ಕಾರಟಗಿ: ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸಹಯೋಗದಲ್ಲಿ ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಗುರು ಸ್ಪಂದನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ನಟೇಶ್, ಶಿಕ್ಷಕರ ಸೇವಾ ಪುಸ್ತಕ ಪ್ರತಿಯೊಬ್ಬರ ಸಮಗ್ರ ಸೇವಾ ಜೀವನದ ಮಾಹಿತಿ ಒಳಗೊಂಡಿರುವ ಅತ್ಯಮೂಲ್ಯ ದಾಖಲೆಯಾಗಿದೆ. ನೌಕರರು ತಮ್ಮ ಸೇವಾ ಪುಸ್ತಕ ಕಾಲಕಾಲಕ್ಕೆ ಪರಿಶೀಲಿಸಿ ಅದರಲ್ಲಿರುವ ಮಾಹಿತಿಯ ಸಂಪೂರ್ಣ ವಿವರ ತಿಳಿದುಕೊಳ್ಳಬೇಕು. ನಿವೃತ್ತಿಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಸೇವಾ ಪುಸ್ತಕದಲ್ಲಿರುವ ಮಾಹಿತಿ ಪರಿಶೀಲಿಸಿ ಅಗತ್ಯ ತಿದ್ದುಪಡಿ ಹಾಗೂ ದಾಖಲೆ ಸಮರ್ಪಕವಾಗಿ ಮಾಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆಯ ವ್ಯವಸ್ಥಾಪಕ ಶಿವಪ್ರಸಾದ್ , ನೌಕರರ ಸೇವಾ ಪುಸ್ತಕದಲ್ಲಿನ ಸಣ್ಣ ನಿಷ್ಕಾಳಜಿ ಮುಂದೆ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಭಿತರಿಗೆ ತೀವ್ರ ತೊಂದರೆ ಉಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಶಿಕ್ಷಕರ ಸಂಘ ಹಾಗೂ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಭಾಗವಹಿಸಿ ತಮ್ಮ ಸೇವೆಗೆ ಸಂಬಂಧಿಸಿದ ಮಾಹಿತಿ ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದರು.

ನಾಮಿನಿ ವಿವರ, ವೇತನ ಬಡ್ತಿ, ಇಂಕ್ರಿಮೆಂಟ್, ವರ್ಗಾವಣೆ, ಸೇವಾ ವಿವರ ಸೇರಿದಂತೆ ಸೇವೆಗೆ ಸಂಬಂಧಿಸಿದ ಹಲವು ಮಾಹಿತಿಗಳ ಕುರಿತು ಶಿಕ್ಷಕರಿಗೆ ಇರುವ ಗೊಂದಲ ಇಲಾಖೆಯ ಅಧಿಕಾರಿಗಳಿಂದ ಖಚಿತಪಡಿಸಿಕೊಂಡು ಅಗತ್ಯ ಸಮಸ್ಯೆ ಪರಿಹರಿಸಿಕೊಳ್ಳಲು ಗುರು ಸ್ಪಂದನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಅಮರೇಶ್ ಮೈಲಾಪುರ ಮಾತನಾಡಿ, ತಾಲೂಕಿನ ಶಿಕ್ಷಕರ ಬೇಡಿಕೆಯಂತೆ ಶಿಕ್ಷಣ ಇಲಾಖೆಯ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಗುರು ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಬಳಿಗೆ ಇಲಾಖೆಯೇ ಆಗಮಿಸಿ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಹಾಗೂ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆ ಎಂದರು.


ಶಿಕ್ಷಕರು ತಮ್ಮ ಸೇವಾ ಪುಸ್ತಕ ಹಾಗೂ ಸೇವೆಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಯಾವುದೇ ಗೊಂದಲ ಅಥವಾ ಸಮಸ್ಯೆಗಳಿದ್ದಲ್ಲಿ ಇಲಾಖೆಯ ವಿಷಯ ನಿರ್ವಾಹಕರು ಹಾಗೂ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸ್ಥಳದಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶಿಕ್ಷಕರ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್ ಉಪಪ್ರಾಂಶುಪಾಲ ಶರಣಪ್ಪ ಸೋಮಲಾಪುರ, ಇಲಾಖೆಯ ಸೂಪರಿಂಟೆಂಡೆಂಟ್ ಮಂಜುನಾಥ, ಸಂಯೋಜಕ ರಾಘವೇಂದ್ರ ಹಾಗೂ ಶಶಿಧರ ಸ್ವಾಮಿ, ವಿಷಯ ನಿರ್ವಾಹಕ ಪಂಕಜ, ಖಾದರ್ ಬಿ., ಪದ್ಮ ಹಾಗೂ ಯಂಕಪ್ಪ, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ ಸಜ್ಜನ್, ಉಪಾಧ್ಯಕ್ಷ ತಿಮ್ಮಣ್ಣ ನಾಯಕ್, ರಾಜಶೇಖರ್ ಸಿರಿವಾರ, ಶಾಮಸುಂದರ ಹಾಗೂ ದೇವೇಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸೇವಾ ಪುಸ್ತಕ ಹಾಗೂ ಸೇವೆಗೆ ಸಂಬಂಧಿಸಿದ ವಿವಿಧ ಮಾಹಿತಿ ಪರಿಶೀಲಿಸಿಕೊಂಡರು.