ಸಾರಾಂಶ
ಕಳೆದ ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಪತ್ರಿವರ್ಷ ಮೂರು ಬಾರಿ ಆರೋಗ್ಯ ಶಿಬಿರವನ್ನು ಕೈಗೊಂಡು ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ತಿಳಿಸಿದರು
ಕನ್ನಡಪ್ರಭವಾರ್ತೆ ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಪತ್ರಿವರ್ಷ ಮೂರು ಬಾರಿ ಆರೋಗ್ಯ ಶಿಬಿರವನ್ನು ಕೈಗೊಂಡು ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ತಿಳಿಸಿದರು.ಅವರು ಗುರುವಾರ ನಗರಸಭೆ ವ್ಯಾಪ್ತಿಯ ರಮಾಬಾಯಿ ಸಮುದಾಯದ ಭವನದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪೌರಕಾರ್ಮಿಕರು ಕಡ್ಡಾಯವಾಗಿ ಹಾಜರಿದ್ದು, ತಜ್ಞ ವೈದ್ಯರಿಂದ ತಮ್ಮ ಆರೋಗ್ಯವನ್ನು ಪರೀಕ್ಷೆಗೆ ಒಳಪಡಿಸಬೇಕು. ವೈದ್ಯರು ಎಲ್ಲಾ ರೀತಿಯ ಪರೀಕ್ಷೆ ನಡೆಸಿ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡುತ್ತಾರೆ. ಇಂದಿನ ಆರೋಗ್ಯ ತಪಾಸಣಾ ಶಿಬಿರದಲ್ಲೂ ನಗರಸಭೆಯ ಸುಮಾರು 94ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಆರೋಗ್ಯಾಧಿಕಾರಿ ಗಣೇಶ್, ವರ್ಷಕ್ಕೆ ಮೂರು ಬಾರಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ಪೌರಕಾರ್ಮಿಕರು ಸ್ವಚ್ಛತೆಯೂ ಸೇರಿದಂತೆ ಯಾವುದೇ ಕೆಲಸ ನಿರ್ವಹಿಸಬೇಕಾದಲ್ಲಿ ಅವರಿಗೆ ರಕ್ಷಾ ಕವಚ ನೀಡಲಾಗುತ್ತದೆ. ಪೌರಕಾರ್ಮಿಕರ ಆರೋಗ್ಯದ ಬಗ್ಗೆ ನಗರಸಭೆ ಹೆಚ್ಚು ಗಮನ ನೀಡುತ್ತಾ ಬಂದಿದೆ. ಪೌರಕಾರ್ಮಿಕರೂ ಸಹ ಆರೋಗ್ಯ ತಪಾಸಣೆಗೆ ಸ್ವಯಂ ಪ್ರೇರಣೆಯಿಂದ ಒಳಗಾಗುತ್ತಾರೆಂದರು.
ನಗರಸಭೆ ಉಪಾಧ್ಯಕ್ಷೆ ಓ. ಸುಜಾತ ಮಾತನಾಡಿ, ಈ ಹಿಂದೆ ಪೌರಕಾರ್ಮಿಕರ ರಕ್ಷಣೆಯ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಅವರ ಆರೋಗ್ಯದ ಬಗ್ಗೆ ನಗರಸಭೆ ಆಡಳಿತ ಹೆಚ್ಚು ಮುತುವರ್ಜಿ ವಹಿಸುತ್ತಿದೆ. ವಿಶೇಷವಾಗಿ ಕೊರೋನಾದಂತಹ ಭಯಾನಕ ರೋಗಗಳನ್ನು ತಡೆಯಲು ಪೌರಕಾರ್ಮಿಕರ ಸೇವಾ ಕಾರ್ಯವೇ ಪ್ರಮುಖವಾಗಿದೆ. ಆದ್ದರಿಂದ ಅವರ ಆರೋಗ್ಯ ತಪಾಸಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.ಸದಸ್ಯ ಕೆ. ವೀರಭದ್ರಪ್ಪ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಜೈತುಂಬಿ, ಸದಸ್ಯರಾದ ಬಿ.ಟಿ. ರಮೇಶ್‌ಗೌಡ, ಎಂ.ಜೆ. ರಾಘವೇಂದ್ರ, ಆರೋಗ್ಯಾಧಿಕಾರಿ ಸುನೀಲ್, ಗೀತಾಕುಮಾರಿ, ರುದ್ರಮುನಿ, ಡಾ. ಸಂದೀಪ್ ಮುಂತಾದವರು ಉಪಸ್ಥಿತರಿದ್ದರು.