ಸಂತ ಕವಿ ಸರ್ವಜ್ಞ ಜ್ಞಾನದ ಪರ್ವತ- ಶಿರಸ್ತೇದಾರ ಪೂಜಾರ

| Published : Feb 21 2025, 12:47 AM IST

ಸಂತ ಕವಿ ಸರ್ವಜ್ಞ ಜ್ಞಾನದ ಪರ್ವತ- ಶಿರಸ್ತೇದಾರ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಜ್ಞ ಸಮಾಜ ಸುಧಾರಣೆ, ಅಜ್ಞಾನ, ಮೂಢ ನಂಬಿಕೆ, ಕಂದಾಚಾರಗಳನ್ನು ತೊಲಗಿಸಲು ತ್ರಿಪದಿ ವಚನಗಳನ್ನೇ ಅಸ್ತ್ರವಾಗಿಸಿಕೊಂಡ ಮಹಾನ್ ಅನುಭಾವಿ ಸಂತ ಕವಿ ಸರ್ವಜ್ಞರು. ಸರ್ವಜ್ಞರು ಜಗದ ಕವಿ ಹಾಗೂ ಜ್ಞಾನದ ಪರ್ವತ ಎಂದು ಶಿರಸ್ತೇದಾರ ಜೆ.ಪಿ. ಪೂಜಾರ ಹೇಳಿದರು.

ಶಿರಹಟ್ಟಿ: ಸರ್ವಜ್ಞ ಸಮಾಜ ಸುಧಾರಣೆ, ಅಜ್ಞಾನ, ಮೂಢ ನಂಬಿಕೆ, ಕಂದಾಚಾರಗಳನ್ನು ತೊಲಗಿಸಲು ತ್ರಿಪದಿ ವಚನಗಳನ್ನೇ ಅಸ್ತ್ರವಾಗಿಸಿಕೊಂಡ ಮಹಾನ್ ಅನುಭಾವಿ ಸಂತ ಕವಿ ಸರ್ವಜ್ಞರು. ಸರ್ವಜ್ಞರು ಜಗದ ಕವಿ ಹಾಗೂ ಜ್ಞಾನದ ಪರ್ವತ ಎಂದು ಶಿರಸ್ತೇದಾರ ಜೆ.ಪಿ. ಪೂಜಾರ ಹೇಳಿದರು. ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕು ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿರಸ್ತೇದಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ ಎನ್ನುವ ಹಾಗೆ ಸರ್ವಜ್ಞರು ಬದುಕಿನ ಎಲ್ಲ ಆಯಾಮಗಳ ಕುರಿತು ವಚನಗಳನ್ನು ರಚಿಸಿದ್ದಾರೆ ಎಂದರು. ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಕವಿ ಸರ್ವಜ್ಞ ದೇಶ ಸುತ್ತುತ್ತ ಜನ ಸಾಮಾನ್ಯರ ನಡುವೆ ಬದುಕಿ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಜಾತೀಯತೆ, ಅಸಮಾನತೆ ತೊಲಗಿಸಿ ಸಮಾಜದಲ್ಲಿನ ಅಂಕುಡೊಂಕು ತಿದ್ದಿ ಸಮಾಜ ಸುಧಾರಣೆಗೆ ಶ್ರಮಿಸಿದವರು. ಸರ್ವಜ್ಞರ ತ್ರಿಪದಿ ವಚನಗಳನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಅವುಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಾಜದ ಮುಖಂಡ ಹಾಗೂ ಕಾರ್ಯದರ್ಶಿ ಶಿವಪ್ಪ ಚಕ್ರಸಾಲಿ ಮಾತನಾಡಿ, ಸಂತ ಕವಿ ಸರ್ವಜ್ಞರು ಶ್ರೇಷ್ಠ ವೈಚಾರಿಕ ಚಿಂತಕರು. ಪರೋಪಕ್ಕಾಗಿಯೇ ಕವಿ ಸರ್ವಜ್ಞ ತಮ್ಮ ಜೀವನ ಮುಡುಪಿಟ್ಟವರು. ಸಮಾಜ ಸುಧಾರಣೆಗಾಗಿ ಬದುಕಿದವರು. ಆದರ್ಶ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದವರು. ವಿದ್ಯೆ, ಕೃಷಿ, ಆಹಾರ ಪದ್ದತಿ, ಆರೋಗ್ಯದ ಕುರಿತು ಅನೇಕ ತ್ರಿಪದಿ ರಚಿಸಿ ಸಮಾಜದ ಸುದಾರಣೆಗೆ ಶ್ರಮಿಸಿದ್ದಾರೆ. ಇವರ ವಚನಗಳ ಸಂಶೋಧನೆಗೆ ಇನ್ನೂ ಹೆಚ್ಚಿನ ಚಿಂತನೆ ನಡೆಯಬೇಕಿದೆ ಎಂದರು. ಮೂರೇ ಸಾಲಲ್ಲಿ ಸಾಹಿತ್ಯ ರಚಿಸುವ ಮೂಲಕ ಮನುಕುಲದ ಮಾರ್ಗದರ್ಶಿಯಾಗಿ ನಿಂತಿದ್ದಾರೆ. ಸಮಾಜ ತಿದ್ದುವ ಜತೆಗೆ ಮಾನವೀಯ ಮೌಲ್ಯ ಸಾರಿದ ಸರ್ವಜ್ಞರ ಬದುಕು ಮಾದರಿಯಾಗಿದೆ. ಜನರ ಮಧ್ಯ ಇದ್ದು ಅವರ ನೋವು, ಮೌಢ್ಯ, ಅನಕ್ಷರತೆ ಅರಗಿಸಿಕೊಳ್ಳಲಾಗದೇ ತಮ್ಮ ತ್ರಿಪದಿ ಮೂಲಕ ಸಿಟ್ಟು ಹೊರಹಾಕಿದರು. ಅವರೊಬ್ಬ ಕವಿ, ಹಿತಚಿಂತಕರಾಗಿದ್ದು, ಇಂತವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು. ಸರ್ವಜ್ಞ ಕವಿಯ ತ್ರಿಪದಿಗಳು ಇಂದಿಗೂ ಕನ್ನಡ ಸಾರಸ್ವತ ಲೋಕ ಬೆಳಗುತ್ತಿವೆ. ಅವರು ಸಮಾಜದ ಉದ್ದಾರಕ್ಕಾಗಿ ನಾಡು ಪರ್ಯಟನೆ ಮಾಡಿದರು. ಸರ್ವಜ್ಞರ ಕುರಿತು ಸಂಶೋಧನೆ, ಅಧ್ಯಯನ ಹಾಗೂ ಪ್ರಾಧಿಕಾರಕ್ಕೆ ಸರಕಾರ ಅನುದಾನ ನೀಡಬೇಕು. ಅಲ್ಲದೇ ಹಿಂದುಳಿದ ಕುಂಬಾರ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ನೀಲಪ್ಪ ಚಕ್ರಸಾಲಿ, ಉಪಾಧ್ಯಕ್ಷರಾದ ಭೀಮಪ್ಪ ಕುಂಬಾರ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕುಂಬಾರ, ಬಸಪ್ಪ ಕುಂಬಾರ, ಹನಮಂತಪ್ಪ ಕುಂಬಾರ, ಮಂಜುನಾಥ ಚಕ್ರಸಾಲಿ, ಸತೀಶ ಚಕ್ರಸಾಲಿ, ಪ್ರಮೋದ ಕುಂಬಾರ, ಈರಣ್ಣ ಚಕ್ರಸಾಲಿ, ಬಸವಣ್ಣೆವ್ವ ಚಕ್ರಸಾಲಿ, ಅನ್ನಪೂರ್ಣ ಕುಂಬಾರ, ಲಕ್ಷ್ಮಿ ಕುಂಬಾರ, ಚನ್ನವ್ವ ಕುಂಬಾರ, ಎಚ್.ಎಂ. ದೇವಗೀರಿ, ಕೆ.ಎ. ಬಳಿಗೇರ, ಎಂ.ಕೆ. ಲಮಾಣಿ, ಬಸವರಾಜ ತುಳಿ, ಬಸವರಾಜ ಚಿಕ್ಕತೋಟದ, ಸುರೇಶ ಅಕ್ಕಿ, ನಟರಾಜ ರಾನಡೆ, ಶಿವಲಿಂಗ ಅಡರಕಟ್ಟಿ, ಬಸವರಾಜ ರಾಜಮನಿ, ಈರಣ್ಣ ಅಂಗಡಿ ಇದ್ದರು.