ಅತಿ ವಿದ್ಯಾವಂತರೇ ಜಾತಿವಾದಿ, ಭ್ರಷ್ಟರು, ಭಯೋತ್ಪಾದಕರಾಗುತ್ತಿದ್ದಾರೆ.
ಹೂವಿನಹಡಗಲಿ: ಅತಿ ಕಡಿಮೆ ಶಿಕ್ಷಣ ಪಡೆದವರಿಗಿಂತ ಹೆಚ್ಚು ಶಿಕ್ಷಣ ಪಡೆದವರೇ ಈ ದೇಶಕ್ಕೆ ಕಂಟಕವಾಗಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ದಾರಿ ತಪ್ಪಿದಂತಿದೆ. ಆದರಿಂದ ಮಸ್‌ದರ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಧಾರ್ಮಿಕ, ಲೌಕಿಕ ಮತ್ತು ಮೌಲ್ಯಾಧಾರಿತ ನೈತಿಕ ಶಿಕ್ಷಣ ಕೊಡಿ ಆಗ ಉತ್ತಮ ನಾಗರಿಕರಾಗಲು ಸಾಧ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ನಿರ್ಮಿಸಿ ಮಸ್‌ದರ್ ಶಿಕ್ಷಣ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಅತಿ ವಿದ್ಯಾವಂತರೇ ಜಾತಿವಾದಿ, ಭ್ರಷ್ಟರು, ಭಯೋತ್ಪಾದಕರಾಗುತ್ತಿದ್ದಾರೆ, ಆದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಏನಾಗಿದೆ ಎಂಬುದನ್ನು ಆತ್ಮಾಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಜನಪ್ರತಿನಿಧಿಗಳು ವಿಧಾನಸೌಧ ಮತ್ತು ಸಂಸತ್ತಿನಲ್ಲಿ ಕುಳಿತಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ, ಬದಲಾಗಿ ವಿಶ್ವದಲ್ಲೇ ಭಾರತ ದೇಶ ನಂಬರ್ ಒನ್ ಸ್ಥಾನಕ್ಕೆ ಬಂದು ಬಲಿಷ್ಠವಾಗಬೇಕಾದರೇ ಪ್ರತಿಯೊಬ್ಬ ಮಕ್ಕಳಿಗೆ ನೈತಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ ಪಡೆದಾಗ ದೇಶ ಬಲಿಷ್ಠವಾಗಲು ಸಾಧ್ಯವಿದೆ ಎಂದರು.ಉತ್ತಮ ಶಿಕ್ಷಣ ಪಡೆದು ಕೇವಲ ತಂದೆ ತಾಯಿಗಳಿಗೆ ಸಂಪತ್ತು ಮಾತ್ರವಲ್ಲ, ನೀವು ನೈತಿಕ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮುದಾಯ ಮತ್ತು ದೇಶದ ಸಂಪತ್ತು ಆಗಬೇಕು, ಪ್ರತಿಯೊಬ್ಬರೂ ಎಲ್ಲರ ಸಂಕಷ್ಟ ನೋವಿನಲ್ಲಿ ಭಾಗಿಯಾಗಬೇಕು, ನಿಸ್ವಾರ್ಥ ಸೇವೆ ಗುರಿಯಾಗಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ನಾಡಿನ ಪ್ರಜೆಗಳೆಲ್ಲ ಒಂದೇ ತಾಯಿ ಮಕ್ಕಳಂತೆ ಜೀವಿಸಬೇಕು, ಈ ದೇಶದಲ್ಲಿ ಜನ್ಮ ತಾಳಿರುವುದು ನಮ್ಮ ಪುಣ್ಯ, ನಮ್ಮ ಧರ್ಮದಂತೆ ಇನ್ನೊಂದು ಧರ್ಮ ಪ್ರೀತಿಸಿ ಗೌರವಿಸಬೇಕು, ಒಂದು ಮುಖ್ಯ ರಸ್ತೆಯಲ್ಲಿ ಹಿಂದೂ,ಮುಸ್ಲಿಂ, ಕೈಸ್ತ್ರ, ದಲಿತ, ಶೋಷಿತರೆಲ್ಲ ಒಂದಾಗಿ ಕೈ ಕೈ ಹಿಡಿದುಕೊಂಡು ಓಡಾಡುವಂತಹ ವಾತವರಣ ಸೃಷ್ಠಿ ಮಾಡುವ ಕೆಲಸ ಶಾಸಕರು ಮಾಡಿದಾಗ ಮಾತ್ರ ಅವರೊಬ್ಬ ಉತ್ತಮ ಜನಪ್ರತಿನಿಧಿಯಾಗಲು ಸಾಧ್ಯ ಎಂದರು.ಶಾಸಕ ಕೃಷ್ಣನಾಯ್ಕ ಮಾತನಾಡಿ, ಮಸ್‌ದರ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅನಾಥ, ಬಡ ಮಕ್ಕಳ ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆಂದು ಹೇಳಿದರು.
ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಸುಫಿಯಾನ ಸಖಾಫಿ ಮಾತನಾಡಿ, ಎಲ್ಲ ಜಾತಿ ಧರ್ಮದವರಿಗೆ ಬೇಕಾಗಿರುವ ಸಚಿವ ಯು.ಟಿ. ಖಾದರ್ ಕೇವಲ ಮುಸ್ಲಿಂ ಸಮುದಾಯದ ಆಸ್ತಿ ಅಲ್ಲ, ಈ ನಾಡಿನ 7 ಕೋಟಿ ಜನರ ಆಸ್ತಿಯಾಗಿದ್ದಾರೆ. ಅವರು ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಾಣುತ್ತಿದ್ದೇವೆಂದು ಹೇಳಿದರು.ಕೇರಳದ ಉಲಮಾ ಒಕ್ಕೂಟದ ಕಾರ್ಯದರ್ಶಿ ಮುಹ್ಯಿಸ್ಸುನ್ನ ಅಬ್ದುಲ್ ಖಾದರ್ ಮುಸ್ಲಿಯಾರ್, ಮಸ್‌ದರ್ ಗ್ರೂಪ್ ಆಫ್ ಇನ್ಸಿಟ್ಯೂಶನ್ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್ ಕಾವಳಕಟ್ಟೆ, ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಮುಸ್ತಫಾ, ಜಿ.ಎ. ಬಾವಾ, ಮಾಜಿ ಶಾಸಕ ಹಾಲಪ್ಪ, ಹಬೀಬ್ ನಾಳ, ಅಬ್ದುಲ್ ಹಕೀಂ ಅಬುಧಾಬಿ, ರಜಬ್ ಉಚ್ಚಿಲ, ವಾರದ ಗೌಸ್ ಮೊಯಿದೀನ್, ಕಾಗದ ಗೌಸ್ ಸಾಹೇಬ್, ಸಿ.ಎ. ನಾಸಿರ್, ಗೌಸ್ ಪೀರ್, ನೂರುದ್ದೀನ್, ಸಲೀಂ ಸೇರಿದಂತೆ ಇತರರಿದ್ದರು.