ಸಾರಾಂಶ
ಮಡಿಕೇರಿ : ಪೊನ್ನಂಪೇಟೆ ತಾಲೂಕಿನಲ್ಲಿ ಗುರುವಾರ ರಾತ್ರಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಗಿರೀಶ್ (38) ಎಂಬಾತನನ್ನು ಪೊಲೀಸರು ಕೇರಳದಲ್ಲಿ ಶುಕ್ರವಾರವೇ ಬಂಧಿಸಿದ್ದಾರೆ. ಕೃತ್ಯದ ಬಳಿಕ ಆತ ಇಡೀ ರಾತ್ರಿ ಅದೇ ಮನೆಯಲ್ಲಿ ಕಳೆದು ಬಾಡೂಟ ಮಾಡಿ ಪರಾರಿಯಾಗಿದ್ದು ಇದೀಗ ಬೆಳಕಿಗೆ ಬಂದಿದೆ.
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಶುಕ್ರವಾರ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿದ ಪ್ರಕರಣ ಪತ್ತೆಯಾಗಿತ್ತು. ಅಜ್ಜ, ಅಜ್ಜಿ, ಅವರ ಮಗಳು ಮತ್ತು ಮೊಮ್ಮಗಳನ್ನು ಅದೇ ಮನೆಯ ಅಳಿಯ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣದ ಬೆನ್ನು ಬಿದ್ದ ಕೊಡಗು ಪೊಲೀಸರು ಶುಕ್ರವಾರ ರಾತ್ರಿಯೇ ಆರೋಪಿಯನ್ನು ಕೇರಳದ ವಯನಾಡು ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದರು.ಆರೋಪಿ ನಾಲ್ವರನ್ನು ಕೊಚ್ಚಿ ಕೊಂದ ಬಳಿಕ ಆರೋಪಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ಶವಗಳ ಜೊತೆ ರಾತ್ರಿ ಕಳೆದು, ಬೆಳಗೆದ್ದು ಬಾಡೂಟ ಮಾಡಿ ನಂತರ ಪರಾರಿಯಾಗಿದ್ದಾನೆ.
ಪತ್ನಿ ಹೊಂದಿದ್ದ ಅನೈತಿಕ ಸಂಬಂಧಕ್ಕಾಗಿ ಆಕೆ ಮತ್ತು ಆಕೆ ಇಡೀ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧನದ ಬಳಿಕ ವಿಚಾರಣೆ ಮಾಡಿದಾಗ ಕೊನೆಗೆ ಆತ ಹೇಳಿದ ಕಾರಣ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಪತ್ನಿ ನಾಗಿ ಆಕೆಯ ಎರಡನೆಯ ಪತಿ ಜೊತೆ ಅಕ್ರಮ ಸಂಬಂಧ ಹೊಂದಿದಳು ಎಂಬುವುದು ಈತನ ಕೋಪಕ್ಕೆ ಕಾರಣ ಆಗಿತ್ತು.
ಕೊಲೆ ಮಾಡಿರುವುದನ್ನು ಸದ್ಯ ಗಿರೀಶ್ ಒಪ್ಪಿಕೊಂಡಿದ್ದಾನೆ. ಆದರೆ ವಿಚಿತ್ರ ಎಂದರೆ ಕೊಲೆಯ ಬಳಿಕ ಆತನಿಗೆ ಯಾವುದೇ ಪಶ್ಚಾತಾಪದ ಭಾವನೆ ಇಲ್ಲ. ಎಲ್ಲರನ್ನು ಕೊಚ್ಚಿ ಕೊಂದ ಬಳಿಕ ಅಲ್ಲೇ ಬಟ್ಟೆ ಬದಲಾಯಿಸಿ, ಸ್ನಾನ ಮಾಡಿ ಬೇರೆ ಕಡೆ ಮಲಗಿದ್ದು, ಬೆಳಗ್ಗೆ ಎದ್ದು ಹೋಗಿದ್ದಾನೆ. ಹೋಗುವಾಗ ಶೇವಿಂಗ್ ಮಾಡಿ ಮಾಂಸದೂಟ ಮಾಡಿ, ನಂತರ ಕೇರಳಕ್ಕೆ ಪರಾರಿಯಾಗಿದ್ದನು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.