ಹೊಸ ಖಾಸಗಿ ಬಸ್‌ ನಿಲ್ದಾಣ ಕಾಳಜಿ ಎಲ್ಲರ ಮೇಲಿದೆ

| Published : Oct 08 2024, 01:04 AM IST

ಸಾರಾಂಶ

ದಾವಣಗೆರೆ ಖಾಸಗಿ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಈ ಬಸ್ ನಿಲ್ದಾಣ ಸುಸಜ್ಜಿತ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದ್ದು, ಜನರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಸ್‌ಗಳ ಸಂಚಾರ ಕಾರ್ಯಾರಂಭ ಸಮಾರಂಭ ಉದ್ಘಾಟಿಸಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಖಾಸಗಿ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಈ ಬಸ್ ನಿಲ್ದಾಣ ಸುಸಜ್ಜಿತ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದ್ದು, ಜನರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಪಿ.ಬಿ. ರಸ್ತೆಯಲ್ಲಿನ ಡಾ.ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಖಾಸಗಿ ಬಸ್‌ಗಳ ಸಂಚಾರ ಕಾರ್ಯಾರಂಭ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಸ್ ನಿಲ್ದಾಣ "ಸ್ಮಾರ್ಟ್ ಸಿಟಿ " ಯೋಜನೆಯಡಿ ₹20 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡು, ಇಂದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಈ ನಿಲ್ದಾಣವು ಹತ್ತಾರು ಸೌಲಭ್ಯಗಳನ್ನು ಹೊಂದಿದೆ. ಹೈಸ್ಕೂಲ್ ಮೈದಾನದಲ್ಲಿ ವಿಪರೀತ ಗೊಂದಲ ಇದ್ದರೂ ಸರ್ಕಾರಿ, ಖಾಸಗಿ ಬಸ್ ನಿಲ್ದಾಣ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಈಗ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಹೊಸ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿವೆ. ಈಗ ಹಳೇ ಬಸ್ ನಿಲ್ದಾಣ ಇಲ್ಲಿಗೆ ಬಂದ ಮೇಲೆ ಜನಸಂದಣಿ ಕಡಿಮೆ ಆಗಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದರು.

ಮಹಾನಗರ ಪಾಲಿಕೆಯವರು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಲಗೇಜ್ ರೂಂ, ಬಾತ್ ರೂಂ, ವಿಶ್ರಾಂತಿ ಕೊಠಡಿ ಸೇರಿದಂತೆ ಅನೇಕ ಸೌಕರ್ಯಗಳನ್ನು ಈ ಖಾಸಗಿ ಬಸ್ ಹೊಸ ನಿಲ್ದಾಣ ಹೊಂದಿದೆ. ಇದರಿಂದ ಖಾಸಗಿ ಬಸ್ ಮಾಲೀಕರಿಗೆ ಇಲ್ಲಿ ಅನುಕೂಲವಾಗುತ್ತಿದೆ. ಸರ್ಕಾರದವರು ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ಮಾಡಿರುವುದರಿಂದ ಅವರು ತೊಂದರೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಏನು ಮಾಡಲು ಆಗಲ್ಲ. ಏಕೆಂದರೆ ಅದು ಸರ್ಕಾರದ ನೆರವು ಎಂದರು.

ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ ಮಾತನಾಡಿ, ಈ ಖಾಸಗಿ ಬಸ್ ನಿಲ್ದಾಣವನ್ನು ಇನ್ನಷ್ಟು ಉನ್ನತೀಕರಿಸಬೇಕು ಎಂದು ಸುಮಾರು ₹20 ಕೋಟಿ ವೆಚ್ಚದಲ್ಲಿ ಸಿದ್ಧಗೊಳಿಸಲಾಗಿದೆ. ಜಾಗದ ಅಭಾವದಿಂದಾಗಿ ಈಗ ಮಾಡಿರುವ ವಿನ್ಯಾಸವನ್ನು ಹಲವರು ಅವೈಜ್ಞಾನಿಕ ಎಂದು ಹೇಳಿದರು. ಕೇಂದ್ರ, ರಾಜ್ಯ ಸರ್ಕಾರದ ಸಲಹೆಗಾರರಾದ ಪ್ರೊ. ಎಲ್.ಎಂ. ಶ್ರೀಹರಿ ಅವರಿಗೆ ಈ ಜಾಗದ ಅಳತೆ ತೋರಿಸಲಾಯಿತು. ಅವರು ಮೂರು ವಿನ್ಯಾಸಗಳನ್ನು ತಯಾರಿಸಿ ನೀಡಿದರು. ಅದರಲ್ಲಿ ಸಮುಚಿತ ಮಾರ್ಗದ ಮೂಲಕ ಅದರಲ್ಲಿ ಒಂದು ವಿನ್ಯಾಸ ಆಯ್ಕೆ ಮಾಡಲಾಯಿತು. ಅದು ಈ ವಿನ್ಯಾಸವಾಗಿದೆ ಎಂದರು.

18 ಕಾರುಗಳು, 200 ದ್ವಿಚಕ್ರ ವಾಹನ ನಿಲುಗಡೆ, 84 ಮಳಿಗೆಗಳು, 3 ಲಿಫ್ಟ್, 2 ಎಕ್ಷಲೇಟರ್‌ಗಳು ಈ ಬಸ್ ನಿಲ್ದಾಣದಲ್ಲಿ ಮಾಡಲಾಗಿದೆ. ಇಲ್ಲಿನ ಮಳಿಗೆಗಳಿಂದ ಮಹಾನಗರ ಪಾಲಿಕೆಗೆ ತಿಂಗಳಿಗೆ ಸುಮಾರು ₹5 ಲಕ್ಷ ಆದಾಯ ಬರುವಂತೆ ನಿರೀಕ್ಷೆ ಮಾಡುತ್ತಿದ್ದೇವೆ. 14 ಬಸ್ ನಿಲ್ಲುವಂತಾಗಿರುವ ಬಸ್ ನಿಲ್ದಾಣದಲ್ಲಿ ಸಚಿವರ ಮಾರ್ಗದರ್ಶನದಂತೆ ಇನ್ನು 2 ಬಸ್ ನಿಲ್ಲಲು ನಮ್ಮ ಎಂಜಿನಿಯರ್‌ಗಳ ಸಹಕಾರದಿಂದ ಒಟ್ಟು 16 ಬಸ್‌ಗಳು ಏಕಕಾಲಕ್ಕೆ ನಿಲ್ಲಲು ಸ್ಥಳ ಮಾಡಲಾಗಿದೆ. ಸುಸಜ್ಜಿತವಾಗಿ ಬಸ್ ನಿಲ್ದಾಣವನ್ನು ದಾವಣಗೆರೆ ಜನತೆಗೆ ಇಂದು ಶಾಸಕರ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದೆ ಎಂದು ಹೇಳಿದರು.

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಇಂದು ಬಸ್ ನಿಲ್ದಾಣ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗಿದೆ. ಈ ಖಾಸಗಿ ಬಸ್ ಮಾಲೀಕರಿಗೆ ಶಕ್ತಿ ಯೋಜನೆ ಬಂದಾಗಿನಿಂದ ಬಹಳ ಕಷ್ಟವಾಗಿದೆ. ಕಷ್ಟವಾದರೂ ಈ ಬಸ್‌ಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಹೆಚ್ಚಿನ ಅನುಕೂಲಗಳನ್ನು ಖಾಸಗಿ ಬಸ್ ಮಾಲೀಕರಿಗೆ, ಏಜೆಂಟರಿಗೆ, ನೌಕರರಿಗೆ ಮಾಡಿಕೊಡಬೇಕು ಎಂದು ತಿಳಿಸಿದರು.

ಪಾಲಿಕೆ ಮೇಯರ್ ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಆಯುಕ್ತೆ ರೇಣುಕ, ಸ್ಮಾರ್ಟ್ ಸಿಟಿ ಎಂಜಿನಿಯರ್ ಕೃಷ್ಣಪ್ರಸಾದ, ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷರಾದ ಉಮೇಶ್‌ ರಾವ್ ಸಾಳಂಕಿ ಹಾಗೂ ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಏಜೆಂಟರ ಸಂಘ ಪದಾಧಿಕಾರಿಗಳು ಭಾಗವಹಿಸಿದ್ದರು.

- - -

ಬಾಕ್ಸ್‌ * ಪಾಲಿಕೆ ಬಸ್ ಸ್ಟ್ಯಾಂಡ್‌ ಸೌಂದರ್ಯ ಕಾಪಾಡಲಿ ಬಸ್‌ ನಿಲ್ದಾಣ ಊರಿನ ಮಧ್ಯ ಭಾಗದಲ್ಲಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರ, ದಾವಣಗೆರೆ ಉತ್ತರ ಕ್ಷೇತ್ರ ಎರಡಕ್ಕೂ ಮಧ್ಯ ಇರುವುದರಿಂದ ಎರಡೂ ಭಾಗದವರಿಗೆ ಅನುಕೂಲವಾಗುತ್ತದೆ. ಈ ಬಸ್ ನಿಲ್ದಾಣದ ಸೌಂದರ್ಯ ಕಾಪಾಡುವ ಕೆಲಸ ಮಹಾನಗರ ಪಾಲಿಕೆ ಮಾಡಬೇಕು. ಗಲೀಜು ಆಗದಂತೆ, ಜನರಿಗೆ ತೊಂದರೆ ಆಗದಂತೆ ಜನಮೆಚ್ಚುವಂತಹ ಕೆಲಸವನ್ನು ಪಾಲಿಕೆಯವರು ಮಾಡಲಿ. ಅವರಿಗೂ ಕೂಡ ಒಳ್ಳೆಯ ಹೆಸರು ಬರಲಿ ಎಂದು ಶಾಸಕರು ಹೇಳಿದರು.

- - -

-7ಕೆಡಿವಿಜಿ40, 41ಃ:

ದಾವಣಗೆರೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಕಾರ್ಯಾರಂಭ ಸಮಾರಂಭವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.