ಸಾರಾಂಶ
ಶಾಶ್ವತ ಕಾಮಗಾರಿಗೆ ಒತ್ತಾಯ । ಗುಂಡಿ ಮುಚ್ಚಿಸಿದ ಪುರಸಭೆ ಅಧ್ಯಕ್ಷ ಅಶೋಕ್, ಕರವೇ ಅಧ್ಯಕ್ಷ ಚಂದ್ರಶೇಖರ್ । ರಸ್ತೆ ಸರಿಪಡಿಸದಿದ್ದರೆ ಹೋರಾಟ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಭಾರಿ ಪ್ರಮಾಣದ ಗುಂಡಿ ಬಿದ್ದು ಬಸ್ ಚಾಲಕರು ಗುಂಡಿ ತಪ್ಪಿಸಲು ಪರದಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪುರಸಭೆ ಅಧ್ಯಕ್ಷ ಅಶೋಕ್, ಕರವೇ ಅಧ್ಯಕ್ಷ ಚಂದ್ರಶೇಖರ್ ನಿಲ್ದಾಣಕ್ಕೆ ಆಗಮಿಸಿ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ತಾವೇ ಖುದ್ದಾಗಿ ನಿಂತು ಜಲ್ಲಿ, ಸಿಮೆಂಟ್ ತರಿಸಿ ಗುಂಡಿ ಮುಚ್ಚಿಸಿದ್ದಾರೆ.
ಈ ವೇಳೆ ಪುರಸಭಾ ಅಧ್ಯಕ್ಷ ಎ.ಆರ್. ಅಶೋಕ್ ಮಾತನಾಡಿ, ಬಸ್ ನಿಲ್ದಾಣ ಮೊದಲೇ ಕಿರಿದಾಗಿದ್ದು ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಇಂತಹ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಳೆದ ನಾಲ್ಕು ವರ್ಷದಿಂದ ಭಾರಿ ಪ್ರಮಾಣದಲ್ಲಿ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಒಳಗೆ ಪ್ರವೇಶಿಸುವಾಗ ಚಕ್ರ ಗುಂಡಿಯ ಆಳಕ್ಕೆ ಬಡಿಯುತ್ತಿದ್ದ ಕಾರಣ ಹಿಂಭಾಗ ಜಖಂಗೊಳ್ಳುವುದರ ಜತೆಗೆ ಬಾರಿ ಪ್ರಮಾಣದಲ್ಲಿ ಶಬ್ದ ಉಂಟಾಗುತ್ತಿತ್ತು. ಇಷ್ಟಾದರೂ ಸಾರಿಗೆ ಸಂಸ್ಥೆ ಎಚ್ಚೆತ್ತುಕೊಳ್ಳದೆ ಗುಂಡಿ ಬಿದ್ದ ಜಾಗ ನಮಗೆ ಸೇರಿಲ್ಲ. ಇದು ಲೋಕೋಪಯೋಗಿ ಎಂದು ಬೆರಳು ಮಾಡುತ್ತಾರೆ. ನಮಗೆ ಸಂಬಂಧವಿಲ್ಲ ಎನ್ನುತ್ತಾರೆ ಎಂದು ದೂರಿದರು.ಈ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆ ನಾವೇ ಜೆಲ್ಲಿಕಲ್ಲು, ಸಿಮೆಂಟ್ ತಂದು ದುರಸ್ತಿ ಮಾಡಿಸಿದ್ದೇವೆ. ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಅವರು, ಇನ್ನು ಎರಡು ದಿನದಲ್ಲಿ ಗುಂಡಿಗೆ ಶಾಶ್ವತ ಕಾಯಕಲ್ಪ ಮಾಡಬೇಕು. ಇಲ್ಲವಾದರೆ ಬಸ್ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ. ಈ ಬಗ್ಗೆ ಸದ್ಯದಲ್ಲಿಯೇ ಸಾರಿಗೆ ಮಂತ್ರಿಗಳನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲಿ ಬಾರಿ ಗುಂಡಿ ಬಿದ್ದಿದೆ, ಮಳೆಗಾಲದಲ್ಲಿ ಗುಂಡಿ ತುಂಬ ನೀರು ತುಂಬಿ ಅಕ್ಕ ಪಕ್ಕ ಓಡಾಡುವವರ ಮೇಲೆ ಹಾರುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಎಚ್ಚೆತ್ತುಕೊಂಡಿಲ್ಲ. ಸ್ಥಳೀಯರ ಶಾಸಕರು ಕೂಡ ಮನಸ್ಸು ಮಾಡಿಲ್ಲ, ಬೇಲೂರು ಬಸ್ ನಿಲ್ದಾಣದ ಕಂಟ್ರೋಲ್ ಚಿಕ್ಕಮಗಳೂರಿನಲ್ಲಿದ್ದು ಹಾಸನಕ್ಕೆ ಬದಲಾಯಿಸಬೇಕಿದೆ ಎಂದು ಒತ್ತಾಯಿಸಿದರು.ನಾವು ನೀಡಿದ ಹೇಳಿಕೆ, ಮಾಡಿದ ಪ್ರತಿಭಟನೆಗಳು ಚಿಕ್ಕಮಗಳೂರಿನಲ್ಲಿರುವ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಪ್ರತಿನಿತ್ಯ ೭೦೦ಕ್ಕೂ ಅಧಿಕ ಬಸ್‌ಗಳು ಇಲ್ಲಿಗೆ ಬರುತ್ತವೆ. ಆದರೆ ಬರುವ ಬಹುತೇಕ ಬಸ್‌ಗಳು ಗುಂಡಿಗೆ ಇಳಿದು ಹಿಂಭಾಗ ಜಖಂಗೊಂಡಿವೆ. ಸಾರಿಗೆ ಇಲಾಖೆಯ ಪ್ರವೇಶದ್ವಾರವನ್ನು ಆವರೇ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಲೋಕೋಪಯೋಗಿ ಇಲಾಖೆ ಕಡೆ ಬೆರಳು ತೋರಿಸುವುದು ಇವರ ಉಡಾಫೆ ವರ್ತನೆ ತೋರುತ್ತಿದೆ. ಎರಡು ದಿನದಲ್ಲಿ ಶಾಶ್ವತ ಕಾಮಗಾರಿ ನಡೆಯಬೇಕು. ಇಲ್ಲವಾದರೆ ವಿವಿಧ ಸಂಘಟನೆಗಳು ಜೊತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಮತ್ತು ಪುರಸಭಾ ಸಿಬ್ಬಂದಿ ಹಾಜರಿದ್ದರು.