ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸದೃಢ ಸಮಾಜಕ್ಕಾಗಿ ಮ್ಯಾರಾಥಾನ್‌ನಂತಹ ಕಾರ್ಯಕ್ರಮಗಳು ಜಾಗೃತಿ- ಅರಿವು ಮೂಡಿಸಲು ಅತ್ಯಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳ ಉದ್ದೇಶ ಸಫಲತೆ ಕಾಣಲು, ಸಾಮಾಜಿಕವಾಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜ್‌ಗಳು ಕೈ ಜೋಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕರೆ ನೀಡಿದರು.ನಗರದ ಗೋಳಗುಮ್ಮಟ ಆವರಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಡ್ರಗ್ ಫ್ರೀ ಕರ್ನಾಟಕ ಫಿಟ್‌ನೆಸ್ ಫಾರ್ ಆಲ್ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಥೀಮ್‌ನ ಅಡಿಯಲ್ಲಿ ಕರ್ನಾಟಕ ಪೊಲೀಸ್ ರನ್- ೨೦೨೫ ಮ್ಯಾರಾಥಾನ್ ೫ ಕಿ.ಮೀ ದೂರದ ಓಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಮಾತನಾಡಿದರು. ವ್ಯಸನಕ್ಕೆ ಒಳಗಾಗದೆ ಸುಂದರ ಜೀವನ ರೂಪಿಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡ್ರಗ್ಸ್ ಫ್ರಿ ಕರ್ನಾಟಕ, ಫಿಟನೆಸ್ ಫಾರ್ ಆಲ್ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆಯ ವಿಷಯಧಾರಿತ ಕರ್ನಾಟಕ ಪೊಲೀಸ್ ರನ್-೨೦೨೫ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಮಾಜದಲ್ಲಿ ಡ್ರಗ್ಸ್ ನಿಯಂತ್ರಣ ಮಾಡಬೇಕಾದರೆ ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಜಿಲ್ಲಾಡಳಿತದ ವತಿಯಿಂದಲೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಪಾಲಕರು ಅರಿವು ಹೊಂದುವ ಮೂಲಕ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಯಾವುದೇ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಸಮಾಜದ ಸುರಕ್ಷತೆಯ ಹಿತದೃಷ್ಟಿಯಿಂದ ಬಿಡುವಿಲ್ಲದೇ ದಿನನಿತ್ಯದ ೨೪ ಗಂಟೆಗಳ ಕಾರ್ಯ ನಿರ್ವಹಿಸುವ ಪೊಲೀಸರು ಸಹ ತಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪ್ರತಿ ದಿನ ಒಂದು ಗಂಟೆಗಳ ಕಾಲ ದೈಹಿಕ ಸದೃಢತೆಗೆ ಸಮಯ ಮೀಸಲಿಡಬೇಕು. ಈ ಮೂಲಕ ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಭಾಗವಹಿಸಿದವರನ್ನು ಹುರಿದುಂಬಿಸಿದರು.ಮ್ಯಾರಾಥಾನ್ ಓಟವು ಗೋಲಗುಂಬಜ್‌ನಿಂದ ಆರಂಭವಾಗಿ, ಜಿಲ್ಲಾ ಕ್ರೀಡಾಂಗಣ, ಬಸವೇಶ್ವರ ವೃತ್ತ, ಗಾಂಧಿ ಚೌಕ್, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಸೋಲಾಪೂರ ರಸ್ತೆ ಮಾರ್ಗವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಮ್ಯಾರಾಥಾನ್‌ದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.ಕೋಟ್‌ಸಮಾಜದ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಬಿಡುವಿಲ್ಲದೇ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಪೊಲೀಸರು ಸಹ ತಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಪ್ರತಿ ದಿನ ಒಂದು ಗಂಟೆಗಳ ಕಾಲ ದೈಹಿಕ ಸದೃಢತೆಗೆ ಸಮಯವನ್ನು ಮೀಸಲಿಡಬೇಕು. ಈ ಮೂಲಕ ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ