ಸಾರಾಂಶ
- ನಾಳೆ ಕೊಪ್ಪಳ ನಗರದ ಶಿವಶಾಂತಮಂಗಲಭವನದಲ್ಲಿ ಸಭೆ
- ಪಕ್ಷದ ನಾಯಕರಿಂದ ನನ್ನ ನಿರ್ಲಕ್ಷ್ಯ- ನನ್ನ ವಿರುದ್ಧವೇ ಜಿಲ್ಲೆಯ ನಾಯಕರಿಂದ ದೂರು ಕನ್ನಡಪ್ರಭ ವಾರ್ತೆ ಕೊಪ್ಪಳ
ನನಗೆ ಟಿಕೆಟ್ ತಪ್ಪಿದ್ದಕ್ಕಿಂತ ನಂತರ ನನ್ನನ್ನು ನಾಯಕರು ನಡೆಸಿಕೊಂಡ ರೀತಿ, ಸೌಜನ್ಯಕ್ಕೂ ಕರೆ ಮಾಡದಿರುವುದಕ್ಕೆ ತುಂಬಾ ನೋವಾಗಿದೆ. ಮಾ. 21ರಂದು ಬಿಜೆಪಿ ಕಾರ್ಯಕರ್ತರ, ಹಿರಿಯರ ಸಭೆ ಕರೆದು, ಅಭಿಪ್ರಾಯ ಪಡೆದು ನನ್ನ ಮುಂದಿನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ಕೊಪ್ಪಳದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೇ ನಾನು ಯಾವುದೇ ನಿರ್ಧಾರ ಪ್ರಕಟ ಮಾಡುವುದಿಲ್ಲ. ನಾನು ಕೇಳಿರುವ ಮೂರು ಪ್ರಶ್ನೆಗಳಿಗೂ ಬಿಜೆಪಿ ನಾಯಕರು ಉತ್ತರ ನೀಡಿಲ್ಲ. ಹೀಗಾಗಿ, ನನ್ನ ಹಿತೈಷಿಗಳ, ಹಿರಿಯರ ಮತ್ತು ಬಿಜೆಪಿಯ ಕಾರ್ಯಕರ್ತರ ಸಭೆ ಕರೆದು, ಅವರ ಅಭಿಪ್ರಾಯ ತಿಳಿದುಕೊಂಡು, ನಂತರ ಹಿರಿಯರ ಮಾರ್ಗದರ್ಶನ ಪಡೆದುಕೊಂಡ ಮೇಲೆ ಮುಂದೇ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇನೆ.
ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆ ಕರೆಯುತ್ತೇನೆ, ಯಾರು ಬರುತ್ತಾರೆ, ಎಷ್ಟು ಜನ ಬರುತ್ತಾರೆ ಎನ್ನುವುದು ಅವತ್ತೇ ಗೊತ್ತಾಗುತ್ತದೆ ಎಂದರು.ನನಗೆ ಅನ್ಯಾಯವಾಗಿದೆ ಎನ್ನುವ ಕೂಗು ಕ್ಷೇತ್ರಾದ್ಯಂತ ಎದ್ದಿದೆ. ಹೀಗಾಗಿ, ಅವರ ಅಭಿಪ್ರಾಯ ಪಡೆಯಬೇಕಾಗಿದೆ. ಅವರ ಅಭಿಪ್ರಾಯ ಪಡೆಯದ ಹೊರತು ನಾನು ಏನು ಹೇಳುವುದಿಲ್ಲ ಎಂದರು.
ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನಾಗಿ ಡಾ. ಕೆ. ಬಸವರಾಜರನ್ನು ಘೋಷಣೆ ಮಾಡಿದೆ. ಅವರಿಗೆ ನಾನು ಶುಭ ಹಾರೈಸುತ್ತೇನೆ. ಆದರೆ, ಇಷ್ಟೊಂದು ಅಭಿವೃದ್ಧಿ ಮಾಡಿ, ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿರುವ ನನಗೆ ಟಿಕೆಟ್ ತಪ್ಪಿಸಿದ್ದು ಯಾಕೆ ಮತ್ತು ಯಾರು? ಎಂದು ಹೇಳುವಂತೆ ಕೇಳಿದರೂ ಯಾಕೆ ಹೇಳುತ್ತಿಲ್ಲ ಎಂದು ಮತ್ತೆ ಪ್ರಶ್ನೆ ಮಾಡಿದರು.ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾತನಾಡಿದರು. ಸರಿ ಮಾಡೋಣ ಎಂದರು. ಏನು ಸರಿ ಮಾಡುತ್ತೀರಿ? ಎನ್ನುವ ಪ್ರಶ್ನೆಗೆ ಅವರ ಬಳಿ ಸರಿಯಾದ ಉತ್ತರವಿರಲಿಲ್ಲ. ಹೀಗಾಗಿ, ನಾನು ಹೆಚ್ಚು ಮಾತನಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಕಾಳಜಿಗೆ ಕರೆ ಮಾಡಿ ಮಾತನಾಡಿದ್ದಾರೆಯೇ ಹೊರತು ಪಕ್ಷ ಸೇರ್ಪಡೆಯಾಗುವ ಕುರಿತು ಏನೂ ಮಾತನಾಡಿಲ್ಲ. ಆದರೆ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.ಹನುಮಸಾಗರದಲ್ಲಿ ಡಾ. ಬಸವರಾಜ ಮಾತನಾಡುವ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರಿಂದ ನನಗೆ ಟಿಕೆಟ್ ಸಿಕ್ಕಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಏನು ಸಂದೇಶ ಹೋಗುತ್ತದೆ. ಇಂಥ ಮಾತುಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದರು.
ನನಗೆ ರಾಜಕೀಯ ಬಿಟ್ಟು ಗೊತ್ತಿಲ್ಲ, ದೇಹದಲ್ಲಿ ಶಕ್ತಿ ಇರುವವರೆಗೂ ನಾನು ರಾಜಕೀಯ ಮಾಡುತ್ತೇನೆ. ಬೇರೆನು ಮಾಡಿಕೊಂಡು ಬಂದಿಲ್ಲ, ನನಗೆ ಗೊತ್ತೂ ಇಲ್ಲ ಎಂದರು.ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಶಾಸಕನನ್ನಾಗಿ ಮಾಡಿ, ಎರಡು ಬಾರಿ ಸಂಸದನನ್ನಾಗಿ ಮಾಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ ನಾನು ಋಣಿಯಾಗಿದ್ದೇನೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ, ಮಂಜುನಾಥ ಹಂದ್ರಾಳ ಸೇರಿದಂತೆ ಹಲವರು ಇದ್ದರು.