ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವದ ಅಂಗವಾಗಿ ಕವಿಗೋಷ್ಠಿಯನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಸೆ.23 ರಿಂದ 27 ರವರೆಗೆ ಪಂಚ ಕಾವ್ಯದೌತಣ ಹಾಗೂ ಈ ಬಾರಿ ಕವಿಗೋಷ್ಠಿಯ ಮೊದಲ ದಿನ “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರ ಕಂಠದಲ್ಲಿ ಏಕಕಾಲದಲ್ಲಿ ನಾಡಗೀತೆ ಮೊಳಗಲಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.ನಗರದ ಮಾನಸ ಗಂಗೊತ್ರಿಯ ಬಯಲು ರಂಗಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಗೀತೆಗೆ 100 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವ ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥವಾಗಿ ಸೆ.23ರ ಬೆಳಗ್ಗೆ 10.30ಕ್ಕೆ “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ ಎಂಬ ಘೋಷವಾಕ್ಯದಲ್ಲಿ 100 ಪ್ರಖ್ಯಾತ ಸಂಗೀತ ಕಲಾತಂಡಗಳೊಂದಿಗೆ ವಿವಿಧ ಕಾಲೇಜುಗಳಿಂದ ಸುಮಾರು 15 ಸಾವಿರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರರು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವುದರ ಮೂಲಕ ಕುವೆಂಪು ಅವರಿಗೆ ನಮನ ಸಲ್ಲಿಸಲಾಗುವುದು ಎಂದರು. ದಸರಾ ಕವಿಗೋಷ್ಠಿಬಳಿಕ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ನಿರ್ದೇಶಕಿ, ದಸರಾ ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಈ ಬಾರಿಯ ದಸರಾ ಕವಿಗೊಷ್ಠಿಯನ್ನು ಪಂಚ ಕಾವ್ಯದೌತಣ ಪರಿಕಲ್ಪನೆಯಲ್ಲಿ 5 ದಿನಗಳ ಕಾಲ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರಭಾತ, ಪ್ರಚುರ, ಪ್ರಜ್ವಲ, ಪ್ರತಿಭಾ ಮತ್ತು ಪ್ರಬುದ್ಧ ಪರಿಕಲ್ಪನೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಸೆ.23ರ ಬೆಳಗ್ಗೆ 10.30ಕ್ಕೆ ಬಯಲು ರಂಗಮಂದಿರಲ್ಲಿ ದಸರಾ ಕವಿಗೋಷ್ಠಿಗಳನ್ನು ಕವಿ ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸುವರು. ನಂತರ ಮಧ್ಯಾಹ್ನ 12ಕ್ಕೆ ಬಿಎಂಶ್ರೀ ಸಭಾಂಗಣದಲ್ಲಿ ಪ್ರಭಾತ ಕವಿಗೋಷ್ಠಿಯಲ್ಲಿ ನಡೆಯಲಿದೆ. ಮೈಸೂರು, ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರತಿಭಾವಂತ ಮಕ್ಕಳು, ಮಹಿಳೆಯರು, ಹಿರಿಯ ಕವಿಗಳು, ಯುವಕವಿಗಳ ಭಾವ ಸಮ್ಮಿಲನ, ನವರಸಗಳ ಆಸ್ವಾದನ ಗೋಷ್ಠಿಯಾಗಿದ್ದು, ನವರಸವೇ ಜೀವನ, ಸಮರಸವೇ ಚೇತನ ಎಂಬುದನ್ನು ಬಿಂಬಿಸುವ ವೇದಿಕೆಯಾಗಿರುತ್ತದೆ ಎಂದರು.ಸೆ.24ರ ಬೆಳಗ್ಗೆ 10.30ಕ್ಕೆ ಪ್ರಚುರ ಕವಿಗೋಷ್ಠಿಯನ್ನು ನಿರ್ದೇಶಕ, ಗೀತ ರಚನಾಕಾರ ಜೋಗಿ ಪ್ರೇಮ್ ಉದ್ಘಾಟಿಸುವರು. ಕನ್ನಡ ಅಸ್ತಿತ್ವ ಕುರಿತು ಕವಿಗಳಿಂದ ನಾಡು-ನುಡಿ ಚಿಂತನೆಗೆ ವೇದಿಕೆಯಾಗಲಿದ್ದು, ಅನಾಥಾಶ್ರಮ, ವಿಶೇಷಚೇನತ, ಲಿಂಗತ್ವ ಅಲ್ಪಸಂಖ್ಯಾತರು, ಪೌರಕಾರ್ಮಿಕರು ಸೇರಿದಂತೆ ಅಂಚಿಗೆ ಸರಿದಿದ್ದ ಕವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.ಸೆ.25ರ ಬೆಳಗ್ಗೆ 10.30ಕ್ಕೆ ಪ್ರಜ್ವಲ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಗೀತ ರಚನಾಕಾರ ಪ್ರಮೋದ ಮರವಂತೆ ಉದ್ಘಾಟಿಸುವರು. ಅಂದು ಚುಟುಕ ಕವನಗಳ ಜುಗಲ್ ಬಂಧಿ ಇದ್ದು, ವಿಡಂಬನಾತ್ಮಕ ಹಾಸ್ಯವನ್ನು ಐದು ವಿಷಯಗಳೊಂದಿಗೆ ಐದು ಸುತ್ತುಗಳಲ್ಲಿ ಕವಿಗಳು ಹಾಸ್ಯದೌತಣವನ್ನು ಉಣಬಡಿಸಲಿದ್ದಾರೆ ಎಂದರು.ಸೆ.26ರ ಬೆಳಗ್ಗೆ 10.30ಕ್ಕೆ ಪ್ರತಿಭಾ ಕವಿಗೋಷ್ಠಿಯನ್ನು ಜಾನಪದ ತಜ್ಞ ಪ್ರೊ. ನಂಜಯ್ಯ ಹೊಂಗನೂರು ಉದ್ಘಾಟಿಸುವರು. ಮೊದಲ ಬಾರಿಗೆ ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ತತ್ವಪದಗಳ ಕಾವ್ಯವಾಚನ ಮತ್ತು ಗಾಯನ ಇರಲಿದ್ದು, ಕಂಸಾಳೆ, ತಂಬೂರಿ, ಬಸುರಿ ಬಯಕೆ ಪದ, ಜರಿವ ಪದ, ಸರಸ- ಸಲ್ಲಾಪ ಒಗಟುಪದ, ಗೀಗೀಪದ, ಸೊಬಾನೆ ಪದ, ಅನಕುಪದ, ಪಾಡ್ದನ ಸೇರಿದಂತೆ ತತ್ವಪದಗಳ ಅನುಭವದ ಹದಪಾಕವೇ ಇಲ್ಲಿ ಧರೆಗಿಳಿಯುತ್ತದೆ ಎಂದು ತಿಳಿಸಿದರು. ಸೆ.27ರ ಬೆಳಗ್ಗೆ 10.30ಕ್ಕೆ ಪ್ರಬುದ್ಧ ಕವಿಗೋಷ್ಠಿಯನ್ನು ಕವಿ ಡಾ.ಸಿ.ಪಿ. ಕೃಷ್ಣಕುಮಾರ್ ಉದ್ಘಾಟಿಸುವರು. ಕವಯಿತ್ರಿ ಡಾ. ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸುವರು. ಈ ಗೊಷ್ಠಿಯು 31 ಜಿಲ್ಲೆಗಳ ಕವಿ ಪ್ರತಿಭೆಯ ಬಹುತ್ವದ ಪ್ರತೀಕವಾಗಿದ್ದು, ಅಖಂಡ ಕರ್ನಾಟಕದ ಪಂಡಿತ ಮಂಡಳಿಯಿಂದ ಕನ್ನಡ ಸಂಸ್ಕೃತಿಯ ಕಾವ್ಯ ಚಿತ್ರಣ, ಮೈಸೂರು ಮಲ್ಲಿಗೆ ಊರಿನಲ್ಲಿ ಕಂಪು- ಪೆಂಪು ಬೀರುವ ಹೂರಣವಾಗಿರುತ್ತದೆ. ಪ್ರಬುದ್ಧ ಮನಸ್ಸಿನ ಪಕ್ವ ಚಿಂತನೆಯ ಕವಿಗಳು ಕಟ್ಟಿದ ಕಾವ್ಯದ ಬಹುಮುಖಿ ನೆಲೆಯ ಅನಾವರಣವಾಗಲಿದೆ ಎಂದರು.ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಜಿ.ಎಸ್. ಸೋಮಶೇಖರ್, ಸದಸ್ಯರಾದ ಪ್ರೊ.ಎಂ.ಎಸ್. ಸಪ್ನಾ, ಪ್ರೊ. ಜ್ಯೋತಿ, ಪ್ರೊ. ನವಿತಾ ತಿಮ್ಮಯ್ಯ, ಪ್ರೊ. ಗೀತಾ, ಪ್ರೊ. ಶುಭಾ, ನಾಗರಾಜ್ ಬೈರಿ, ಸಿದ್ದರಾಜು ಮೊದಲಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))