ಪುರಸಭೆಗೆ ಆಡಳಿತಾಧಿಕಾರಿ ಇಲ್ಲ, ಅಧ್ಯಕ್ಷರೂ ಇಲ್ಲ!

| Published : Jan 23 2025, 12:48 AM IST

ಸಾರಾಂಶ

ಇಲ್ಲಿನ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕೃತವಾಗಿ ೨೬ ದಿನ ಕಳೆದರೂ ಪುರಸಭೆ ಆಡಳಿತಾಧಿಕಾರಿ ನೇಮಕವಾಗಿಲ್ಲ. ಇತ್ತ ಪುರಸಭೆ ಅಧ್ಯಕ್ಷರೂ ಆಯ್ಕೆಯಾಗಿಲ್ಲ.

ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕೃತವಾಗಿ ೨೬ ದಿನ ಕಳೆದರೂ ಪುರಸಭೆ ಆಡಳಿತಾಧಿಕಾರಿ ನೇಮಕವಾಗಿಲ್ಲ. ಇತ್ತ ಪುರಸಭೆ ಅಧ್ಯಕ್ಷರೂ ಆಯ್ಕೆಯಾಗಿಲ್ಲ.

ಕಳೆದ ೨೦೨೪ ಡಿ.೧೬ ರಂದು ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಪಕ್ಷದ ಒಳ ಒಪ್ಪಂದದಂತೆ ರಾಜೀನಾಮೆ ಸಲ್ಲಿಸಿದ್ದರು. ೨೦೨೪ ರ ಡಿ.೨೬ ರಂದು ಪುರಸಭೆ ಅಧ್ಯಕ್ಷರ ರಾಜೀನಾಮೆ ಅಂಗೀಕಾರ ಕೂಡ ಆಗಿದೆ. ಪುರಸಭೆ ಅಧ್ಯಕ್ಷ ಸ್ಥಾನ ರಾಜೀನಾಮೆಯಿಂದ ತೆರವಾಗಿದೆ. ತೆರವಾದ ಪುರಸಭೆ ಅಧ್ಯಕ್ಷ ಸ್ಥಾನದ ಬದಲು ಪುರಸಭೆಗೆ ಆಡಳಿತಾಧಿಕಾರಿ ನೇಮಕವಾಗಬೇಕು, ಪುರಸಭೆ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.

ಆದರೆ ಆಡಳಿತಾಧಿಕಾರಿಗಳ ನೇಮಕವೂ ಆಗಿಲ್ಲ, ಇತ್ತ ಪುರಸಭೆ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಿಗದಿಯಾಗದ ಕಾರಣ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾತಿದೆ. ಪುರಸಭೆಗೆ ಆಡಳಿತಾಧಿಕಾರಿ ಇಲ್ಲದ ಕಾರಣ ಪುರಸಭೆ ಮುಖ್ಯಾಧಿಕಾರಿಗಳು ಆಡಳಿತಾತ್ಮಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆಡಳಿತಾತ್ಮಕ ಕ್ರೀಯಾಯೋಜನೆ ಅನುಮೋದನೆಗೆ ಪುರಸಭೆ ಅಧ್ಯಕ್ಷ ಅಥವಾ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಕೌನ್ಸಲಿಂಗ್‌ ಸಭೆ ನಡೆಸಬೇಕು ಇದ್ಯಾವುದು ಆಗುತ್ತಿಲ್ಲ.

ಪುರಸಭೆ ಅಧ್ಯಕ್ಷ ರಾಜೀನಾಮೆ ಕೊಟ್ಟ ತಕ್ಷಣವೇ ಆಡಳಿತಾಧಿಕಾರಿ ನೇಮಕವನ್ನು ಸರ್ಕಾರ ಮಾಡಬೇಕಿದೆ. ಆದರೀಗ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾದ ಬಳಿಕ ಪುರಸಭೆ ಅಧ್ಯಕ್ಷರು ಆಯ್ಕೆಯಾಗಿದ್ದರು. ಪಕ್ಷದ ಒಳ ಒಪ್ಪಂದದಂತೆ ಮೂರು ತಿಂಗಳಿಗೆ ರಾಜೀನಾಮೆ ನೀಡಿದ್ದಾರೆ. ಈಗ ಆಡಳಿತಾಧಿಕಾರಿ ನೇಮಕ ಕುರಿತು ಜಿಲ್ಲಾಧಿಕಾರಿ ಸರ್ಕಾರದ ಸೂಚನೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಪುರಸಭೆ ಅಧ್ಯಕ್ಷ ಸ್ಥಾನ ಖಾಲಿಯಾದ ತಕ್ಷಣ ಖಾಲಿ ಬಿಡಂಗಿಲ್ಲ. ಆಡಳಿತಾಧಿಕಾರಿ ನೇಮಕ ಆಗಬೇಕು ಇಲ್ಲವೇ ಪುರಸಭೆ ಅಧ್ಯಕ್ಷರ ಆಯ್ಕೆಯಾಗಬೇಕು ಎಂಬ ನಿಯಮವಿದೆ ಎಂದು ಹೇಳಲಾಗಿದೆ.

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ ರಾಜೀನಾಮೆಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗೆಳೆರಡು ಖಾಲಿ ಇವೆ. ಚುನಾವಣೆ ನಡೆಯೋದು ಯಾವಾಗ ಎಂಬ ಕನಸಿನಲ್ಲಿ ಅಧ್ಯಕ್ಷ ಆಕಾಂಕ್ಷಿಗಳಿದ್ದಾರೆ.

ಬಜೆಟ್‌ ಇದೆ:

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡು ಖಾಲಿ ಇರುವ ಸಮಯದಲ್ಲಿ ಪುರಸಭೆ ಬಜೆಟ್‌ ಮಂಡಿಸಬೇಕಿದೆ. ಮುಂದಿನ ತಿಂಗಳು ಪುರಸಭೆ ಬಜೆಟ್‌ ಮಂಡಿಸಲು ಪುರಸಭೆ ಮುಖ್ಯಾಧಿಕಾರಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಪುರಸಭೆ ಅಧ್ಯಕ್ಷ ಅಥವಾ ಪುರಸಭೆ ಆಡಳಿತಾಧಿಕಾರಿ ಇಲ್ಲದ ಕಾರಣ ಬಜೆಟ್‌ ಮಂಡಿಸೋರು ಯಾರು ಎಂಬ ಪ್ರಶ್ನೆಯೂ ಇದೆ.