ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರ ಹೊರ ವಲಯದ ಜ್ಞಾನಾಮೃತ ಕಾಲೇಜಿನಲ್ಲಿ ಜರುಗಿದ ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಲೇಖಕ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ ಮಂಪರುಗೆ 2024ರ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕ ಹಾಗೂ ಚಿಂತಕ ಜಿ.ಪಿ. ಬಸವರಾಜ್ ಸಂಗಂ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಗೊಂಡ ಕಾದಂಬರಿ ಹೆಸರನ್ನು ಘೋಷಿಸಿದರು.
ಇದೇ ವೇಳೆ ಮಾತನಾಡಿದ ಜಿ.ಪಿ. ಬಸವರಾಜ್, ಪುರಸ್ಕಾರಕ್ಕೆ 73 ಕಾದಂಬರಿಗಳು ಬಂದಿದ್ದವು. ಈ ಪೈಕಿ ತುಂಬಾರಿ ರಾಮಯ್ಯ ಅವರ ಜಾಲ್ಗಿರಿ ಇಂದ್ರಕುಮಾರ್ ಎಚ್.ಬಿ. ಅವರ ಎತ್ತರ, ಬೆಳಗಾವಿಯ ಲತಾಗುತ್ತಿ ಅವರ ಚದುರಂಗ ಹಾಗೂ ಗುರುಪ್ರಸಾದ್ ಕಾಗಿನೆಲೆ ಅವರ ಸತ್ಕುಲ ಪ್ರಸೂತರು ಕಾದಂಬರಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ತೀಪುಗಾರರಾದ ಸಿರಾಜ್ ಅಹ್ಮದ್, ತಾರಿಣಿ ಶುಭದಾಯಿನಿ, ವೆಂಕಟಗಿರಿ ದಳವಾಯಿ ತಂಡವು ಮಂಪರು ಕಾದಂಬರಿ ಅಂತಿಮಗೊಳಿಸಿದೆ ಎಂದು ತಿಳಿಸಿದರು.ಬಳಿಕ ಚೀಮನಹಳ್ಳಿ ರಮೇಶ್‌ಬಾಬು ಅವರಿಗೆ ಸಂಗಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ₹25 ಸಾವಿರ ನಗದು ಹಾಗೂ ನೆನಪಿನ ಸ್ಮರಣಿಕೆ ನೀಡಲಾಯಿತು. ಪ್ರಶಸ್ತಿ ಪುರಸ್ಕೃತ ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ ಕುರಿತು ಮಾತನಾಡಿದರಲ್ಲದೆ, ಬಳ್ಳಾರಿಯಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಸಂಗಂ ಪುರಸ್ಕಾರ ಸಮಾರಂಭದಿಂದ ಅನೇಕ ಮೌಲ್ವಿಕ ಕೃತಿಗಳು ನಾಡಿಗೆ ಪರಿಚಯಿಸಿದಂತಾಗುತ್ತಿದೆ. ಮಂಪರು ಕಾದಂಬರಿ ಪ್ರಶಸ್ತಿಗೆ ಆಯ್ಕೆಗೊಂಡಿರುವುದು ಹೆಚ್ಚು ಸಂತಸವಾಗಿದೆ ಎಂದು ತಿಳಿಸಿದರು.
ಸಂಗಂ ಟ್ರಸ್ಟ್ ಅಪ್ಪಟ ಸಾಹಿತ್ಯ ಚಟುವಟಿಕೆಗಳಿಗಾಗಿ ಸ್ಥಾಪಿತವಾಗಿದ್ದು, ಸಮಕಾಲೀನ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುತ್ತಾ ತನ್ನ ಕಾರ್ಯಕ್ಷೇತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸ್ಪರ್ಧೆ ಆಯೋಜಿಸಿ, ವಿಚಾರ ಸಂಕಿರಣ ನಡೆಸುತ್ತಾ ಈ ಸಂಸ್ಥೆ ಸಾಹಿತ್ಯ ಚಟುವಟಿಕೆಗಳನ್ನು ಜೀವಂತವಾಗಿಸಿದೆ. ಸಂಗಂ ಸಾಹಿತ್ಯ ಪುರಸ್ಕಾರವನ್ನು 2022ರಲ್ಲಿ ಕಾವ್ಯ ವಿಭಾಗಕ್ಕೆ, 2023ರಲ್ಲಿ ಕಥಾ ವಿಭಾಗಕ್ಕೆ ನೀಡಲಾಗಿತ್ತು. 2024ರ ಪುರಸ್ಕಾರವನ್ನು ಕಾದಂಬರಿ ಪ್ರಕಾರಕ್ಕೆ ನೀಡಲಾಗಿದೆ. ಪುರಸ್ಕಾರ ಕಾರ್ಯಕ್ರಮಕ್ಕೆ ನಾಡಿನ ಅನೇಕ ಲೇಖಕರು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸುತ್ತಿದ್ದಾರೆ ಎಂದು ಸಂಗಂ ಟ್ರಸ್ಟ್‌ನ ಕಾರ್ಯದರ್ಶಿ ಕೆ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದರೆಡ್ಡಿ, ಮರ್ಚೇಡ್ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಎಂ.ಜಿ. ಗೌಡ, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕವಿ ವೀರೇಂದ್ರ ರಾವಿಹಾಳ್, ಆರೀಫ್ ರಾಜಾ, ದಸ್ತಗೀರ್ ಸಾಬ್ ದಿನ್ನಿ ಮತ್ತಿತರರಿದ್ದರು.
ಎರಡು ದಿನಗಳ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಮಕಾಲೀನ ಕನ್ನಡ ಸಾಹಿತ್ಯ ಸ್ವರೂಪ ಹಾಗೂ ಸಂವೇದನೆ ಕುರಿತು ಮಾತುಕತೆ, ಸಮಕಾಲೀನ ಕನ್ನಡ ಕತೆ-ಕವಿತೆ, ಸಮಕಾಲೀನ ಕನ್ನಡ ಸಾಹಿತ್ಯ, ಸಮಕಾಲೀನ ಕನ್ನಡ ರಂಗಭೂಮಿ ಕುರಿತು ಸಂವಾದಗಳು, ನಾಡಿನ ವಿವಿಧ ಕವಿಗಳಿಂದ ಕವಿಗೋಷ್ಠಿ, ಸಂಗಂ ಸಾಹಿತ್ಯ ಪುರಸ್ಕಾರ ಅಂತಿಮ 5 ಕಾದಂಬರಿಕಾರರೊಂದಿಗೆ ಮಾತುಕತೆ ಜರುಗಿದವು. ರಾಜ್ಯದ ವಿವಿಧೆಡೆಗಳಿಂದ ಯುವ ಲೇಖಕರು ಹಾಗೂ ಕಾದಂಬರಿಕಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.