ಪದಗ್ರಹಣಕ್ಕೆ ಕಲ್ಯಾಣ ಮಂಟಪದಂತಾದ ನಗರಸಭೆ ಕಚೇರಿ

| Published : Jul 11 2025, 01:47 AM IST

ಸಾರಾಂಶ

ಪ್ರಧಾನ ರಸ್ತೆಯಲ್ಲಿ ಮರು ಡಾಂಬರಿಕರಣ ಕಾಮಗಾರಿ ಮಾಡಿದ್ದು ಅಂಬಿಕಾ ಸ್ಟುಡಿಯೋ ಮುಂದಿನ ರಸ್ತೆಗೆ ಡಾಂಬರು ಹಾಕದೇ ಹೋಗಿರುವುದು.

ಕನ್ನಡಪ್ರಭ ವಾರ್ತೆ ಹಿರಿಯೂರು

ಇದು ನಗರಸಭೆ ಕಚೇರಿಯೋ, ಮದುವೆ ಕಾರ್ಯಕ್ರಮಕ್ಕೆ ಸಿದ್ಧಗೊಂಡಿರೋ ಕಲ್ಯಾಣ ಮಂಟಪವೋ ಎಂಬ ವಾತಾವರಣ ಗುರುವಾರ ನಗರದ ನಗರಸಭೆ ಕಚೇರಿಯನ್ನು ಗಮನಿಸಿದವರಿಗೆ ಅನಿಸುತ್ತಿತ್ತು. ಮೂವರು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣಕ್ಕೆ ನವ ವಧುವಂತೆ ಸಿಂಗಾರಗೊಂಡ ನಗರಸಭೆ ಕಚೇರಿ ಬಾಗಿಲಿಗೆ ಹೂವಿನ ಸಿಂಗಾರ, ಫ್ಲೆಕ್ಸ್ ಗಳು, ರಾತ್ರೋರಾತ್ರಿ ಸಿದ್ಧಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗಳು, ಅವರ ಕೊಠಡಿಗಳಿಗೆ ಸಿಂಗಾರ ಹೀಗೇ ಇಡೀ ನಗರಸಭೆಯಲ್ಲಿ ಹಬ್ಬದ ವಾತಾವರಣ.

ಕಚೇರಿಯ ಮೂರು ಕೊಠಡಿಗಳನ್ನು ಸಿಂಗಾರಗೊಳಿಸಿ ಬೋರ್ಡ್ ಹಾಕಿ ಪೂಜೆ ಪುನಸ್ಕಾರ ಸಾಂಗೋಪಾಂಗವಾಗಿ ನಡೆಯತೊಡಗಿದ್ದವು. ಕಚೇರಿ ಆವರಣದಲ್ಲಿ ವಿವಿಧ ಮುಖಂಡರು ಶುಭಾಶಯ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆವರಣದಲ್ಲಿ ಶಾಮಿಯಾನ ಹಾಕಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅ.5ಕ್ಕೆ ಮುಗಿಯಲಿದೆ ಎನ್ನುವ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯ ಪದಗ್ರಹಣಕ್ಕೆ ಇಷ್ಟೊಂದು ಆಡಂಬರದ ಪದಗ್ರಹಣ ಬೇಕಿತ್ತಾ ಎಂದು ಹಲವಾರು ಸಾರ್ವಜನಿಕರು ಗೊನಗಿಕೊಳ್ಳುತ್ತಿದ್ದದ್ದು ಕಂಡು ಬಂತು. ಸಾರ್ವಜನಿಕರು ಕಚೇರಿ ಕೆಲಸಕ್ಕೆ ಬಂದು ಇವತ್ತೇನು ಕೆಲಸ ಆಗುವುದಿಲ್ಲ ಎಂದು ಹಿಂತಿರುಗುತ್ತಿದ್ದದ್ದು ಗುರುವಾರ ನಗರಸಭೆಯಲ್ಲಿ ಕಂಡು ಬಂತು. ಇದೆಲ್ಲದರ ನಡುವೆ ನಗರಸಭೆ ಸದಸ್ಯ ವಿಠ್ಠಲ ಪಾಂಡುರಂಗ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಸಮಿತಿಯ ಅಧ್ಯಕ್ಷರಾಗಿ, ಎಂ.ಡಿ.ಸಣ್ಣಪ್ಪನವರು ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ರತ್ನಮ್ಮನವರು ನಗರ ಯೋಜನೆ ಮತ್ತು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.

ರಸ್ತೆ ಟೆಂಡರ್ ಕರೆಯದೆ ಕೆಲಸ ಮುಗಿಸಿದ ಆರೋಪ:

ನಗರದ ಗಾಂಧಿ ವೃತ್ತದಿಂದ ರಂಜಿತಾ ಹೋಟೆಲ್ ವರೆಗಿನ 1.5 ಕಿಮೀ ಉದ್ದದ ಪ್ರಧಾನ ರಸ್ತೆಯ ಮರು ಡಾoಬರೀಕರಣ ನಡೆಸಲಾಗಿದೆ. ವಿಶೇಷ ಅನುದಾನದಲ್ಲಿ ಈ ಡಾಂಬರೀಕರಣ ನಡೆದಿದ್ದು ಅತ್ತ ವಾಹನಗಳು ಓಡಾಡುತ್ತಲೇ ಇದ್ದರೂ ಸಹ ಕಾಮಗಾರಿ ಮುಗಿಸಲಾಗಿದೆ. ರಸ್ತೆ ಡಾಂಬರಿಕರಣ ಮಾಡಿದ್ದು ಒಂದು ಕಂಪನಿ, ಡಾಂಬರಿಕರಣದ ಜವಾಬ್ದಾರಿ ಇನ್ನೊಂದು ಕಂಪನಿಯದ್ದು ಎನ್ನಲಾಗಿದ್ದು ಟೆಂಡರ್ ಕರೆಯದೆ ಕೆಲಸ ಮುಗಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸದಸ್ಯರೊಬ್ಬರು ಆರೋಪಿಸಿದರು.

ಇದೆಲ್ಲಾ ಸಾಲದು ಎಂಬಂತೆ ಪ್ರಧಾನ ರಸ್ತೆಯ ಅಂಬಿಕಾ ಸ್ಟುಡಿಯೋ ಮುಂಭಾಗ ಒಂದಷ್ಟು ಅಡಿಗಳಷ್ಟು ರಸ್ತೆಗೆ ಡಾಂಬರು ಮಾಡದೇ ಹೋಗಿದ್ದು ಇದು ಯಾವ ಮಾದರಿಯ ಕಾಮಗಾರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.