ಕುಡಿಯುವ ನೀರಿನ ಕಾಮಗಾರಿಗೆ ನಗರಸಭೆ ಹಣ ಕೊಟ್ಟಿಲ್ಲ: ಸಚಿವ ಬಿ.ಎಸ್.ಸುರೇಶ್

| Published : Mar 21 2025, 12:34 AM IST

ಕುಡಿಯುವ ನೀರಿನ ಕಾಮಗಾರಿಗೆ ನಗರಸಭೆ ಹಣ ಕೊಟ್ಟಿಲ್ಲ: ಸಚಿವ ಬಿ.ಎಸ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ನೀರಿಗೆ ಹೊಸದಾಗಿ ವಿತರಣಾ ಕೊಳವೆ ಮಾರ್ಗಗಳ ಅಳವಡಿಕೆ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ಪುನರುಜ್ಜೀವನಗೊಳಿಸಿ ಕಾವೇರಿ ನೀರು ಪೂರೈಕೆಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ೩.೫೦ ಕೋಟಿ ರು. ಅಗತ್ಯವಿದೆ. ೧೮.೬.೨೦೨೪ರಲ್ಲೇ ಪೌರಾಯುಕ್ತರಿಗೆ ಅಂದಾಜುಪಟ್ಟಿ ಕಳುಹಿಸಿದ್ದರೂ ಹಣ ಬಿಡುಗಡೆಗೆ ಕ್ರಮ ಕೈಗೊಂಡಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕೆಎಚ್‌ಬಿ ಬಡಾವಣೆಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ನಗರಸಭೆ ಹಣ ಬಿಡುಗಡೆ ಮಾಡದಿರುವುದರಿಂದ ಇದುವರೆಗೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಡಿಯುವ ನೀರಿಗೆ ಹೊಸದಾಗಿ ವಿತರಣಾ ಕೊಳವೆ ಮಾರ್ಗಗಳ ಅಳವಡಿಕೆ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ಪುನರುಜ್ಜೀವನಗೊಳಿಸಿ ಕಾವೇರಿ ನೀರು ಪೂರೈಕೆಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ೩.೫೦ ಕೋಟಿ ರು. ಅಗತ್ಯವಿದೆ. ೧೮.೬.೨೦೨೪ರಲ್ಲೇ ಪೌರಾಯುಕ್ತರಿಗೆ ಅಂದಾಜುಪಟ್ಟಿ ಕಳುಹಿಸಿದ್ದರೂ ಹಣ ಬಿಡುಗಡೆಗೆ ಕ್ರಮ ಕೈಗೊಂಡಿರುವುದಿಲ್ಲ ಎಂದರು.

ಕೆಎಚ್‌ಬಿ ಬಡಾವಣೆಯು ೨೦೧೯ರಲ್ಲಿ ನಗರಸಭೆಗೆ ಹಸ್ತಾಂತರವಾಗಿದೆ. ಆ ಸಮಯದಲ್ಲಿ ಗೃಹ ಮಂಡಳಿಯಿಂದ ನಗರಸಭೆಗೆ ೫.೫೦ ಕೋಟಿ ರು. ಪಾವತಿಸಿದ್ದು, ಈ ಅನುದಾನದಲ್ಲಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ೪.೪೬ ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಬಡಾವಣೆ ನಿರ್ಮಾಣ ಸಮಯದಲ್ಲೇ ಗೃಹ ಮಂಡಳಿ ಅಳವಡಿಸಿರುವ ನೀರು ಸರಬರಾಜು ಮಾರ್ಗಗಳು ಬಳಕೆಯಾಗದೆ ದುರಸ್ತಿಯಲ್ಲಿದ್ದು, ಉಳಿಕೆ ೧.೦೩ ಕೋಟಿ ರು. ಹಣದಲ್ಲಿ ಬಡಾವಣೆಯ ನೀರು ಸರಬರಾಜು ವ್ಯವಸ್ಥೆ ಮತ್ತು ಬೀದಿ ದೀಪಗಳ ಅಳವಡಿಸುವ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಆದ್ಯತೆಗೆ ಅನುಗುಣವಾಗಿ ಕ್ರಮ ಜರುಗಿಸಲಾಗುವುದು ಎಂದರು.

ಬಡಾವಣೆಗೆ ಕಾವೇರಿ ನೀರು ಸರಬರಾಜು ಮಾಡಲು ೯೩.೫೯ ಲಕ್ಷ ರು.ಗಳನ್ನು ಗೃಹಮಂಡಳಿ ವತಿಯಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಭರಿಸಲಾಗಿದೆ. ಹಾಲಿ ಇರುವ ಮೇಲ್ಮಟ್ಟ ಜಲ ಸಂಗ್ರಹಾಗಾರವನ್ನು ಹೊಳಲು ಸರ್ಕಲ್‌ನಿಂದ ಕೆಎಚ್‌ಬಿ ಬಡಾವಣೆಯವರೆಗೂ ಅಳವಡಿಸಲಾಗಿದ್ದ ೨೦೦ ಮಿ.ಮೀ. ವ್ಯಾಸದ ಫೀಡರ್ ಕೊಳವೆ ಮಾರ್ಗವನ್ನು ಹಾಗೂ ಪಂಪುಗಳ ದುರಸ್ತಿಗೆ ೧೬.೩೪ ಲಕ್ಷ ರು.ಗಳನ್ನು ಗೃಹಮಂಡಳಿ ವತಿಯಿಂದ ಮಂಡಳಿಗೆ ಭರಿಸಿದ್ದರಿಂದ ದುರಸ್ತಿ ಕಾಮಗಾರಿ ಕೈಗೊಂಡು ಜಲ ಸಂಗ್ರಹಾಗಾರಕ್ಕೆ ನೀರು ತುಂಬಿಸಿ ಹಸ್ತಾಂತರಿಸಲಾಗಿದೆ ಎಂದರು.

ಈ ಬಡಾವಣೆಯಲ್ಲಿ ಒಟ್ಟು ೧೪೬೪ ನಿವೇಶನಗಳಿದ್ದು, ೨೩೪ ಮನೆಗಳು ನಿರ್ಮಾಣವಾಗಿವೆ. ಒಟ್ಟು ೧೨೪೮ ಜನಸಂಖ್ಯೆಯನ್ನು ಒಳಗೊಂಡಿದ್ದು, ಇಲ್ಲಿನ ನೀರಿನ ಗುಣಮಟ್ಟವನ್ನು ಆಗಾಗ ಪರೀಕ್ಷೆಗೊಳಪಡಿಸಲಾಗುತ್ತಿದೆ. ಹಲವು ವರ್ಷಗಳಿಂದ ನೀರು ಸರಬರಾಜು ವಿತರಣಾ ಕೊಳವೆ ಮಾರ್ಗಗಳನ್ನು ಬಳಸದಿದ್ದ ಕಾರಣ ಕೊಳವೆಗಳು ಹಾಳಾಗಿವೆ. ಇವುಗಳ ದುರಸ್ತಿ ಕಾಮಗಾರಿಗೆ ನೀರು ಸರಬರಾಜು ಮಂಡಳಿ ೨೦೨೧-೨೨ರ ದರಪಟ್ಟಿಯಂತೆ ೬೪.೫೦ ಲಕ್ಷ ರು.ಗಳಿಗೆ ಅಂದಾಜುಪಟ್ಟಿ ತಯಾರಿಸಿ ೧೨.೦೮.೨೦೨೨ರಲ್ಲೇ ನಗರಸಭೆಗೆ ಸಲ್ಲಿಸಿದ್ದರೂ ಮಂಡಳಿಗೆ ಹಣ ಭರಿಸಿಲ್ಲವೆಂದು ತಿಳಿಸಿದ್ದಾರೆ.

ಪ್ರಸ್ತುತ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಮರ್ಪಕ ನೀರು ಸರಬರಾಜು ಮಾಡಲು ೩.೫೦ ಕೋಟಿ ರು. ಹಣದ ಅವಶ್ಯಕತೆ ಇದ್ದು, ಇದನ್ನು ನಗರಸಭೆ ಭರಿಸಿದರೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.