ಪಾಲಿಕೆಯ ಹಳೆ ತ್ಯಾಜ್ಯವಿಲೇವಾರಿ ಘಟಕ ಅನಾಥ!

| Published : May 21 2025, 12:18 AM IST

ಸಾರಾಂಶ

ಪ್ರತಿಭಟನೆಯಿಂದಾಗಿ ಸಂಪೂರ್ಣವಾಗಿ ಬಂದಾದ ಈ ಮಡ್ಡಿಗುಡ್ಡ ನಿರ್ವಹಣೆಯಿಲ್ಲದೇ ಇಂದು ಹಾಳುಕೊಂಪೆಯಾಗಿದೆ. ಇದಕ್ಕೆ ಹೋಗಲು ಇರುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಇಲ್ಲಿ ನೇಮಿಸಿದ್ದ ಕಾವಲು ಸಿಬ್ಬಂದಿಗಳಿಗೆ ಸಮರ್ಪಕ ವೇತನ ನೀಡದಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ಇದರ ನಿರ್ವಹಣೆಗೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸಾರ್ವಜನಿಕರು ಹಗಲಿನಲ್ಲೂ ಇಲ್ಲಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ನಾಲ್ಕು ಗ್ರಾಮಗಳಿಗೆ ಕೂಗಳತೆಯ ದೂರದಲ್ಲಿರುವ ಮಡ್ಡಿಗುಡ್ಡ (ಕಿರುಬೆಟ್ಟ) ಇಂದು ಹಾಳುಕೊಂಪೆಯಾಗಿದೆ.

ಈ ಮಡ್ಡಿಯೊಳಗೆ ಕಾಲಿಟ್ಟರೆ ಸಾಕು ಕಿತ್ತುಹೋದ ಕಿಟಕಿ, ಬಾಗಿಲು, ಎಲ್ಲೆಂದರಲ್ಲಿ ಬಿದ್ದಿರುವ ಸರಾಯಿ ಪಾಕೆಟ್‌ಗಳು, ಮುರುಕು ಕಟ್ಟಡಗಳೇ ಕಾಣಸಿಗುತ್ತವೆ. ಇದು ಹುಬ್ಬಳ್ಳಿಯಿಂದ ಕೇವಲ 8 ಕಿಮೀ ಹಾಗೂ ಧಾರವಾಡದಿಂದ 15 ಕಿಮೀ ದೂರದಲ್ಲಿ ಪಾಲಿಕೆ ಅಧೀನದ 67 ಎಕರೆ ಜಾಗ ಹೊಂದಿರುವ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ (ಮಡ್ಡಿಗುಡ್ಡ)ದ ದುಸ್ಥಿತಿ.

ಮಹಾನಗರದಲ್ಲಿ ಮುಂದಿನ 20-25 ವರ್ಷಗಳ ಬಳಿಕ ಉದ್ಭವಿಸಬಹುದಾದ ತ್ಯಾಜ್ಯ ವಿಲೇವಾರಿ ಸಮಸ್ಯೆ ಸರಿದೂಗಿಸುವ ಭವಿಷ್ಯದ ಕಲ್ಪನೆಯನ್ನಿಟ್ಟುಕೊಂಡು ನಗರದಿಂದ ಕೇವಲ 8 ಕಿಮೀ ದೂರದಲ್ಲಿರುವ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯ ಪಾಲಿಕೆ ಅಧೀನದ ಜಾಗದಲ್ಲಿ ನಿರ್ಮಿಸಲಾಗಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮಹಾನಗರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿಗೆ ಬೇಕಾದ ಜಾಗವನ್ನು 2007-08 ರಲ್ಲಿಯೇ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಪಾಲಿಕೆಯ 67 ಎಕರೆ ವಿಶಾಲವಾದ ಜಾಗವನ್ನು ಗುರುತಿಸಿ ಇಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ ತೊಟ್ಟು ಅದಕ್ಕೆ ಬೇಕಾದ ಎಲ್ಲ ಕಾಮಗಾರಿ ಕೈಗೊಂಡು ಸಿದ್ಧಪಡಿಸಲಾಗಿತ್ತು.

ಸುತ್ತಲಿವೆ 4 ಗ್ರಾಮಗಳು: ಈ ಮಡ್ಡಿಗುಡ್ಡದ ಸುತ್ತಲೂ ಕೂಗಳತೆಯ ದೂರದಲ್ಲಿಯೇ 4 ಗ್ರಾಮಗಳಿವೆ. ಕೇವಲ ಅರ್ಧ ಕಿಮೀಯಲ್ಲಿ ಶಿವಳ್ಳಿ, ೧ ಕಿಮೀಯೊಳಗೆ ಹೆಬ್ಬಳ್ಳಿ, ಒಂದೂವರೆ ಕಿಮೀಗೆ ಮಾರಡಗಿ ಮತ್ತೊಂದೆಡೆ ಒಂದೂವರೆ ಕಿಮೀ ಸುಳ್ಳ ಗ್ರಾಮಗಳಿವೆ. ಈ ನಾಲ್ಕೂ ಗ್ರಾಮಗಳಲ್ಲಿರುವ ಕುರಿ, ದನಕರುಗಳು ಆಹಾರಕ್ಕಾಗಿ ಈ ಮಡ್ಡಿಗುಡ್ಡವೇ ಆಸರೆ.

ಗ್ರಾಮಸ್ಥರಿಗೆ ಇರಲಿಲ್ಲ ಮಾಹಿತಿ: ಪಾಲಿಕೆಯಿಂದ ಮಡ್ಡಿಗುಡ್ಡದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಲ್ಲಿ ಖಾಸಗಿ ಕಂಪನಿಯೊಂದು ಬರಲಿದೆ ಎಂದು ಸುಳ್ಳುಹೇಳಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಗುಡ್ಡದ ಸುತ್ತಲೂ ತಡೆಗೋಡೆ ನಿರ್ಮಾಣ, ಸಿಬ್ಬಂದಿಗಳು ತಂಗಲು ಬೇಕಾದ ಮನೆಗಳು ಹಾಗೂ ತ್ಯಾಜ್ಯವಿಲೇವಾರಿ ಯಂತ್ರಗಳನ್ನು ಅಳವಡಿಸಲು ಬೇಕಾದ ಬೃಹತ್‌ ಪ್ರಮಾಣದ ಘಟಕ ನಿರ್ಮಿಸಲಾಯಿತು. 2009ರಲ್ಲಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಮೇಯರ್‌ ಆಗಿದ್ದ ರಾಧಾಬಾಯಿ ಸಫಾರೆ ಅವರು ಹು-ಧಾ ಮಹಾನಗರ ಪಾಲಿಕೆ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಉದ್ಘಾಟಿಸಿದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗೊತ್ತಾಯಿತು.

ಗ್ರಾಮಸ್ಥರ ಪ್ರತಿಭಟನೆ: ಎತ್ತರದ ಪ್ರದೇಶದಲ್ಲಿರುವ ಈ ಮಡ್ಡಿಗುಡ್ಡದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಿಸಿದರೆ ಶಿವಳ್ಳಿ, ಹೆಬ್ಬಳ್ಳಿ, ಮಾರಡಗಿ ಹಾಗೂ ಸುಳ್ಳ ಗ್ರಾಮದವರು ಸಂಕಷ್ಟ ಅನುಭವಿಸುವ ಆತಂಕ ವ್ಯಕ್ತವಾಗುತ್ತಿದ್ದಂತೆ ನಾಲ್ಕೂ ಗ್ರಾಮದ ಜನರು ಸೇರಿ ಈ ಮಡ್ಡಿಗುಡ್ಡದ ಎದುರು ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡರು. ಇದಕ್ಕೆ ಮಣಿದ ಹು-ಧಾ ಮಹಾನಗರ ಪಾಲಿಕೆಯು 2013ರಿಂದ ಈ ತ್ಯಾಜ್ಯವಿಲೇವಾರಿ ಘಟಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಿತು.

ಅನೈತಿಕ ಚಟುವಟಿಕೆ ತಾಣ: ಪ್ರತಿಭಟನೆಯಿಂದಾಗಿ ಸಂಪೂರ್ಣವಾಗಿ ಬಂದಾದ ಈ ಮಡ್ಡಿಗುಡ್ಡ ನಿರ್ವಹಣೆಯಿಲ್ಲದೇ ಇಂದು ಹಾಳುಕೊಂಪೆಯಾಗಿದೆ. ಇದಕ್ಕೆ ಹೋಗಲು ಇರುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಇಲ್ಲಿ ನೇಮಿಸಿದ್ದ ಕಾವಲು ಸಿಬ್ಬಂದಿಗಳಿಗೆ ಸಮರ್ಪಕ ವೇತನ ನೀಡದಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ಇದರ ನಿರ್ವಹಣೆಗೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸಾರ್ವಜನಿಕರು ಹಗಲಿನಲ್ಲೂ ಇಲ್ಲಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಮಡ್ಡಿಗುಡ್ಡದಲ್ಲಿ ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣ ಮಾಡುವ ಕುರಿತು ಗ್ರಾಮಸ್ಥರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಆರಂಭಿಸಿದ್ದರು. ನಂತರ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದ ಬಳಿಕ ಈ ಘಟಕ ಬಂದ್‌ ಮಾಡಲಾಗಿದೆ ಎಂದು ಹೆಬ್ಬಳ್ಳಿ ಗ್ರಾಮಸ್ಥ ಈರಣ್ಣ ಹೇಳಿದರು.

ಸುತ್ತಮುತ್ತಲಿನ ಗ್ರಾಮದವರಿಗೆ ತೊಂದರೆಯಾಗದಂತಹ ಕಾರ್ಯಚಟುವಟಿಕೆಗಳನ್ನು ಪಾಲಿಕೆ ಇಲ್ಲಿ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಮತ್ತೇನಾದರೂ ತ್ಯಾಜ್ಯವಿಲೇವಾರಿಗೆ ಮುಂದಾದರೆ ಈ ಮಡ್ಡಿಗುಡ್ಡಕ್ಕೆ ಪಾಲಿಕೆ ವಾಹನ ಬರದಂತೆ ತಡೆಯುತ್ತೇವೆ ಎಂದು ಶಿವಳ್ಳಿ ಗ್ರಾಮದವರಾದ ಮೆಹಬೂಬಪಾಷಾ, ಮನೋಹರ ಹೇಳಿದರು.