ಮಂಗಳೂರು ವಿವಿಗೆ ನೂತನ ಕುಲಪತಿ ಪ್ರೊ.ಪಿ.ಎಲ್‌. ಧರ್ಮ

| Published : Mar 06 2024, 02:20 AM IST

ಮಂಗಳೂರು ವಿವಿಗೆ ನೂತನ ಕುಲಪತಿ ಪ್ರೊ.ಪಿ.ಎಲ್‌. ಧರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊ.ಪಿ.ಎಲ್‌. ಧರ್ಮ ಅವರು ಮುಂದಿನ ನಾಲ್ಕು ವರ್ಷ ಅವಧಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಈ ನೇಮಕ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕುಲಪತಿ ನೇಮಕ ಮಾಡಲಾಗಿದೆ. ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರೊಫೆಸರ್‌ ಪಿ.ಎಲ್‌.ಧರ್ಮ ಅವರನ್ನು ನೂತನ ಕುಲಪತಿಯಾಗಿ ರಾಜ್ಯಪಾಲರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಮಂಗಳೂರು ವಿವಿ ಹೊಸ ಕುಲಪತಿ ನೇಮಕ ಕುರಿತ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಹಗ್ಗಜಗ್ಗಾಟ ಕೊನೆಗೊಂಡಂತಾಗಿದೆ.

ಪ್ರೊ.ಪಿ.ಎಲ್‌. ಧರ್ಮ ಅವರು ಮುಂದಿನ ನಾಲ್ಕು ವರ್ಷ ಅವಧಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಈ ನೇಮಕ ಮಾಡಿದ್ದಾರೆ. ಮಂಗಳೂರು ವಿವಿ ಕುಲಪತಿಯಾಗಿದ್ದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಅವಧಿ ಕಳೆದ ಜೂನ್‌ನಲ್ಲಿ ಮುಗಿದಿತ್ತು. ಬಳಿಕ ಹಿರಿಯ ಡೀನ್‌ ಪ್ರೊ. ಜಯರಾಜ್‌ ಅಮೀನ್‌ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ನಡುವೆ ಹೊಸ ಕುಲಪತಿ ನೇಮಕಕ್ಕೆ ಸರ್ಕಾರ ಸರ್ಚ್ ಕಮಿಟಿ ರಚಿಸಿ ಆ ಕಮಿಟಿ ಮೂರು ಮಂದಿಯ ಹೆಸರು ಶಿಫಾರಸು ಮಾಡಿತ್ತು. ಸರ್ಚ್‌ ಕಮಿಟಿ ಶಿಫಾರಸು ಮಾಡಿದ ಮೂವರು ಕೂಡ ಮಂಗಳೂರು ವಿವಿಗೆ ಸೇರಿದವರು ಎಂಬುದು ಗಮನಾರ್ಹ. ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಆಡಳಿತ ಕುಲಸಚಿವರಾಗಿದ್ದ ಡಾ.ಕಿಶೋರ್‌ ಕುಮಾರ್‌, ಪರೀಕ್ಷಾಂಗ ಕುಲಸಚಿವರಾಗಿದ್ದ ಪ್ರೊ.ಪಿ.ಎಲ್‌.ಧರ್ಮ ಹಾಗೂ ಮೈಸೂರು ವಿವಿ ಪ್ರಭಾರ ಕುಲಪತಿಯಾಗಿದ್ದ ಪ್ರೊ.ಮುಜಾಫರ್‌ ಅಸ್ಸಾದಿ ಹೆಸರು ಶಿಫಾರಸುಗೊಂಡಿತ್ತು.

ಪ್ರೊ.ಧರ್ಮ ಅವರು ಮಂಗಳವಾರವೇ ಕುಲಪತಿಯಾಗಿ ಹಂಗಾಮಿ ಕುಲಪತಿ ಪ್ರೊ.ಜಯರಾಜ್‌ ಅಮೀನ್‌ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. 3ನೇ ಬಾರಿ ಮಂಗಳೂರು ವಿವಿಯವರೇ ವಿಸಿ!

ಮಂಗಳೂರು ವಿವಿಯಲ್ಲಿ ಕಾರ್ಯನಿರ್ವಹಿಸಿದವರೇ ಕುಲಪತಿಯಾಗಿ ನೇಮಕವಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಪ್ರೊ. ಕಾವೇರಿಯಪ್ಪ, ಬಳಿಕ ಪ್ರೊ. ಯಡಪಡಿತ್ತಾಯ, ಈಗ ಪ್ರೊ.ಪಿ.ಎಲ್‌.ಧರ್ಮ ಕುಲಪತಿಯಾಗಿದ್ದಾರೆ.

ಕೊಡಗು ಮೂಲದ ಎರಡನೇ ಕುಲಪತಿ ಇವರಾಗಿದ್ದಾರೆ. ಈ ಹಿಂದೆ ಪ್ರೊ. ಕಾವೇರಿಯಪ್ಪ ಬಳಿಕ ಪ್ರೊ.ಪಿ.ಎಲ್‌.ಧರ್ಮ ಕೊಡಗು ಮೂಲದ ಕುಲಪತಿಯಾಗಿದ್ದಾರೆ.