ಕಲಿಕೆ-ನಾವೀನ್ಯತೆ ಸಮ್ಮಿಲನ ಅಗತ್ಯ: ವೆಂಕಪ್ಪಯ್ಯ ಆರ್‌, ದೇಸಾಯಿ

| Published : Apr 13 2025, 02:09 AM IST

ಕಲಿಕೆ-ನಾವೀನ್ಯತೆ ಸಮ್ಮಿಲನ ಅಗತ್ಯ: ವೆಂಕಪ್ಪಯ್ಯ ಆರ್‌, ದೇಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ಶಿಕ್ಷಣವೂ ಒಂದು ಚೌಕಟ್ಟಿನೊಳಗೆ ಇರುತ್ತದೆ. ಆದರೆ ನಾವು ಒಂದು ಸಮಸ್ಯೆಯನ್ನು ಪರಿಹರಿಸಲು ಬಯಸಿದಾಗ ಆ ಚೌಕಟ್ಟನ್ನು ದಾಟಿ ಹೋಗಬೇಕಾಗುತ್ತದೆ. ಇದಕ್ಕಾಗಿ ತರಗತಿಯ ಆಚೆಗೂ ಯೋಚನೆ ಮಾಡುವ ಅವಶ್ಯಕತೆ ಇರುತ್ತದೆ. ಇಂತಹ ಆಲೋಚನೆಗಳು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುವುದಲ್ಲದೇ ಅವರ ಭವಿಷ್ಯಕ್ಕೆ ಏಣಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ತರಗತಿಯ ಕಲಿಕೆಯೊಂದಿಗೆ ಆಧುನಿಕ ನಾವೀನ್ಯತೆಗಳನ್ನು ಸಮ್ಮಿಲನಗೊಳಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಹೊಸತನ ಸಾಧಿಸಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್. ದೇಸಾಯಿ ಅಭಿಪ್ರಾಯಪಟ್ಟರು.

ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚೆನ್ನಯ್ಯ ಸಭಾಂಗಣದಲ್ಲಿ ಶನಿವಾರ ನಡೆದ ಕಾಲೇಜಿನ ಮೂರನೇ ಸ್ನಾತಕೋತ್ತರ ಪದವಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪದವಿ ಶಿಕ್ಷಣವೂ ಒಂದು ಚೌಕಟ್ಟಿನೊಳಗೆ ಇರುತ್ತದೆ. ಆದರೆ ನಾವು ಒಂದು ಸಮಸ್ಯೆಯನ್ನು ಪರಿಹರಿಸಲು ಬಯಸಿದಾಗ ಆ ಚೌಕಟ್ಟನ್ನು ದಾಟಿ ಹೋಗಬೇಕಾಗುತ್ತದೆ. ಇದಕ್ಕಾಗಿ ತರಗತಿಯ ಆಚೆಗೂ ಯೋಚನೆ ಮಾಡುವ ಅವಶ್ಯಕತೆ ಇರುತ್ತದೆ. ಇಂತಹ ಆಲೋಚನೆಗಳು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುವುದಲ್ಲದೇ ಅವರ ಭವಿಷ್ಯಕ್ಕೆ ಏಣಿಯಾಗುತ್ತದೆ ಎಂದರು.

ಪ್ರಸ್ತುತ ಜಾಗತಿಕ ವಲಯದಲ್ಲಿ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರತೆಯ ಸವಾಲು ಇವೆ. ಇಂತಹ ನೈಜ ಸಮಸ್ಯೆಗ ಪರಿಹಾರ ಮಾಡಬೇಕಾದರೆ ಪದವಿ ಪಡೆದ ವಿದ್ಯಾರ್ಥಿಗಳು ತಾವು ಗಳಿಸಿಕೊಂಡಿರುವ ಶೈಕ್ಷಣಿಕ ಜ್ಞಾನವನ್ನು ಉಪಯೋಗಿಸಿಕೊಳ್ಳುವ ಅವಶ್ಯಕತೆ ಇದೆ. ಇದರಿಂದಾಗಿ ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಸಬಲೀಕರಣಗೊಳಿಸಬಹುದು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ,ಭಾರತವು ನವೋದ್ಯಮ ರಾಷ್ಟ್ರವಾಗಿ ಬಹಳ ವೇಗವಾಗಿ ಬೆಳವಣಿಗೆ ಆಗುತ್ತಿದೆ. ನಾವು ನಮ್ಮ ಸಂಸ್ಥೆಯಿಂದ ಪದವಿ ಪಡೆಯುವ ವಿದ್ಯಾರ್ಥಿಗಳನ್ನು ಉದ್ಯೋಗಾಕಾಂಕ್ಷಿಗಳಾಗಿ ಮಾತ್ರವಲ್ಲ, ಅವರೇ ಉದ್ದಿಮೆಗಳನ್ನು ಸ್ಥಾಪನೆ ಮಾಡಿ ಉದ್ಯೋಗ ನೀಡುವಂತವರಾಗುವಂತೆ ಪ್ರೊತ್ಸಾಹಿಸುತ್ತೇವೆ. ತನ್ಮೂಲಕ ನಮ್ಮ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದುವ ವಿಶ್ವವಿದ್ಯಾಲಯವಾಗುವ ದೃಷ್ಟಿಕೋನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪಲು ಅವರು ಹೊಂದಿರುವ ಮನೋಭಾವ ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲರೂ ಸಾಧಿಸುವ ಛಲ ಹೊಂದಿರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದರು.

ಪ್ರಾಂಶುಪಾಲ ಬಿ. ಸದಾಶಿವೇಗೌಡ ಮಾತನಾಡಿ, ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳವಣಿಗೆಯು ವಿಕಸನಗೊಳ್ಳುತ್ತಿದೆ. ದೇಶವು 2030 ರ ವೇಳೆಗೆ 10 ಟ್ರಿಲಿಯನ್ ಆರ್ಥಿಕತೆ ಗುರಿ ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಜತೆಗೆ ಹೊಸತನಕ್ಕೆ ಹೊಂದಿಕೊಳ್ಳುವಿಕೆಯ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ. ನಾವೀನ್ಯತೆ, ಡಿಜಿಟಲ್ ಮೂಲಸೌಕರ್ಯ ಮತ್ತು ಉದ್ಯಮಶೀಲತಾ ಮನೋಭಾವವು ಭಾರತದ ರೂಪಾಂತರದ ಚಾಲನಾ ಸ್ಥಾನದಲ್ಲಿ ಪ್ರಮುಖವಾಗಿ ಕುಳಿತಿವೆ ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ. ಶಿವಲಿಂಗಪ್ಪ, ಉಪ ಪ್ರಾಂಶುಪಾಲೆ ಡಾ. ಶೋಭಾ ಶಂಕರ್, ಪರೀಕ್ಷಾ ನಿಯಂತ್ರಕ ಎಲ್‌.ಜೆ. ಸುದೇವ್‌ ಮೊದಲಾದವರು ಪಾಲ್ಗೊಂಡಿದ್ದರು.

ಹತ್ತು ಮಂದಿಗೆ ರ್ಯಾಂಕ್‌:

ಪದವಿ ಪ್ರದಾನ ಸಮಾರಂಭದಲ್ಲಿ 111 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. ಇಬ್ಬರು ಎಂ.ಟೆಕ್ ಪದವಿ ಪಡೆದರು. 109 ಮಂದಿ ಎಂಬಿಎ ಪದವಿ ಪಡೆದರು. ಅತ್ಯುನ್ನತವಾಗಿ ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಯಿತು. ಹತ್ತು ಮಂದಿಯಲ್ಲಿ ಎಂಟು ಮಂದಿ ವಿದ್ಯಾರ್ಥಿನಿಯರೇ ಆಗಿರುವುದು ವಿಶೇಷ.