ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಕಾರ್ಯವು ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಜೀವಂತ ಹಾಗೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
- ದಾವಣಗೆರೆ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ: ಜಿ.ಎಂ.ಗಂಗಾಧರ ಸ್ವಾಮಿ ಸ್ಪಷ್ಟನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಕಾರ್ಯವು ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಜೀವಂತ ಹಾಗೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 7086 ಮತದಾರರಿಗೆ ನೋಟಿಸ್ ನೀಡಿದ್ದು, ಈ ಪೈಕಿ 6733 ಮತದಾರರ ಸ್ವತಃ ಮರುಪರಿಶೀಲನೆ ಹಾಗೂ ವಿಚಾರಣೆ ಪೂರ್ಣಗೊಳಿಸಲಾಗಿದೆ ಎಂದರು.ವಿಚಾರಣೆ ನಡೆಸಿ, ಈಗಾಗಲೇ ಬೇರೆಡೆ ನೋಂದಣಿ ಆಗಿರುವ (ದ್ವಿಪ್ರತಿ/ ಡೂಪ್ಲಿಕೇಟ್) 353 ವಿಚಾರಣೆಗೆ ಬಾಕಿ ಇದೆ. ವಿಚಾರಣೆ ನಡೆಸಿ ದ್ವಿಪ್ರತಿ, ಮರಣ ಹೊಂದಿದವರ, ಸ್ಥಳಾಂತರಗೊಂಡ ಹಾಗೂ ಇತರೆ ಕಾರಣಗಳಿಂದ 112 ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಜಗಳೂರು ತಾಲೂಕಿನಲ್ಲಿ 59 ಜನ, ಹರಿಹರದಲ್ಲಿ 18, ದಾವಣಗೆರೆ ಉತ್ತರದಲ್ಲಿ 15, ದಾವಣಗೆರೆ ದಕ್ಷಿಣದಲ್ಲಿ 14, ಹೊನ್ನಾಳಿಯಲ್ಲಿ 3, ಚನ್ನಗಿರಿಯಲ್ಲಿ 1 ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಮಾಯಕೊಂಡದಲ್ಲಿ ಯಾರ ಹೆಸರನ್ನೂ ಕೈಬಿಟ್ಟಿಲ್ಲ. ಐವರು ನೇಪಾಳಿ ಪ್ರಜೆಗಳು ಹಾಗೂ ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿರುವ ಓರ್ವ ಮತದಾರರನ್ನು ಹೊರತುಪಡಿಸಿ, ಯಾವುದೇ ಸಕ್ರಿಯ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿಲ್ಲ. ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳ ಇಆರ್‌ಒ (ಚುನಾವಣಾ ನೋಂದಣಾಧಿಕಾರಿ), ಬಿಎಲ್‌ಒಗಳಿಂದ ದೃಢೀಕರಣ ಪತ್ರ ಪಡೆಯಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ "ಬಲ್ಕ್ ಅರ್ಜಿಗಳು " ಸ್ವೀಕೃತಗೊಂಡಿಲ್ಲ ಎಂದರು.ನಮೂನೆ 6, 6ಎ, 7 ಹಾಗೂ 8 ಸೇರಿದಂತೆ ಒಟ್ಟು 24,012 ಅರ್ಜಿ ಸ್ವೀಕೃತವಾಗಿವೆ. ಪರಿಶೀಲನೆ ನಂತರ 22,200 ಅರ್ಹ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ 2,142 ಅರ್ಜಿ ಪ್ರಕ್ರಿಯೆಯಲ್ಲಿದ್ದು, ಶೀಘ್ರವೇ ವಿಲೇವಾರಿ ಮಾಡಲಾಗುವುದು. ಈ ಎಲ್ಲ ನಮೂನೆಗಳ ವಿಲೇವಾರಿಯನ್ನು ಅಧಿಕಾರಿಗಳು ಭೌತಿಕವಾಗಿ ಪರಿಶೀಲಿಸಿಯೇ ನಡೆಸುತ್ತಿದ್ದಾರೆ. ಆಧಾರ್ ಕಾರ್ಡ್ ಒಂದನ್ನೇ ಆಧಾರವಾಗಿಟ್ಟುಕೊಂಡು ಫಾರ್ಮ್-6 ಸ್ವೀಕರಿಸುವುದಿಲ್ಲ ಎಂದು ವಿವರಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನ ಹಾಗೂ ನಿಯಮಾವಳಿಗಳಂತೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೆ ಫಾರ್ಮ್-6ಗೆ ಕೇವಲ ಆಧಾರ್ ಕಾರ್ಡ್ ಒಂದನ್ನೇ ಪರಿಗಣಿಸಲು ಬರುವುದಿಲ್ಲ. ಅರ್ಜಿದಾರರು ನಿಯಮಾನುಸಾರ ಅಗತ್ಯ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾ ಚುನಾವಣಾ ವಿಭಾಗ ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಎಲ್‌ಒ ಹಂತದಲ್ಲಿ ಕೆಲ ನೂನ್ಯತೆಗಳು ಕಂಡುಬಂದ ಹಿನ್ನೆಲೆ ಸೋಮವಾರವಷ್ಟೇ ಎಲ್ಲ ಮತದಾರರ ನೋಂದಣಾಧಿಕಾರಿಗಳಿಗೆ ಈ ಕುರಿತು ಲಿಖಿತ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಫಾರ್ಮ್-6ರಡಿ ಅರ್ಜಿ ಸಲ್ಲಿಸುವಾಗ ಕೇವಲ ಆಧಾರ್ ಕಾರ್ಡ್‌ಗೆ ಸೀಮಿತವಾಗದೇ, ತಂದೆ-ತಾಯಿ ಗುರುತಿನ ದಾಖಲೆ, ಬಾಡಿಗೆ ಕರಾರು ಪತ್ರ, ಮನೆ ಅಥವಾ ಆಸ್ತಿ ದಾಖಲೆಗಳು, ಶಾಲಾ/ ಕಾಲೇಜು ಗುರುತಿನ ಚೀಟಿ, ಜನ್ಮ ದಿನಾಂಕ ಪ್ರಮಾಣಪತ್ರ ಅಥವಾ ಎಸ್ಎಸ್ಎಲ್‌ಸಿ ಅಂಕಪಟ್ಟಿ ಸೇರಿದಂತೆ ಯಾವುದಾದರೂ ಒಂದು ಸೂಕ್ತ ದಾಖಲೆ ಕಡ್ಡಾಯವಾಗಿ ಲಗತ್ತಿಸಬೇಕು. ಯಾವುದೇ ಸಕಾರಣವಿಲ್ಲದೇ ಅಥವಾ ಸೂಕ್ತ ಪರಿಶೀಲನೆ ನಡೆಸದೆ ಅರ್ಜಿಗಳನ್ನು ತಿರಸ್ಕರಿಸಲಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.
ಆನ್‌ಲೈನ್ ಮೂಲಕ ಫಾರ್ಮ್-6 ಅರ್ಜಿ ಸಲ್ಲಿಸಿ, ವಯಸ್ಸು ಅಥವಾ ವಿಳಾಸಕ್ಕೆ ಸಂಬಂಧಿಸಿದ ಯಾವುದೇ ಪೂರಕ ದಾಖಲೆ ಅಪ್‌ಲೋಡ್ ಮಾಡದಿರುವ ಅರ್ಜಿಗಳನ್ನು ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಪುನಃ ಫಾರ್ಮ್-6 ಸಲ್ಲಿಸಿರುವ ದ್ವಿಪ್ರತಿ **(Duplicate)** ಅರ್ಜಿಗಳನ್ನು ನಿಯಮಾನುಸಾರ ತಿರಸ್ಕರಿಸಲಾಗಿದೆ. ಮತಗಟ್ಟೆ ಹಂತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮೇಲ್ವಿಚಾರಕರು ಹಾಗೂ ಬಿ.ಎಲ್.ಒ.ಗಳಿಂದ ದೃಢೀಕರಣ ಪತ್ರಗಳನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.ಯಾವುದೇ ಬಲ್ಕ್ (ಸಗಟು) ಅರ್ಜಿಗಳನ್ನು ನಿಯಮ ಬಾಹಿರವಾಗಿ ಸ್ವೀಕರಿಸಿಲ್ಲ. ಮತದಾರರ ಹೆಸರು ಸೇರ್ಪಡೆ (ಫಾರ್ಮ್-6) ಹಾಗೂ ಹೆಸರು ತೆಗೆದು ಹಾಕುವಿಕೆ/ ಆಕ್ಷೇಪಣೆ (ಫಾರ್ಮ್-7) ಕುರಿತಾದ ಮಾಹಿತಿಯನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಮುಂಬರುವ ಸಾಪ್ತಾಹಿಕ ಸಭೆಗಳಲ್ಲಿ ಆಕ್ಷೇಪಣೆ ಅಥವಾ ಅನಿಸಿಕೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಆನ್‌ಲೈನ್ ಮೂಲಕ ಸ್ವೀಕೃತವಾದ ಫಾರ್ಮ್-7 ಅರ್ಜಿಗಳಲ್ಲಿ, ಸ್ಥಳಾಂತರಗೊಂಡಿರುವವರು, ಮೃತರಾದವರು ಹಾಗೂ ದ್ವಿಪ್ರತಿ ಅರ್ಜಿಗಳನ್ನು ಮಾತ್ರ ಪರಿಶೀಲಿಸಿ, ನಿಯಮಾವಳಿಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತಿದೆ. ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಅತ್ಯಂತ ದಕ್ಷತೆ ಮತ್ತು ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತ ಡಾ.ಮಹಾಂತೇಶ, ಇತರರು ಇದ್ದರು.
- - -(ಬಾಕ್ಸ್)
* ಅ.23ಕ್ಕೆ ಪದವೀಧರ ಕ್ಷೇತ್ರ ಚುನಾವಣೆಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸೆ.29ರಂದು ಅಧಿಸೂಚನೆ ಹೊರಬಿದ್ದಿದ್ದು, ಅ.23ರಂದು ಬೆಳಗ್ಗೆ 8ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅ.27ರಂದು ಮತ ಎಣಿಕೆ ನಡೆಯಲಿದೆ. ಅ.31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಪದವೀಧರ ಮತದಾರರು ನೋಂದಾಯಿತರಾಗಿದ್ದು, ಮತದಾನಕ್ಕಾಗಿ ಒಟ್ಟು 43 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ ಹರಿಹರದಲ್ಲಿ 10, ದಾವಣಗೆರೆ ಉತ್ತರದಲ್ಲಿ 17, ದಾವಣಗೆರೆ ದಕ್ಷಿಣದಲ್ಲಿ 6, ಮಾಯಕೊಂಡ ಕ್ಷೇತ್ರದಲ್ಲಿ 6 ಹಾಗೂ ಜಗಳೂರು ತಾಲೂಕಿನಲ್ಲಿ 4 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.
- - --6ಕೆಡಿವಿಜಿ8, 9:
ದಾವಣಗೆರೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.