ಕನ್ನಡ ಪ್ರೇಮ ಮೆರೆದಿದ್ದ ಚಿತ್ರಮಂದಿರ ನೆಲಸಮ!

| Published : Feb 14 2025, 12:34 AM IST

ಸಾರಾಂಶ

1976ರಲ್ಲಿ ಪ್ರಾರಂಭವಾಗಿದ್ದ ಸಂಜೋತಾ ಚಿತ್ರಮಂದಿರ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತಿತ್ತು. ಈ ಚಿತ್ರಮಂದಿರ ಪ್ರಾರಂಭವಾದ ದಿನದಿಂದ ಒಂದೇ ಒಂದು ಪರಭಾಷೆ ಚಿತ್ರವನ್ನು ಇಲ್ಲಿ ಪ್ರದರ್ಶಿಸಿರಲಿಲ್ಲ.

ಹುಬ್ಬಳ್ಳಿ:

ಬರೋಬ್ಬರಿ 4 ದಶಕಗಳಿಗೂ ಅಧಿಕ ಬರೀ ಕನ್ನಡ ಭಾಷೆಯ ಚಿತ್ರಗಳನ್ನೇ ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆಯುತ್ತಿದ್ದ ನಗರದ "ಸಂಜೋತಾ ಚಿತ್ರಮಂದಿರ " ಇದೀಗ ನೆಲಸಮವಾಗುತ್ತಿದೆ.

2 ದಿನದಿಂದ ಸುಜಾತಾ ಹಾಗೂ ಸಂಜೋತಾ ಚಿತ್ರಮಂದಿರಗಳ ಧರಾಶಾಹಿಯನ್ನಾಗಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಕನ್ನಡ ಚಿತ್ರಮಂದಿರಗಳನ್ನು ಕನ್ನಡಿಗರು ಕಳೆದುಕೊಂಡಂತಾಗಿದೆ.

ಇಂದಿರಾ ಗ್ಲಾಸ್‌ ಹೌಸ್‌ ಪಕ್ಕದಲ್ಲಿ ಸಂಜೋತಾ ಹಾಗೂ ಸುಜಾತಾ ಚಿತ್ರಮಂದಿರಗಳಿದ್ದವು. 1976ರಲ್ಲಿ ಪ್ರಾರಂಭವಾಗಿದ್ದ ಸಂಜೋತಾ ಚಿತ್ರಮಂದಿರ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತಿತ್ತು. ಈ ಚಿತ್ರಮಂದಿರ ಪ್ರಾರಂಭವಾದ ದಿನದಿಂದ ಒಂದೇ ಒಂದು ಪರಭಾಷೆ ಚಿತ್ರವನ್ನು ಇಲ್ಲಿ ಪ್ರದರ್ಶಿಸಿರಲಿಲ್ಲ. ನಿತ್ಯವೂ ಕನ್ನಡ ಡಿಂಡಿಮ ಮೊಳಗುತ್ತಿತ್ತು ಇಲ್ಲಿ. ಎಷ್ಟೇ ಒತ್ತಡ, ಬಲವಂತ ಬಂದರೂ ಇದರ ಮಾಲೀಕರು ಮಾತ್ರ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರ ಪ್ರದರ್ಶಿಸುವ ಮನಸು ಮಾಡಿರಲಿಲ್ಲ.

ಆದರೆ, ಸುಜಾತಾ ಚಿತ್ರಮಂದಿರದಲ್ಲಿ ಒತ್ತಡಕ್ಕೆ ಮಣಿದು ಒಂದು ಇಂಗ್ಲಿಷ್‌, ಮೂರು ಹಿಂದಿ ಚಿತ್ರಗಳನ್ನು ಪ್ರದರ್ಶಿಸಿದ್ದರು. ಉಳಿದಂತೆ ಅಲ್ಲೂ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಲಾಗಿದೆ. ಆದರೆ, ಸಂಜೋತಾದಲ್ಲಿ ಮಾತ್ರ ಕನ್ನಡಭಾಷೆ ಬಿಟ್ಟು ಬೇರೆ ಚಿತ್ರಗಳನ್ನು ಪ್ರದರ್ಶಿಸಿಯೇ ಇಲ್ಲ.

ಮೊದಲ ಚಿತ್ರ:

ನಟ ಶ್ರೀನಾಥ, ಮಂಜುಳಾ ಅಭಿನಯದ ‘ಪ್ರಣಯರಾಜ’ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ. ಆನಂತರ ರಾಜಕುಮಾರ, ಶ್ರೀನಾಥ, ಶಂಕರನಾಗ್‌, ಶಿವರಾಜಕುಮಾರ, ರವಿಚಂದ್ರನ್‌, ವಿಷ್ಣವರ್ಧನ, ಅಂಬರೀಶ, ಶಿವರಾಜಕುಮಾರ, ಪುನೀತರಾಜಕುಮಾರ, ರಾಘವೇಂದ್ರ ರಾಜಕುಮಾರ ಹೀಗೆ ಹತ್ತಾರು ನಟರ ನೂರಾರು ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಎಷ್ಟೋ ಚಿತ್ರಗಳು ಶತಮಾನೋತ್ಸವ ಕಂಡಿದ್ದುಂಟು.

ಸಂಜೋತಾ ಚಿತ್ರಮಂದಿರವನ್ನು ಡಿ.ಎನ್‌. ಸೂಜಿ ಎಂಬುವವರು ಪ್ರಾರಂಭಿಸಿದ್ದರು. ಅವರ ಸಹೋದರ ಮಹಾವೀರ ಸೂಜಿ ಇದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಈಗ ಈ ಇಬ್ಬರೂ ಇಲ್ಲ. ಮಹಾವೀರ ಸೂಜಿ ಅವರ ಪುತ್ರ ಅಮರ ಸೂಜಿ ಅವರೇ ನಿರ್ವಹಿಸುತ್ತಿದ್ದರು.

ಕಳೆದ ವೈಭವ:

ಕೊರೋನಾ ಎಫೆಕ್ಟ್‌, ಮಲ್ಟಿಫ್ಲೆಕ್ಸ್‌, ಮೊಬೈಲ್‌ ಹಾವಳಿಯಿಂದ ಚಿತ್ರಮಂದಿರದತ್ತ ಮುಖ ಮಾಡುವವರ ಸಂಖ್ಯೆ ಕಡಿಮೆಯಾಯಿತು. ಹೀಗಾಗಿ 2 ವರ್ಷದಿಂದ ಚಿತ್ರಮಂದಿರಗಳು ಬಂದ್‌ ಆಗಿದ್ದವು. ಇದೀಗ ಅವುಗಳನ್ನು ನೆಲಸಮ ಮಾಡಲಾಗುತ್ತಿದೆ. ಮುಂದೆ ಇಲ್ಲೂ ಯಾವುದಾದರೂ ಮಾಲ್‌ ಆರಂಭವಾಗಿ ಮಲ್ಟಿಫ್ಲೆಕ್ಸ್‌ಗೆ ವೇದಿಕೆಯಾಗುತ್ತದೆಯೋ ಅಥವಾ ಮತ್ತೇನು ಆಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು. ಆದರೆ, ಕನ್ನಡಪ್ರೇಮ ಬಿಂಬಿಸುತ್ತಿದ್ದ ಚಿತ್ರಮಂದಿರಗಳೆರಡನ್ನು ಹುಬ್ಬಳ್ಳಿಗರು ಕಳೆದುಕೊಂಡಂತಾಗಿರುವುದಂತೂ ಸತ್ಯ.

ಚಕ್ಕಡಿ ಹೂಡಿಕೊಂಡು ಬರ್‍ತಾ ಇದ್ದರು!

ಸುಜಾತಾ, ಸಂಜೋತಾ ಟಾಕೀಸ್‌ ಅಂದರೆ ಹಳ್ಳಿಗರಿಗೆ ಬಲು ಅಚ್ಚುಮೆಚ್ಚು. ಅಲ್ಲಿ ಬರೀ ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸಲಾಗುತ್ತಿತ್ತು. ಅದಕ್ಕೆ ಸುತ್ತಮುತ್ತಲಿನ ಹಳ್ಳಿಗಳ ಜನರು ಚಕ್ಕಡಿ, ಟ್ಯ್ರಾಕ್ಟರ್‌ ಮಾಡಿಕೊಂಡು ಜಾತ್ರೆಗೆ ಹೋದಂತೆ ಆಗಮಿಸಿ ಇಲ್ಲಿ ಚಿತ್ರ ವೀಕ್ಷಿಸಿ ಮರಳುತ್ತಿದ್ದರು. ಚಕ್ಕಡಿ ಹೂಡಿಕೊಂಡು ಸಿನಿಮಾ ನೋಡಲು ಬರುತ್ತಿದ್ದ ಮಹಾನಗರದ ಏಕೈಕ ಚಿತ್ರಮಂದಿರ ಸಂಜೋತಾ. ಇದಕ್ಕೆ ಕಾರಣ ಕನ್ನಡ ಸಿನಿಮಾಗಳು. ಇದೀಗ ಅವು ಇಲ್ಲದ ಕಾರಣ ಆ ನೆನಪುಗಳಷ್ಟೇ ಜನರ ಮನದಲ್ಲಿ ಉಳಿಯಲಿವೆ.

ಜನರು ಚಿತ್ರಮಂದಿರಗಳತ್ತ ಬಾರದಿರುವುದರಿಂದ ಸಿನೆಮಾ ನಡೆಯುತ್ತಿಲ್ಲ. ಕೊರೋನಾ ಎಫೆಕ್ಟ್‌ನಿಂದ ಚಿತ್ರಮಂದಿರ ಮುಚ್ಚಬೇಕೆಂದು ನಿರ್ಧರಿಸಲಾಗಿತ್ತು. ಇದೀಗ ನೆಲಸಮ ಮಾಡಲಾಗುತ್ತಿದೆ. ಮುಂದೆ ಏನು ಮಾಡಬೇಕು ಎಂಬುದು ನಂತರ ತೀರ್ಮಾನಿಸುತ್ತೇವೆ ಎಂದು ಚಿತ್ರಮಂದಿರದ ಮಾಲೀಕ ಅಮರ ಸೂಜಿ ಹೇಳಿದರು.