ಇಂದು ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ನೂತನ ಮಹಾದ್ವಾರ ಲೋಕಾರ್ಪಣೆ

| Published : Nov 07 2024, 11:58 PM IST

ಇಂದು ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ನೂತನ ಮಹಾದ್ವಾರ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ತಾಲೂಕಿನ ಹಿರೇಕಲ್ಲು ಗುಡ್ಡದ ರಾಮೇನಹಳ್ಳಿ ಸ್ಟೇಟ್ ಫಾರೆಸ್ಟಿನಲ್ಲಿ ನೆಲೆಸಿ ವೈಭೋಗದಿಂದ ರಾರಾಜಿಸುತ್ತಿರುವ ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ನೂತನ ಮಹಾದ್ವಾರ ಲೋಕಾರ್ಪಣೆ ಮಹೋತ್ಸವವು ನ.8ರ ಶುಕ್ರವಾರ ಶ್ರೀಕರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ತಿಪಟೂರು ತಾ. ಇವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಮಹಾದ್ವಾರ ಲೋಕಾರ್ಪಣೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಹಿರೇಕಲ್ಲು ಗುಡ್ಡದ ರಾಮೇನಹಳ್ಳಿ ಸ್ಟೇಟ್ ಫಾರೆಸ್ಟಿನಲ್ಲಿ ನೆಲೆಸಿ ವೈಭೋಗದಿಂದ ರಾರಾಜಿಸುತ್ತಿರುವ ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ನೂತನ ಮಹಾದ್ವಾರ ಲೋಕಾರ್ಪಣೆ ಮಹೋತ್ಸವವು ನ.8ರ ಶುಕ್ರವಾರ ಶ್ರೀಕರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ತಿಪಟೂರು ತಾ. ಇವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಮಹಾದ್ವಾರ ಲೋಕಾರ್ಪಣೆಗೊಳ್ಳಲಿದೆ.

ಹಿರೇಕೆಲ್ಲು ಗಿರಿ ಸುಮಾರು 25 ಕಿ.ಮೀ ಗಿಂತಲೂ ಹೆಚ್ಚು ಉದ್ದವಿದೆ. ಅನೇಕ ದೇವಾನುದೇವತೆಗಳ ತಫೋವನವಾಗಿದೆ. ಅನೇಕ ದೇವರುಗಳ ತಾಣವಾಗಿದೆ. ಶ್ರೀ ಮಾಲೆಕಲ್ಲು ಲಕ್ಷ್ಮಿ ವೆಂಕಟರಮಣ ಸ್ವಾಮಿ, ಕೆಂಗಲ್ಲು ಸಿದ್ದೇಶ್ವರ ಸ್ವಾಮಿ, ನಾಗಪುರಿ ಶಂಕರೇಶ್ವರ ಸ್ವಾಮಿ, ಹಿರೇಕಲ್ಲು ಕೊಟ್ಟೂರೇಶ್ವರ ಸ್ವಾಮಿ, ಹೀಗೆ ಅಲ್ಲಲ್ಲಿ ದೇವರುಗಳ ಪುಣ್ಯಕ್ಷೇತ್ರದ ಇತಿಹಾಸವು ಇದೆ ಹಿರಿಯ ಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಬಾಧೆ ಬಸವೇಶ್ವರ, ರಾಮೇಶ್ವರ, ಚನ್ನಬಸವೇಶ್ವರ ಕುಪ್ಪೂರು ಮರುಳಪ್ಪ, ದೋಣಿ ಶಿವ ಪಾರ್ವತಿ ನಾಟ್ಯಾಧಾರಿ. ಮಜ್ಜಿಗೆ ಹಳ್ಳ. ಈ ರೀತಿಯಲ್ಲಿ ನೋಡುವಂತಹ ಪುಣ್ಯ ಸ್ಥಳಗಳು ಈ ಗುಡ್ಡದಲ್ಲಿವೆ.

ಈ ಬೆಟ್ಟದಲ್ಲಿ ಅನೇಕ ತರಹದ ಗಿಡಮೂಲಿಕೆಗಳು ಶ್ರೀಗಂಧ, ಭೂತಾಳೆ, ವನ್ನೇ, ಸಂಜೀವಿನಿ, ಬೆಟ್ಟದಾವರೇ, ಜಾಲದ ಹೂವು, ಮಾಕಳಿ ಬೇರು ಇನ್ನೂ ಅನೇಕ ತರಹದ ಗಿಡಮೂಲಿಕೆಗಳು ಬೆಳೆದು ನಿಂತಿವೆ. ಈ ಗಿರಿಯಲ್ಲಿ ಒಂದೆಡೆ ಪ್ರಶಾಂತ ನಾಗಪುರಿ ಎಂಬ ಸ್ಥಳವಿದೆ. ಅದನ್ನು ಆಳುತ್ತಿದ್ದವನೇ ತಿಮ್ಮಪ್ಪ ನಾಯಕ ಎಂಬ ಮಹಾರಾಜ ಈತನ ವಾಸ ಸ್ಥಳದ ಹೆಸರು ಬಹದ್ದೂರ್‌ಗಢ. ಇದು ಶಂಕರೇಶ್ವರನ ದೇವಾಲಯದ ದಕ್ಷಿಣಕ್ಕೆ ಇದೆ.ತಿಮ್ಮಪ್ಪ ನಾಯಕನು ದೈವ ಭಕ್ತ. ಈತನಿಗೆ ಯಾವ ಕುಂದು ಕೊರತೆಯೂ ಇರಲಿಲ್ಲ, ಆದರೆ ಪುತ್ರ ಸಂತಾನ ಇಲ್ಲವಲ್ಲ ಎಂಬ ಕೊರಗು ಇವನನ್ನು ಕಾಡುತ್ತಿತ್ತು, ಈತನಿಗೆ ರಂಗಮ್ಮ ಎಂಬ ಧರ್ಮ ಪತ್ನಿ ಸಾಧ್ವಿ ಶಿರೋಮಣಿ ಪುತ್ರ ವಾತ್ಸಲ್ಯ ಇಲ್ಲದಿದ್ದರಿಂದ ನಾಗಪುರಿ ಶ್ರೀ ಶಂಕರೇಶ್ವರನಲ್ಲಿ ಪ್ರತಿನಿತ್ಯ ಬೇಡಿಕೊಳ್ಳುತ್ತಿದ್ದರು, ಹೀಗೆ ಕೆಲವು ದಿವಸಗಳು ಕಳೆದವು, ಶ್ರೀ ಗುರುವಿನ ಕೃಪೆಯು ಕಾಲ ಸಮೀಪಿಸಿತು. ಒಂದು ದಿನ ಬೇಟೆಯಾಡಬೇಕೆಂಬ ಮನಸಾಯಿತು. ಬಿಲ್ಲು ಬಾಣಗಳನ್ನು ತೆಗೆದುಕೊಂಡು ತಿಮ್ಮಪ್ಪ ನಾಯಕನು ಆ ಕಾಡಿನಲ್ಲಿ ಬರುತ್ತಾ ತನ್ನ ಕೈಯಲ್ಲಿದ್ದ ಬಿಲ್ಲಿಗೆ ಬಾಣವನ್ನು ಜೋಡಿಸಿ ಆಕಾಶದ ಕಡೆ ಬಿಟ್ಟನು. ಆಗ ಅಲ್ಲಿಯೇ ಗರ್ಜಿಸಿತು ಒಂದು ಹುಲಿ. ಹುಲಿಯನ್ನು ನೋಡಿದ ನಾಯಕ ಪ್ರಾಣಭಯದಿಂದ ತಲ್ಲಣಿಸಿದ. ಆದರೂ ತನ್ನ ಬಿಲ್ಲಿಗೆ ಬಾಣವನ್ನ ಜೋಡಿಸಿ ಹುಲಿಗೆ ಗುರಿ ಇಟ್ಟು ಒಡೆಯಬೇಕೆಂದು ನಿಂತ ಕ್ಷಣಾರ್ಧದಲ್ಲಿ ಆಶ್ಚರ್ಯವಾಗಿ ಹುಲಿಯು ಮಾಯವಾಗಿ ಗುರುವಿನ ರೂಪದಲ್ಲಿ ಕಾಣಿಸಿಕೊಂಡಿತು. ನಾಯಕರಿಗೆ ದಿಗ್ಭ್ರಮೆಯಾಗಿ ಬಿಲ್ಲು ಬಾಣವನ್ನು ಕೆಳಗೆ ಗುರುವಿನ ಬಳಿಗೆ ಹೋದರು. ಅತ್ಯಂತ ಭಯ ಭಕ್ತಿಯಿಂದ ಗುರುಗಳ ಪಾದಕ್ಕೆ ನಮಸ್ಕರಿಸಿ ಗುರುವೇ ತಮ್ಮ ತಪ್ಪುಗಳನ್ನು ಮನ್ನಿಸಿ ಎಂದು ಬೇಡಿಕೊಂಡನು. ಆಗ ಗುರುದೇವನ ದಯದಿಂದ ನಿನಗೆ ಪುತ್ರ ಸಂತಾನವಾಗುವುದು ಎಂದು ವರಪ್ರದಾನ ಮಾಡಿದರು. ತಿಮ್ಮಪ್ಪನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಅಂಜಲಿ ಬದ್ಧನಾಗಿ ಗುರುಸಿದ್ದರು ಆ ತಿಮ್ಮಪ್ಪ ನನ್ನದೊಂದು ದೇವಾಲಯವನ್ನು ನೀನು ಕಟ್ಟಿಸಬೇಕೆಂದರು ಆಗ ತಿಮ್ಮಪ್ಪ ನಾಯಕ ಸ್ವಾಮಿ ತಮ್ಮ ಆಜ್ಞೆಯನ್ನು ನಡೆಸಲು ನಾನು ಸಿದ್ಧನಿದ್ದೇನೆ ಎಲ್ಲಿ ಕಟ್ಟಿಸಬೇಕು ಎಂದು ನನಗೆ ಅನುಗ್ರಹಿಸಿದರೆ ನಾನು ದೇವಾಲಯ ಕಟ್ಟಿಸಲು ಸಿದ್ಧನಾಗಿದ್ದೇನೆ ಎಂದರು ಆಗ ಗುರುಗಳು ಆತನ ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಬಾಣವನ್ನ ಜೋಡಿಸಿ ಬಿಟ್ಟರು ಇದೇ ಮಾರ್ಗದಲ್ಲಿ ಮುಂದೆ ಹೋಗು ಆ ಬಾಣ ನಿನ್ನ ಕಣ್ಣಿಗೆ ಸಿಗುವುದು ಅಲ್ಲಿ ದೇವಾಲಯವನ್ನು ಕಟ್ಟಿಸಿ ಎಂದು ಅಭಯವನಿತ್ತು ಥಟ್ಟನೆ ಮಾಯವಾದರು. ತಿಮ್ಮಪ್ಪ ನಾಯಕನು ಪರಮಾತ್ಮನ ಪ್ರೇರಣೆಗೆ ಅಚ್ಚರಿಗೊಂಡು ಅಂದಿನಿಂದಲೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದನಂತೆ ಎಂಬುದು ಇತಿಹಾಸ. ತಿಮ್ಮಪ್ಪ ನಾಯಕನ ಕಟ್ಟಿಸಿದಂತಹ ದೇವಾಲಯವೇ ಈಗ ಪ್ರಸಿದ್ಧಿ ಪಡೆದು ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಎಂಬ ನಾಮಾಂಕಿತ ಪ್ರಕಾಶಮಾನವಾಗಿ ರಾಜ್ಯದ ಉದ್ದಗಲಕ್ಕೂ ಗೋಚರಿಸುತ್ತಿದೆ.

ಶ್ರೀ ಹಿರೇಕಲ್ ಸಿದ್ಧರ ಕ್ಷೇತ್ರವು ರಾಮನಹಳ್ಳಿ ಗ್ರಾಮದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದೆ. ಈ ಗುಡ್ಡದಲ್ಲಿ ರಮಣೀಯವಾದ ಕ್ಷೇತ್ರಗಳು ನೋಡಲು ಬಲು ಸುಂದರವಾಗಿವೆ. ಗಿರಿ ಸಿದ್ದೇಶ್ವರರ ಸನ್ನಿಧಿಯಲ್ಲಿ ಗಂಗಮ್ಮ ದೋಣಿ ಪ್ರಖ್ಯಾತವಾಗಿದ್ದು ಪುತ್ರ ಸಂತಾನವಿಲ್ಲದ ಮುತ್ತೈದೆಯರು ಗಂಗಾಮಾತೆಯನ್ನು ಪೂಜಿಸಿಕೊಂಡು ಪಂಚ ಕೊಡದಲ್ಲಿ ನೀರನ್ನು ಹಾಕಿಸಿಕೊಂಡು ಗಂಗಾಮಾತೆಯಲ್ಲಿ ಭಯ ಭಕ್ತಿಯಿಂದ ನಡೆದುಕೊಂಡರೆ ಎಷ್ಟು ಸತಿಪತಿಗಳಿಗೆ ಪುತ್ರ ಸಂತಾನವಾಗಿ ಶ್ರೀ ಹಿರೇಕಲ್ಲು ಸಿದ್ದರಿಗೆ ಹರಕೆ ಒತ್ತಂತಹ ನಾಡಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಇಂದಿಗೂ ಸುಳ್ಳಲ್ಲ. ಇಂತಹ ಒಂದು ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಸುಮಾರು ಸುತ್ತಮುತ್ತಲು 150ಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉದಾರವಾಗಿ ಧನಸಹಾಯ ಮಾಡಿ ದ್ವಾರ ಬಾಗಿಲು ಇಂದು ಲೋಕಾರ್ಪಣೆಗೊಳ್ಳಲಿದೆ.

ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳು ಕೆರಗೋಡಿ ಮಠ. ಕರಿವೃಷಭದೇಶ ಕೇಂದ್ರ ಶಿವಯೋಗಿ ಶ್ವರ ಮಹಾಸ್ವಾಮಿಗಳು ಕಾಡುಸಿದ್ದೇಶ್ವರ ಮಠ. ಕಾಯಕಯೋಗಿ ಶಾಂತವೀರ ಸ್ವಾಮಿಗಳು ಕುಂಚಗಿರಿ ಮಠ ಹೊಸದುರ್ಗ. ಶ್ರೀ ಶಂಭುನಾಥ ಸ್ವಾಮಿಗಳು ಆದಿಚುಂಚನಗಿರಿ ಶಾಖಾಮಠ ಹಾಸನ. ಮಾದರ ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿಯವರು ಚಿತ್ರದುರ್ಗ. ಕೃಷ್ಣ ಯಾದವಾನಂದ ಸ್ವಾಮೀಜಿಯವರು ಚಿತ್ರದುರ್ಗ. ಹೀಗೆ ಇನ್ನೂ ಅನೇಕ ಹಲವಾರು ಮಠಾಧೀಶ್ವರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು, ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ರೈಲ್ವೆ ಸಚಿವರಾದ ವಿ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಸನ ಜಿಲ್ಲಾ ಸಚಿವ ಕೆಎನ್ ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆಎಂ ಶಿವಲಿಂಗೇಗೌಡ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.