ನಗರಸಭೆ ಆಡಳಿತ ಮತ್ತೆ ಕಾಂಗ್ರೆಸ್ ತೆಕ್ಕೆಗೆ

| Published : Aug 30 2024, 01:11 AM IST

ಸಾರಾಂಶ

ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದೆ. ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ನಗರದ 31ನೇ ವಾರ್ಡ್ನ ಜೈತುಂಬಿ ಮಾಲೀಕ್‌ಸಾಬ್ ಚುನಾವಣೆ ಮೂಲಕ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ 8ನೇ ವಾರ್ಡ್ ಸದಸ್ಯೆ ಓ. ಸುಜಾತಪಾಲಯ್ಯ ಅವಿರೋಧವಾಗಿ ಆಯ್ಕೆಯಾದರು. ಉಪವಿಭಾಗಾಧಿಕಾರಿ ಎಂ. ಕಾರ್ತಿಕ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದೆ. ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ನಗರದ 31ನೇ ವಾರ್ಡ್ನ ಜೈತುಂಬಿ ಮಾಲೀಕ್‌ಸಾಬ್ ಚುನಾವಣೆ ಮೂಲಕ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ 8ನೇ ವಾರ್ಡ್ ಸದಸ್ಯೆ ಓ. ಸುಜಾತಪಾಲಯ್ಯ ಅವಿರೋಧವಾಗಿ ಆಯ್ಕೆಯಾದರು. ಉಪವಿಭಾಗಾಧಿಕಾರಿ ಎಂ. ಕಾರ್ತಿಕ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ 1ನೇ ವಾರ್ಡ್ನ ಬಿಜೆಪಿ ಸದಸ್ಯೆ ಸಾಕಮ್ಮ 11 ಮತಗಳನ್ನು ಪಡೆದು ಪರಾಭವಗೊಂಡರು. ಗೆದ್ದ ಅಭ್ಯರ್ಥಿ ಜೈತುಂಬಿ 18 ಮತಗಳನ್ನು ಪಡೆದರು. ಕಾಂಗ್ರೆಸ್ ಸದಸ್ಯೆ ಎಂ. ಸಾವಿತ್ರಮ್ಮ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ನಾಲ್ಕನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜು ನೀಡಿದ ರಾಜೀನಾಮೆ ನೀಡಿದ್ದರು. ಒಟ್ಟು 29 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನಗರಸಭೆಗೆ ಆಗಮಿಸಿದ ಶಾಸಕ ಟಿ. ರಘುಮೂರ್ತಿ, ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಅಭಿನಂದಿಸಿದರು. ಮತ ನೀಡಿದ ಪಕ್ಷದ ಎಲ್ಲಾ ಸದಸ್ಯರಿಗೂ ಅಭಿನಂದನೆ ತಿಳಿಸಿ ನಗರದ ಸರ್ವತೋಮುಖ ಅಭಿವೃದ್ದಿಗೆ ಚುನಾಯಿತ ಸದಸ್ಯರು ಕೈಜೋಡಿಸುವಂತೆ ಮನವಿ ಮಾಡಿದರು.

2018ರಿಂದ ಇಲ್ಲಿಯವರೆಗೂ ಸತತವಾಗಿ ಕಾಂಗ್ರೆಸ್ ಪಕ್ಷ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಾಗರೀಕರಿಗೆ ಉತ್ತಮ ಆಡಳಿತ ನೀಡುತ್ತಿದೆ. ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯೂ ಸಹ ಚುನಾವಣೆಗೆ ಸ್ಪರ್ಧಿಸಿದರೂ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುತ್ತಾರೆ ಎಂದರು.

ಪ್ರಸ್ತುತ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮಹಿಳೆಗೆ ಮೀಸಲಿತ್ತು. ಪಕ್ಷದ ಏಕೈಕ ಬಿಸಿಎಂ(ಬಿ), ಮಹಿಳಾ ಅಭ್ಯರ್ಥಿ ಎಂ.ಸಾವಿತ್ರಮ್ಮ ಆದಾಯ ಏರಿಕೆ, ಹಾಗೂ ಅಗತ್ಯ ದಾಖಲಾತಿ ನೀಡದಿದ್ದರಿಂದ ಬಿಸಿಎಂ(ಎ) ಮಹಿಳೆಗೆ ಅವಕಾಶ ಮಾಡಿಕೊಟ್ಟಿದ್ದು ನಮ್ಮ ಪಕ್ಷಕ್ಕೆ ವರದಾನವಾಗಿದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಬೇಕೆಂಬ ಬಗ್ಗೆ ಸೌಹಾರ್ದಿತವಾಗಿ ಚರ್ಚಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಯಾರಲ್ಲೂ ಅಸಮಧಾನವಿಲ್ಲ ಎಂದು ಹೇಳಿದರು.

ಈ ವೇಳೆ ತಹಶೀಲ್ದಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭಾ ಸದಸ್ಯರಾದ ವೈ. ಪ್ರಕಾಶ್, ಆರ್. ರುದ್ರನಾಯಕ, ಟಿ. ಮಲ್ಲಿಕಾರ್ಜುನ್, ಕವಿತಾಬೋರಯ್ಯ, ಟಿ. ಶಿವಕುಮಾರ್, ಪ್ರಮೋದ್, ಸುಮಾ, ಎಸ್. ಜಯಣ್ಣ, ಸಿ.ಎಂ. ವಿಶುಕುಮಾರ್, ಕವಿತಾನಾಯಕಿ, ಹೊಯ್ಸಳಗೋವಿಂದ, ಸಿ.ಬಿ. ಜಯಲಕ್ಷ್ಮೀ, ಎಂ. ನಾಗಮಣಿ, ಸುಮಕ್ಕ, ಎಂ.ಜೆ. ರಾಘವೇಂದ್ರ, ಕವಿತಾ, ನಿರ್ಮಲ, ತಿಪ್ಪಮ್ಮ, ವಿರೂಪಾಕ್ಷಿ, ಆರ್. ಮಂಜುಳಾ, ಚಳ್ಳಕೆರೆಯಪ್ಪ, ಸಿ. ಶ್ರೀನಿವಾಸ್, ಬಿ.ಟಿ. ರಮೇಶ್‌ಗೌಡ, ಕೆ. ವೀರಭದ್ರಯ್ಯ, ಪಾಲಮ್ಮ, ಪ್ರಶಾಂತ್‌ಕುಮಾರ್, ನಾಮಿನಿ ಸದಸ್ಯರಾದ ಕೆ.ಎನ್. ನಟರಾಜ್, ಬಡಗಿಪಾಪಣ್ಣ, ಆರ್. ವೀರಭದ್ರಪ್ಪ, ಮಹಮ್ಮದ್‌ಅನ್ವರ್, ನೇತಾಜಿ ಪ್ರಸನ್ನ, ಪಿಎಸ್‌ಐ ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.