ಸಾರಾಂಶ
- ಹೊನ್ನಾಳಿ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಕ್ತವನ್ನು ಕೃತಕವಾಗಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವಾಗಿ ರಕ್ತ ಉತ್ಪಾದಿಸಲು ಸಹ ಬರುವುದಿಲ್ಲ. ಆದ್ದರಿಂದ ಸಮಾಜದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಘಟಕಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಲ್ಲಿ ಸಹಜವಾಗಿ ಉತ್ಪತ್ತಿಯಾಗುವ ರಕ್ತವನ್ನು ದಾನ ಮಾಡುವುದರಿಂದ ಸಾವಿನ ದವಡೆಯಲ್ಲಿರುವ ಜೀವಗಳನ್ನು ಉಳಿಸಿದ ಪುಣ್ಯ ನಿಮ್ಮದಾಗುತ್ತದೆ. ಇದರಿಂದ ಆ ಕುಟುಂಬಗಳು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಗರ್ಭಪಾತ, ಅಪಘಾತಗಳಾದಾಗ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತವನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ರಕ್ತವನ್ನು ಸಂಗ್ರಹಿಸಿಡುವ ಮೂಲಕ ಅವಶ್ಯಕತೆ ಇರುವವರಿಗೆ ಕೊಡಬಹುದಾಗಿದೆ. ಆದರೆ, ರಕ್ತವನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳಬಾರದು. ರಕ್ತದಾನಿಗಳು ಜಂಕ್ ಫುಡ್‌ನಿಂದ ದೂರ ಇರಬೇಕು. ದೈಹಿಕವಾಗಿ ವ್ಯಾಯಾಮದ ಅವಶ್ಯಕತೆ ಇರುತ್ತದೆ. ಹಣ ಕೊಟ್ಟು ದೇಹ ದಂಡನೆ ಮಾಡಬಾರದು. ವೈದ್ಯಕೀಯ ಸಾಹಿತ್ಯ ಓದುವ ಮೂಲಕ ಸುದೀರ್ಘ ಕಾಲ ಆರೋಗ್ಯ ಜೀವನ ನಡೆಸುವ ದಾರಿ ಕಂಡುಕೊಳ್ಳಬೇಕು ಎಂದರು.ಜೆಜೆಎಂ ಮೆಡಿಕಲ್ ಕಾಲೇಜಿನ ಡಾ. ಸೀನಾ ಮಾತನಾಡಿ, ಆರೋಗ್ಯವಂತ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇತ್ತೀಚೆಗೆ ಹೆಣ್ಣುಮಕ್ಕಳು ಕೂಡ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಭಾಗಮ್ಮ ಮಾತನಾಡಿದರು. ರಕ್ತದಾನ ಶಿಬಿರದಲ್ಲಿ ಎನ್.ಕೆ. ಆಂಜನೇಯ ಅವರು 25ನೇ ಬಾರಿಗೆ ರಕ್ತದಾನ ಮಾಡಿದ್ದು, ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಪ್ರೊ. ನಾಗರಾಜ ನಾಯ್ಕ, ಡಾ. ಶ್ರೀನಿವಾಸ್, ಲಕ್ಷ್ಮೀಕಾಂತ್, ಉಪನ್ಯಾಸಕರಾದ ಗೀತಾ, ಡಾ. ಬೀನಾ, ಹರಾಳು ಮಹಾಬಲೇಶ್ವರ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- - - -1ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಪತ್ರಕರ್ತ ಎನ್.ಕೆ. ಆಂಜನೇಯ ಸೇರಿದಂತೆ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.