ಕೆಸರು ಗದ್ದೆಯಾದ ಶಹಾಬಾದ-ಜೇವರ್ಗಿ ರಸ್ತೆ

| Published : Jul 07 2025, 11:48 PM IST

ಸಾರಾಂಶ

ನಗರದಲ್ಲಿ ನಿತ್ಯ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿರುವ ಹೊಂಡಗಳಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಶಹಾಬಾದ: ನಗರದಲ್ಲಿ ನಿತ್ಯ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿರುವ ಹೊಂಡಗಳಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಶಹಾಬಾದ ಜೇವರ್ಗಿ ರಸ್ತೆ ಪ್ರಯಾಣ ಎಂದರೆ ಎದೆ ಝಲ್‌ ಎನ್ನುವ ಮಟ್ಟಿಗೆ ರಸ್ತೆ  ತಗ್ಗು-ದಿನ್ನೆಗಳಿಂದ, ಧೂಳಿನಿಂದ ಹಾಗೂ ಮಳೆ ಬಂದರೆ ಕೆಸರು ಗದ್ದೆಯಾಗಿ ಆವರಿಸಿಕೊಳ್ಳುತ್ತದೆ.

ಇಲ್ಲಿ ಸಂಚರಿಸುವ ಜನರು ನಿತ್ಯ ಧೈರ್ಯ ಮಾಡಿ ಹೊರಡುತ್ತಾರೆ. ರಸ್ತೆಯ ಮಧ್ಯೆ ಆಳುದ್ದ ತೆಗ್ಗುಗಳು ನಿರ್ಮಾಣವಾದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅದರಲ್ಲೂ ನಗರದ ಕನಕದಾಸ ವೃತ್ತದ ಬಳಿಯಿಂದ ತೊನಸನಹಳ್ಳಿ(ಎಸ್) ಗ್ರಾಮದ ಮಧ್ಯೆ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸಾರ್ವಜನಿಕರಿಗೆ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿದ್ದರಿಂದ ತೆಗ್ಗು ಕಾಣದೇ ಬಿದ್ದ ಘಟನೆಗಳು ನಡೆದಿವೆ. ಇತ್ತೀಚೆಗೆ ಸುರಿದ ಮಳೆಯಿಂದ ನಿತ್ಯ ಸಂಚಾರ ಮಾಡುವ ಲಘು ವಾಹನ ಹಾಗೂ ಭಾರಿ ವಾಹನಗಳಿಂದ ಚಿಕ್ಕ ಪುಟ್ಟ ಹೊಂಡಗಳು ಭಾರಿ ಗಾತ್ರದ ಹೊಂಡಗಳಾಗಿ ಪರಿವರ್ತನೆಯಾಗಿವೆ.

ಈ ರಸ್ತೆ ನಗರದಿಂದ ಹೊರಡುವ ಮುಖ್ಯ ಮಾರ್ಗವಾಗಿರುವುದರಿಂದ  ಸಾವಿರಾರು ಜನರು ಪ್ರಯಾಣಿಸುತ್ತಾರೆ. ಹೀಗಾಗಿ  ರಸ್ತೆಯ ಮೇಲೆ ಸಂಚರಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಿದೆ.

ಹದಗೆಟ್ಟ ರಸ್ತೆಯಿಂದ ಈ ಭಾಗದ ಜನರು ಬಹುದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು. ಕನಿಷ್ಠ ಪಕ್ಷ  ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.