3 ವರ್ಷದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

| Published : Sep 17 2024, 12:53 AM IST

3 ವರ್ಷದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ವರ್ಷದಲ್ಲಿ ₹50 ಕೋಟಿ ವೆಚ್ಚದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೂರು ವರ್ಷದಲ್ಲಿ ₹50 ಕೋಟಿ ವೆಚ್ಚದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ರಾಮತೀರ್ಥ ನಗರದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಬೆಳಗಾವಿಗೆ ಸ್ವಲ್ಪ ತಡವಾದರೂ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಹೇಳಿದರು. ಸ್ಥಳೀಯ ನಿವಾಸಿಗಳ ಸಹಕಾರದಿಂದ ಮಹತ್ವದ ಕಾರ್ಯ ಕೈಗೊಳ್ಳಲು ಅನುಕೂಲವಾಗಿದೆ. ಭವ್ಯ ದೇವಸ್ಥಾನ ಕೂಡ ನಿರ್ಮಾಣವಾಗಲಿದೆ. ಸ್ಥಳೀಯ ಶಾಸಕರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿ ಸ್ಥಳೀಯ ನಿವಾಸಿಗಳು ಹಾಗೂ ಕ್ರೀಡಾಪಟುಗಳಿಗೆ ಅನೂಕೂಲವಾಗುವಂತೆ ಸಮುದಾಯಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕ್ರೀಡಾಂಗಣಕ್ಕೆ ಅನುಕೂಲವಾಗುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ರಾಮತೀರ್ಥನಗರ ಬೆಳಗಾವಿಯ ಸರ್ವೆ ನಂ. 633,622, 623ರಲ್ಲಿ 9.26 ಎಕರೆ ಭೂಮಿ ಮಂಜೂರು ಮಾಡಿದೆ. ಇನ್ನೂ 6 ಎಕರೆ ಜಾಗ ನೀಡಲು ಸ್ಥಳೀಯರ ಒಮ್ಮತವಿದೆ. ಹಂತ-ಹಂತವಾಗಿ ಕಾಮಗಾರಿ ನಡೆಯಲಿದೆ. ಇಲ್ಲಿನ ವಿದ್ಯಾರ್ಥಿಗಳು ಪಾಠದ ಜೊತೆ ಆಟದಲ್ಲಿಯೂ ಪ್ರತಿಭೆ ತೋರಿಸಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಶುಭ ಹಾರೈಸಿದರು.

ಬೆಳಗಾವಿ ಉತ್ತರ ಶಾಸಕ ಆಸೀಫ್‌ ಸೇಠ್‌ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಸುಮಾರು 15 ಎಕರೆ ಜಾಗದಲ್ಲಿ ಅತ್ಯುತ್ತವಾದ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಲಿದೆ. ಸಚಿವ ಸತೀಶ ಜಾರಕಿಹೊಳಿ ಅವರು ಮುತುವರ್ಜಿ ವಹಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ₹50 ಕೋಟಿ ತ್ವರಿತವಾಗಿ ಬಿಡುಗಡೆ ಮಾಡಿದ್ದಾರೆ. ಕ್ರೀಡಾಂಗಣ ನಿರ್ಮಾಣಕ್ಕೆ ಇನ್ನೂ ಸಚಿವರ ಬಳಿ ₹150 ಕೋಟಿ ಬೇಡಿಕೆ ಇಡಲಾಗಿದೆ. ಸಚಿವರು ಎಲ್ಲಾ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೂರು ವರ್ಷದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಈ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ರಾಮತೀರ್ಥ ನಗರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕ್ರೀಡೆಗೆ ಸಚಿವರು ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ದೊಡ್ಡ ದೇವಾಲಯ ನಿರ್ಮಾಣಕ್ಕೆ ಸಕಲ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೊಮ್ಮಹದ್‌ ರೋಷನ್‌, ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌, ಎಸ್ಪಿ ಭೀಮಾ ಶಂಕರ ಗುಳೇದ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಯುವಸಬಲೀಕರಣ, ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ್‌ , ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಸೊಬರದ, ಹಾಗೂ ಅಧಿಕಾರಿಗಳು, ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ನಗರ ಸೇವಕ ಹನುಮಂತ ಕೊಂಗಾಲಿ, ಸಿ.ಕೆ. ಜೋರಾಪುರ ಇತರರು ಇದ್ದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಪ್ರತಿನಿಧಿಸಲು ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುವುದು ಬಹಳ ಮುಖ್ಯ. ಹೀಗಾಗಿ ಈ ಅಗತ್ಯ ಮನಗಂಡು ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಲೋಕೋಪಯೋಗಿ ಇಲಾಖೆಯಿಂದ ₹10 ಕೋಟಿ ನೀಡಲಾಗಿದೆ. ಮೂರು ವರ್ಷದಲ್ಲಿ ಸುಸಜ್ಜಿತವಾದ ಭವ್ಯ ಕ್ರೀಡಾಂಗಣ ತಲೆ ಎತ್ತಲಿದೆ.

- ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ