ಸ್ನೇಹಿತನ ಪತ್ನಿ ಜತೆ ಸಲುಗೆ ಇದ್ದ ಗೆಳೆಯನ ಹತ್ಯೆ

| Published : Aug 04 2024, 01:17 AM IST

ಸಾರಾಂಶ

ಸ್ನೇಹಿತನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಮೇರೆಗೆ ಪರಿಚಿತನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ರೌಡಿ ಹಾಗೂ ಆತನ ಸಹಚರರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಸ್ನೇಹಿತನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಮೇರೆಗೆ ಪರಿಚಿತನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ರೌಡಿ ಹಾಗೂ ಆತನ ಸಹಚರರನ್ನು ಸಿದ್ದಾಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸೋಮೇಶ್ವರ ನಗರ ಸಮೀಪದ ದಯಾನಂದ ನಗರದ ನಿವಾಸಿಗಳಾದ ರೌಡಿ ವೆಂಕಟೇಶ್ ಅಲಿಯಾಸ್ ಒಂಟಿ ಕೈ ವೆಂಕಟೇಶ ಮತ್ತು ಆತನ ಸಹಚರ ಅಜಯ್ ಬಂಧಿತರಾಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸೈಯದ್ ಇಸಾಕ್‌ (31) ಮೇಲೆ ಶನಿವಾರ ಬೆಳಗ್ಗೆ ಹಲ್ಲೆ ನಡೆಸಿ ಆರೋಪಿಗಳು ಹತ್ಯೆಗೈದಿದ್ದರು. ಈ ಕೃತ್ಯ ವರದಿಯಾದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಯಾನಂದನಗರದ ಕೊಳಗೇರಿ ಹತ್ತಿರದಲ್ಲೇ ಮೃತ ಸೈಯದ್ ಹಾಗೂ ಆರೋಪಿಗಳು ನೆಲೆಸಿದ್ದು, ಬಾಲ್ಯದಿಂದ ಅವರೆಲ್ಲ ಸ್ನೇಹಿತರು. ಇತ್ತೀಚೆಗೆ ತಮ್ಮ ಸ್ನೇಹಿತನ ಪತ್ನಿ ಜತೆ ಸೈಯದ್ ಅಕ್ರಮ ಸಂಬಂಧ ಹೊಂದಿರುವ ಸಂಗತಿ ರೌಡಿ ವೆಂಕಟೇಶ್ ಕಿವಿಗೆ ಬಿದ್ದಿದೆ. ಆಗ ಗೆಳತನದಲ್ಲಿ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಸೈಯದ್‌ಗೆ ಆತ ಬೈದಿದ್ದ.

ಈ ನಡುವೆ ಕೆಲ ಸ್ಥಳೀಯ ವಿಚಾರವಾಗಿ ವೆಂಕಟೇಶ್ ಮತ್ತು ಸೈಯದ್ ಮಧ್ಯೆ ಮನಸ್ತಾಪವಾಗಿತ್ತು. ಹೀಗಾಗಿ ವೆಂಕಟೇಶ್‌ನನ್ನು ಹೊಡೆದು ಹಾಕುವುದಾಗಿ ಸ್ಥಳೀಯರಲ್ಲಿ ಹೇಳಿಕೊಂಡು ಸೈಯದ್ ಓಡಾಡುತ್ತಿದ್ದ. ಈ ವಿಚಾರ ತಿಳಿದು ಕೆರಳಿದ ವೆಂಕಟೇಶ್‌, ಸೈಯದ್ ಮೇಲೆ ಹಗೆತನ ತೀರಿಸಲು ಮುಂದಾದ.

ಅಂತೆಯೇ ಸೋಮೇಶ್ವರನಗರದ ಬಳಿ ಶನಿವಾರ ಬೆಳಗ್ಗೆ ಸೈಯದ್‌ನನ್ನು ತಡೆದು ‘ಏನೋ ಹೊಡೆದು ಹಾಕುವೆ ಅಂದಯಂತೆ. ಬಾರೋ ಈಗ ನೋಡೋಣ’ ಎಂದು ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸೈಯದ್ ಮೇಲೆ ಮಾರಕಾಸ್ತ್ರಗಳಿಂದ ವೆಂಕಟೇಶ್ ಹಾಗೂ ಆತನ ಸಹಚರ ಅಜಯ್ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಹತ್ಯೆ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಕ್ಷಿಪ್ರವಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.