ನಂಬರ್ ಎಂಬ ಮಾತುಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬೇಡಿ. ಪೈಪೋಟಿಯ ಈ ಕಾಲಘಟ್ಟದಲ್ಲಿ ಜಸ್ಟ್ ಪಾಸ್ ಗೆ ಅಂತಹ ಮಾನ್ಯತೆಯಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಡಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೆಚ್ಚುಹೆಚ್ಚು ಓದಿದಷ್ಟು ಜ್ಞಾನದ ಬಲ ಹೆಚ್ಚಾಗುತ್ತದೆ. ಇದುವೇ ನಿಮ್ಮ ಜೀವನವನ್ನು ರೂಪಿಸುವ ಏಕೈಕ ಸಾಧನ. ಪರೀಕ್ಷೆಗೆ ಸಾಕಷ್ಟು ಸಮಯವಿದೆ ಎಂದು ಕಾಲಹರಣ ಮಾಡಬೇಡಿ. ಪೈಪೋಟಿಯ ಇಂದಿನ ದಿನಗಳಲ್ಲಿ ಒಂದೊಂದು ನಿಮಿಷಕ್ಕೂ ಮೌಲ್ಯವಿದೆ. ಶೇ.100ರಷ್ಟು ಕಲಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪಠ್ಯದ ಓದಿನ ಜೊತೆಗೆ ಜ್ಞಾನಾರ್ಜನೆಗೆ ಪೂರಕದ ಪುಸ್ತಕ ಓದಿನಲ್ಲೂ ತೊಡಗಿಸಿಕೊಂಡರೆ ಹೆಚ್ಚು ಸಹಕಾರಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಪ್ರತಿಯೊಬ್ಬರ ಮನೆಯಲ್ಲೂ ಸಮಸ್ಯೆಗಳಿರುತ್ತವೆ. ಸಮಸ್ಯೆಗಳ ನಡುವೆ ಸಾಧನೆ ಮಾಡಬೇಕು. ಸಾಧನೆ ಮಾಡುವ ಹಾದಿಯಲ್ಲಿರುವವರು ಕಾರಣ ನೀಡುವುದಿಲ್ಲ. ಶ್ರಮವಿಲ್ಲದೆ ಸಾಧನೆ ಮಾಡಿದವರು ಎಲ್ಲೂ ಇಲ್ಲ. ಪ್ರತಿಯೊಬ್ಬರ ಸಾಧನೆ ಹಿಂದೆ ಅವಿರತ ಶ್ರಮವಿರುತ್ತದೆ. ಸಾಧನೆ ಮಾಡಿದವರು ಬಹುತೇಕರು ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಭಾಗದವರೇ ಆಗಿದ್ದಾರೆ. ಅನೇಕ ಸಮಸ್ಯೆಗಳ ನಡುವೆ ತಾವಂದುಕೊಂಡಂತಾಗಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಷ್ಟೇ ಅಲ್ಲ; ಬಿಎ, ಬಿಕಾಂ ಓದುವವರ ಸಂಖ್ಯೆಯೂ ದೊಡ್ಡದಿದೆ. ಹೀಗಾಗಿ ಸ್ಪರ್ಧೆಯೂ ಹೆಚ್ಚಾಗಿರುತ್ತದೆ. ಹೀಗಾಗಿ ಸಮಯಕ್ಕೆ ಹೆಚ್ಚು ಮಹತ್ವ ನೀಡಿ. ಓದಿನ ಕಡೆ ಸದಾ ಗಮನ ನೀಡಿ ಎಂದು ತಿಳಿಸಿದರು.ಓದುವಾಗ ಲವ್ ಮಾಡಿದರೆ ಲೈಫ್ ಹಾಳು:
ವಿದ್ಯಾರ್ಥಿ ದಿಸೆಯಲ್ಲಿರುವಾಗ ಓದಿನ ಕಡೆಗಷ್ಟೇ ಗಮನ ನೀಡಬೇಕು. ಸಹಜವಾಗಿ ಹರೆಯ ವಯಸ್ಸಿನಲ್ಲಿ ಆಕರ್ಷಣೆ ಸಹಜ. ಸಾಧನೆಯ ಹಾದಿಯಲ್ಲಿರುವವರು ಆಕರ್ಷಣೆಗೆ ಒಳಗಾಗಬಾರದು. ಓದೋ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಗುಂಗಿಗೆ ಬೀಳಬಾರದು. ಲವ್ ಗೆ ಬಿದ್ದರೆ ಇಡೀ ಜೀವನ ಪರಿತಪಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ಕಾಣೆಯಾಗುವ ಪ್ರಕರಣಗಳು ಹೆಚ್ಚಾಗಿದ್ದು ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಕಡೆಗಷ್ಟೇ ಗಮನ ನೀಡಬೇಕು ಎಂದು ಸಲಹೆ ನೀಡಿದ ಎಸ್ಪಿ ಡಾ.ಶೋಭಾರಾಣಿ, ಮಹಿಳಾ ಸಮಾನತೆ ಎಂದರೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಎಂದರ್ಥ. ಮಹಿಳೆಯರು ಓದಿ ಉದ್ಯೋಗ ಪಡೆದುಕೊಳ್ಳಬೇಕು. ಹಣಕಾಸಿಗೆ ಯಾರ ಬಳಿಯೂ ಕೈಯೊಡ್ಡದೆ ಸ್ವಯಂ ಆರ್ಥಿಕ ಶಕ್ತಿಯನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು.ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ವಿ. ಪ್ರಜ್ಞಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಬಿ.ಎಂ. ಸ್ನೇಹಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ಮಲ್ಲಿಕಾರ್ಜುನ, ಆಂಗ್ಲ ವಿಭಾಗದ ಮುಖ್ಯಸ್ಥ ಟಿ.ಮರಿಗಾದಿಲಿಂಗಪ್ಪ, ಕನ್ನಡ ವಿಭಾಗದ ಡಾ. ಸಿ. ಕೊಟ್ರಪ್ಪ, ಪತ್ರಾಂಕಿತ ವ್ಯವಸ್ಥಾಪಕಿ ಬಿ.ವಿಜಯಲಕ್ಷ್ಮಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))