ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರಾವಣ ಮಾಸವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ತನ್ನ ಆಲೋಚನಾ ಕ್ರಮಗಳ ಅನುಭಾವದ ಕಡೆ ವಿಸ್ತರಿಸಿರುವ ಮುರುಘಾಮಠ ತಿಂಗಳಿಡೀ ಶರಣರ ಚಿಂತನೆಗಳನ್ನು ಹರವಿ ಅನುಭಾವದ ನುಡಿಗಳ ಹೆಕ್ಕುವ ಕಾರ್ಯಕ್ಕೆ ಮುಂದಾಗಿದೆ.

ಶ್ರಾವಣ ಮಾಸದ ಮೊದಲ ದಿನವಾದ ಗುರುವಾರ ಬೆಳಗು ಮುಂಜಾನೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ ಹಾಗೂ ಮುರುಘಾ ಪರಂಪರೆಯ ಮೂಲಕರ್ತೃ ಮುರಿಗೆ ಶಾಂತವೀರ ಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನುಭಾವದ ನುಡಿಗಳ ಹರಿವಿದ ಡಾ.ಬಸವಕುಮಾರ ಸ್ವಾಮೀಜಿ, ಮುರುಘಾ ಪರಂಪರೆಯ ಮಹಾಸ್ವಾಮಿಗಳವರ ಸ್ಮರಣೆ ಮಾಡುವುದು ಮುಕ್ತಿಗೆ ದಾರಿ ಎಂದರು.

ಶೂನ್ಯಪೀಠ ಪರಂಪರೆಯ ಚಿತ್ರದುರ್ಗ ಬೃಹನ್ಮಠ ಮಹಾಸಂಸ್ಥಾನವು ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆಲೆಸಿದ ಮೇಲೆ ತನ್ನದೇಯಾದ ಪ್ರಭಾವ ಬೀರಿತು. ಅವರು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತರಾಗದೆ ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಉನ್ನತಿಯನ್ನು ಸಾಧಿಸಿದರೆಂಬುದಕ್ಕೆ ಅನೇಕ ಸಾಹಿತ್ಯ ಕೃತಿಗಳು ಸಾಕ್ಷಿಯಾಗಿವೆ ಎಂದರು.

ಮುರುಗಿ ಶಾಂತವೀರರು ಈ ನಾಡಿಗೆ ಕೊಟ್ಟಿರುವ ಅನುಪಮ ಸೇವೆ ಬಣ್ಣನೆಗೆ ನಿಲುಕದ್ದು. ಅವರ ತಪಸ್ಶಕ್ತಿ, ಪ್ರಖರ ಪಾಂಡಿತ್ಯ ಹಾಗೂ ಶಿವಯೋಗದ ಬಲದಿಂದ ಮುಂದಾಗುವ ಸನ್ನಿವೇಶಗಳನ್ನು ತಿಳಿಸುವ ರೀತಿ ಅವರಿಗಷ್ಟೇ ಸಾಧ್ಯ ಎನ್ನುವುದಕ್ಕೆ ಈ ನಾಡಿನ ರಾಜ ಪರಂಪರೆಯಲ್ಲಿ ಬಂದ ಭರಮಣ್ಣ ನಾಯಕರೇ ಸಾಕ್ಷಿ. ದನಗಾಹಿಯೊಬ್ಬ ರಾಜನಾಗುವುದೆಂದರೆ ಅದು ಗುರುಗಳ ತಪಸ್‌ ಶಕ್ತಿಯ ಫಲ ಎಂದರು.


ತ್ರಿವಿಧ ದಾಸೋಹದ ಮೂಲಕ ನಾಡಿನಾದ್ಯಂದ ಬಸವತತ್ವ ಪಾಲನೆಯಲ್ಲಿ ನಿರತರಾಗಿರುವ ಮುರುಘಾಮಠದ ಕೈಂಕರ್ಯದ ಹಿಂದೆ ಮುರುಗಿ ಶಾಂತವೀರ ಶ್ರೀಗಳ ಆಶಯಗಳಿವೆ. ಅವರ ಕತೃಶಕ್ತಿಯೇ ಮುಠವನ್ನು ಇಂದಿಗೂ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದು ಶ್ರೀಗಳು ಬಣ್ಣಿಸಿದರು.

ಇಂತಹ ಅನೇಕ ಗುರುಗಳು ಪೀಠದ ಘನತೆಯನ್ನು ಎತ್ತಿಹಿಡಿದಿದ್ದಾರೆ. ಅವರು ಸ್ಮರಣೆ ಈ ಶ್ರಾವಣಮಾಸದಲ್ಲಿ ನಿತ್ಯ ನಡೆಯಲಿದೆ ಮತ್ತು ಚಿತ್ರದುರ್ಗ ನಗರ, ಶ್ರೀಮಠದಲ್ಲಿ ಪುಣ್ಯಪುರುಷರ ಚಿಂತನ ಮಾಲಿಕೆಯಲ್ಲಿ ಜೀವನ ಸಾಧನೆಯ ಉಪನ್ಯಾಸ ನಡೆಯಲಿದೆ ಎಂದರು.

ಬಸವ ಮುರುಘೇಂದ್ರ ಶ್ರೀಗಳು, ವಚನಾಭಿಷೇಕ ನಡೆಸಿಕೊಟ್ಟ ಸೇವಾಕರ್ತರಾದ ಗುತ್ತಿನಾಡು ಜಿ.ಎಂ.ಪ್ರಕಾಶ್ ಕುಟುಂಬದವರು, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಜೆ.ಎಸ್ ಮುರುಘೇಶ್, ಶ್ರೀಮಠದ ದಾಸೋಹದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಗುರುಕುಲ ಸಾಧಕರು ಭಾಗವಹಿಸಿದ್ದರು.