ಗಜೇಂದ್ರಗಡ ತಾಲೂಕಿನಲ್ಲಿ ನಾಯಕ ಕುಟುಂಬವೊಂದರ ಸದಸ್ಯರು ಸ್ವಾತಂತ್ರ್ಯ ಪೂರ್ವದಿಂದ ಇಂದಿನ ಪೀಳಿಗೆ ವರೆಗೂ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಸರ್ಕಾರಿ ಶಾಲೆ ಶಿಕ್ಷಕರಾಗಿಯೇ ಕರ್ತವ್ಯ ನಿರ್ವಹಿಸಿದ್ದಾರೆ.
ಎಸ್.ಎಂ. ಸೈಯದ್
ಗಜೇಂದ್ರಗಡ: ತಾಲೂಕಿನಲ್ಲಿ ನಾಯಕ ಕುಟುಂಬವೊಂದರ ಸದಸ್ಯರು ಸ್ವಾತಂತ್ರ್ಯ ಪೂರ್ವದಿಂದ ಇಂದಿನ ಪೀಳಿಗೆ ವರೆಗೂ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಪಟ್ಟಣದ ಶಿವಶಂಕರ ಬಸವಣ್ಣೆಪ್ಪ ನಾಯಕ ಕುಟುಂಬದ ಶಿಕ್ಷಕಿ ಪ್ರಿಯಾಂಕಾ ಶಿವಶಂಕರ ನಾಯಕ ಅವರ ಮುತ್ತಜ್ಜ, ಅಜ್ಜ, ಅಪ್ಪ ಹಾಗೂ ದೊಡ್ಡಪ್ಪ, ದೊಡ್ಡಮ್ಮ ಅತ್ತಿಗೆ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇಡೀ ಕುಟುಂಬವೇ ವಿದ್ಯಾರ್ಥಿಗಳ ಬದುಕಿನಲ್ಲಿ ಅಕ್ಷರ ದೀಪ ಹಚ್ಚಲು ಶ್ರಮಿಸಿದೆ. ಎಲ್ಲರೂ ಸರ್ಕಾರಿ ಶಾಲೆ ಶಿಕ್ಷಕರಾಗಿಯೇ ಕರ್ತವ್ಯ ನಿರ್ವಹಿಸಿದ್ದಾರೆ.
ಶಿಕ್ಷಕಿ ಪ್ರಿಯಾಂಕ ಶಿವಶಂಕರ ನಾಯಕ ಅವರ ಮುತ್ತಜ್ಜ ಮಲ್ಲಪ್ಪ ಬಾಳಪ್ಪ ನಾಯಕ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ರೋಣ ತಾಲೂಕಿನ ಕುರಹಟ್ಟಿ ಹಾಗೂ ಮಾಡಲಗೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ೩೪ ವರ್ಷ ಸೇವೆ ಸಲ್ಲಿಸಿದ್ದರು. ಅಜ್ಜ ಬಸವಣ್ಣೆಪ್ಪ ಮಲ್ಲಪ್ಪ ನಾಯಕ ೧೯೬೦ರಲ್ಲಿ ತಾಲೂಕಿನ ರಾಮಾಪುರ ಗ್ರಾಮದ ಸರ್ಕಾರಿ ಶಾಲೆ, ಪಟ್ಟಣದ ಸರ್ಕಾರಿ ಶಾಲೆ ನಂ. ೧ ಹಾಗೂ ಪುರ್ತಗೇರಿ ಗ್ರಾಮದ ನಂ. ೪ರಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಮತ್ತು ನಾಗೇಂದ್ರಗಡ ಸರ್ಕಾರಿ ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟೂ ೩೨ ವರ್ಷ ಪಾಠ ಮಾಡಿದ್ದಾರೆ.ಶಿಕ್ಷಕ ಶಿವಶಂಕರ ಬಸವಣ್ಣೆಪ್ಪ ನಾಯಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಂತ್ಲಿಶಿರೂರ, ಬೇವಿನಕಟ್ಟಿ ಹಾಗೂ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೪ರಲ್ಲಿ ಗಣಿತ ಮತ್ತು ಇಂಗ್ಲಿಷ್ ಶಿಕ್ಷಕರಾಗಿ ೩೨ನೇ ವರ್ಷದ ಸೇವೆಯಲ್ಲಿದ್ದಾರೆ.
ಶಿಕ್ಷಕಿ ಪ್ರಿಯಾಂಕಾ ಶಿವಶಂಕರ ನಾಯಕ ಅವರು ತಾಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ೩ನೇ ವರ್ಷದ ಸೇವೆ ಸಲ್ಲಿಸುತ್ತಿದ್ದಾರೆ.ಒಂದನೇ ಅತ್ತೆ ರೇಣುಕಾದೇವಿ ಬಸವಣ್ಣೆಪ್ಪ ನಾಯಕ ಅವರು, ಗಂಗಾವತಿಯ ನವಲಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲೂಕಿನ ಬೇವಿನಕಟ್ಟಿ ಗ್ರಾಮದ ಶಾಲೆ, ಪಟ್ಟಣದ ಶಾಲೆ ನಂ. ೪ ಮತ್ತು ನಂ. ೨ರಲ್ಲಿ ಶಿಕ್ಷಕರಾಗಿ ೩೪ ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.
ಎರಡನೇ ಅತ್ತೆ ಪಾರ್ವತಿದೇವಿ ಬಸವಣ್ಣೆಪ್ಪ ನಾಯಕ ಅವರು, ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ಇಲಾಳ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ವರ್ಷ ಪ್ರಧಾನಗುರುಗಳಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಕ್ಕರಗುಂದಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.ದೊಡ್ಡಪ್ಪ, ಹನುಮಂತ ಬಸವಣ್ಣೆಪ್ಪ ನಾಯಕ ಅವರು ಶೃಂಗೇರಿ, ಹುಬ್ಬಳ್ಳಿ, ಕಲಘಟಗಿ, ಧಾರವಾಡ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಧಾರವಾಡ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಧಾರವಾಡ ಜಿಲ್ಲೆಯ ಮುಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿಕ್ಕಪ್ಪ ಮುತ್ತಣ್ಣ ಬಸವಣ್ಣೆಪ್ಪ ನಾಯಕ ಅವರು, ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ೧೨ ವರ್ಷ ಸೇವೆ ಸಲ್ಲಿಸಿದ್ದಾರೆ.ಚಿಕ್ಕಮ್ಮ, ಗೀತಾ ಮಲ್ಲಪ್ಪ ಅಸಲಿ ಅವರು ಗಂಗಾವತಿ ತಾಲೂಕಿನ ಆನೆಗುಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕಿಯಾಗಿ ೧೯ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಕ್ಕ, ಯಶೋದಾ ಮಾಲತೇಶ ಅಸಲಿ ಅವರು ಕುಕನೂರು ತಾಲೂಕಿನ ತಳಕಲ್ ಗ್ರಾಮದ ದೇಸಾಯಿ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸಿ, ಈಗ ಹೊಸಪೇಟೆಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಚಿಕ್ಕಮ್ಮ ನಂದಿನಿ ಮಲ್ಲಪ್ಪ ನಾಗನೂರ ಅವರು ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬ್ಲಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ಸಹಾಯಕ ಪ್ರಾಧ್ಯಾಪಕರಾಗಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತಮ ಅಂಕಗಳನ್ನು ತರುವುದು ವಿದ್ಯಾರ್ಥಿಗಳ ಸಾಧನೆಯಲ್ಲ, ಬದಲಿಗೆ ಅವರಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವುದು ಸಹ ಶಿಕ್ಷಣವಾಗಿದೆ ಎಂದು ಬಲವಾಗಿ ನಂಬಿದ್ದೇನೆ ಎಂದು ಶಿಕ್ಷಕ ಶಿವಶಂಕರ ಬಸವಣ್ಣೆಪ್ಪ ನಾಯಕ ಹೇಳಿದರು.ಮನೆಯಲ್ಲಿ ಮುತ್ತಜ್ಜ, ಅಜ್ಜ ಹಾಗೂ ಅಪ್ಪ ಸೇರಿ ಬಹುತೇಕರು ಶಿಕ್ಷಕರಾಗಿದ್ದು, ಪ್ರತಿ ದಿನ ಅವರ ಶಿಸ್ತುಬದ್ಧ ಅಧ್ಯಯನ, ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳ ಬಗೆಗಿನ ಕಾಳಜಿ ನನ್ನನ್ನು ಶಿಕ್ಷಕಿಯಾಗಲು ಪ್ರೇರಣೆ ನೀಡಿದೆ ಎಂದು ಶಿಕ್ಷಕಿ ಪ್ರಿಯಾಂಕಾ ಶಿವಶಂಕರ ನಾಯಕ ಹೇಳಿದರು.