ಕೆಸರುಗದ್ದೆಯಂತಾದ ದೂದಿಹಳ್ಳಿ ಸರ್ಕಾರಿ ಶಾಲೆಯ ಆವರಣ

| Published : Jul 17 2025, 12:35 AM IST / Updated: Jul 17 2025, 12:36 AM IST

ಸಾರಾಂಶ

ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಆವರಣ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಪರಿಣಾಮ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಹಿರೆಕೇರೂರು: ಶಾಲಾ ಆವರಣ ಅಕ್ಷರಶಃ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಆವರಣದಲ್ಲಿ ವಿದ್ಯಾರ್ಥಿಗಳು ನಡೆದಾಡಲೂ ಹರಸಾಹಸ ಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಕೆಲವು ಮಕ್ಕಳು ಕೆಸರಲ್ಲಿ ಜಾರಿಬಿದ್ದು ಬಟ್ಟೆಗಳನ್ನು ದಿನನಿತ್ಯ ಕೊಳೆ ಮಾಡಿಕೊಂಡು ಮನೆಗೆ ಹೋಗುವ ಪರಿಸ್ಥಿತಿ ಇದೆ.ಹೌದು, ಶತಮಾನ ಕಂಡ ತಾಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದ ವ್ಯಥೆ ಇದು. ಈ ಶಾಲೆಯಲ್ಲಿ 550 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಆವರಣ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಪರಿಣಾಮ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಅವರಣಕ್ಕೆ ಬಂದರೆ ಮಕ್ಕಳು ನಿತ್ಯ ಕೆಸರಿನಲ್ಲಿಯೇ ಓಡಾಡುವ ಪರಿಸ್ಥಿತಿ ಇದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಅನುದಾನವನ್ನು ವ್ಯಯಿಸುತ್ತವೆ. ಆದರೆ ಸಣ್ಣ ಮಕ್ಕಳು ಆಟವಾಡುವ ಆವರಣ ಮಾತ್ರ ಮಳೆಗಾಲ ಬಂದರೆ ಕೆಸರುಗದ್ದೆಯಾಗಿ ಆಟವಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ.ಬಹಳ ವರ್ಷಗಳಿಂದಲೂ ಈ ಸಮಸ್ಯೆಯಿದೆ. ಪ್ರಸ್ತುತ ವರ್ಷ ಸಮಸ್ಯೆ ತೀವ್ರ ಉಲ್ಬಣಿಸಿದೆ. ಆವರಣದಲ್ಲಿ ನೀರು ನಿಂತು ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಮಕ್ಕಳ ಆಟೋಟಕ್ಕೆ ಹಾಗೂ ದೈನಂದಿನ ಶಾಲಾ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ. ಮಕ್ಕಳಲ್ಲಿ ರೋಗಗಳು ಹರಡುವ ಮುನ್ನ ಮೇಲಧಿಕಾರಿಗಳು ಪರಿಶೀಲಿಸಿ ಸುಗಮ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.

ಇಲಾಖೆಯವರಿಗೆ ಪತ್ರ: .ನಮ್ಮ ಗ್ರಾಮದ ಶಾಲಾ ಆವರಣ ದನಗಳೂ ಓಡಾಡುವ ಸ್ಥಿತಿಯಲ್ಲಿಲ್ಲ. ಅದರೆ ನಮ್ಮ ಗ್ರಾಮದ ಮಕ್ಕಳಂತೂ ದಿನನಿತ್ಯ ಕೆಸರಲ್ಲಿ ನಡೆದಾಡಿಕೊಂಡು ವಿದ್ಯೆ ಕಲಿಯಬೇಕಿದೆ. ಶಾಲಾ ಅವರಣದ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಬಣಕಾರ ತಿಳಿಸಿದರು.

ಕ್ರಿಯಾಯೋಜನೆ: ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಶಾಲಾ ಆವರಣದ ಬಗ್ಗೆ ಗ್ರಾಮ ಪಂಚಾಯಿತಿ ಕ್ರಿಯಾಯೋಜನೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಅವರಣವನ್ನು ಸಮತಟ್ಟು ಮಾಡಿ ಅಭಿವೃದ್ಧಿಪಡಿಸಲು ಪತ್ರ ಬರೆಯಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ತಿಳಿಸಿದರು.