ಸೇನೆಗೆ ಸೇರುವವರ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆಯಾಗುತ್ತಿದೆ

| Published : Jul 29 2024, 12:53 AM IST

ಸಾರಾಂಶ

ಹೊಸದುರ್ಗ ಪಟ್ಟಣದ ಹೇಮಾವತಿ ಸಮುದಾಯ ಭವನದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ, ಹುತಾತ್ಮಯೋಧರ ಸ್ಮರಣೆ, ಡೆಂಘೀ ಮಹಾಮಾರಿಯ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಭಾರತೀಯ ಸೇನೆಗೆ ಸೇರುವವರ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆಯಾಗುತ್ತಿದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಹೇಮಾವತಿ ಸಮುದಾಯ ಭವನದಲ್ಲಿ ವಾಕರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಸ್ಮರಣೆ, ಡೆಂಘೀ ಮಹಾಮಾರಿಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಹಾಗೂ ಮ್ಯಾರಥಾನ್ ವಾಕಥಾನ್ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಎಲ್ಲಾ ಯುದ್ಧಗಳಿಗಿಂತ ಕಾರ್ಗಿಲ್ ಯುದ್ಧ ಮಹತ್ತರ ಪಾತ್ರ ವಹಿಸಿದೆ. ಕಾರಣ ಇದು 18,000 ಅಡಿಯ ಅತಿ ಎತ್ತರದ ಪ್ರದೇಶದಲ್ಲಿ ನಡೆದ ಯುದ್ಧವಾಗಿತ್ತು. ಭಾರತೀಯ ಸೇನೆಗೆ ಇದು ಸವಾಲಾಗಿ ಪರಿಣಮಿಸಿತು. ಆಗ ತಮ್ಮ ಪ್ರಾಣವನ್ನು ಅರ್ಪಿಸಿ ನಮ್ಮ ಸೈನಿಕರು ದೇಶಕ್ಕೆ ಜಯ ತಂದುಕೊಟ್ಟಿದ್ದಾರೆ. ಅಗ್ನಿವೀರ್ ಸೇನೆಯಲ್ಲಿ ಯುವಕರಿಗೆ ಸೇರುವ ಅವಕಾಶವಿದ್ದು, ಸೇನೆಗೆ ಸೇರಲು ಬಯಸುವರು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ಕಾರ್ಗಿಲ್ ಯುದ್ಧದ 25 ವರ್ಷಗಳ ಸಂಭ್ರಮಾಚರಣೆಗೆ ಡೆಂಘೀ ಮಹಾಮಾರಿ ನಿಯಂತ್ರಣ ಜಾಗೃತಿ ಸಂದೇಶವಾಗಿ ಮಾರ್ಪಟ್ಟಿದೆ. ಡೆಂಘೀ ನಿಯಂತ್ರಣಕ್ಕೆ ಎಲ್ಲಾ ಕುಟುಂಬಗಳು ಜಾಗೃತಾ ವಹಿಸಬೇಕು. ಜೀವನದಲ್ಲಿ ದೇಶ ಪ್ರೇಮ ಹಾಗೂ ಪರಿಸರ ಪ್ರೇಮ ಬೆಳೆಸಿಕೊಂಡವರು ಯಶಸ್ವಿಯಾಗುತ್ತಾರೆ. ವಾಕರ್ ಅಸೋಸಿಯೇಷನ್ ಸಂಘ ವಿಭಿನ್ನ ಚಟುವಟಿಕೆಗಳ ಮುಖಾಂತರ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದು ಅಭಿನಂದನಾರ್ಹ ಎಂದರು.

ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, 50 ಜನ ಸದಸ್ಯರನ್ನು ಒಳಗೊಂಡ ವಾಕರ್ ಅಸೋಸಿಯೇಷನ್ ತಂಡ ಕಳೆದ 12 ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕಾಶ್ಮೀರದ ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಆತಂಕವಾದಿಗಳು ಕಾರ್ಗಿಲ್ ಪ್ರದೇಶವನ್ನ ಅಧಿಕ್ರಮಿಸಿದರು. ಆಗ ಕುರಿಗಾಹಿಗಳಿಂದ ವಿಷಯ ತಿಳಿದ ಭಾರತೀಯ ಸೇನೆ ಮೂರು ತಿಂಗಳ ಅವಿರತ ಹೋರಾಟದಿಂದ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿದರು. ಯುದ್ದದಲ್ಲಿ ಭಾರತದ 527 ಸೈನಿಕರು ವೀರ ಮರಣ ಹೊಂದಿದರು. ಆದರೆ ಇಂದು ನಾವೆಲ್ಲಾ ಅವರನ್ನು ಸ್ಮರಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಾಕರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಬಿ ಮಂಜುನಾಥ್, ಉಪಾಧ್ಯಕ್ಷ ಆಸಂದಿ ಪ್ರಕಾಶ್, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಯುವ ಮುಖಂಡ ಸದ್ಗುರು ಪ್ರದೀಪ್, ಆಗ್ರೋ ಶಿವಣ್ಣ, ಜಿ.ಪಂ ಸದಸ್ಯ ಹನುಮಂತಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಸಂಜಯ್, ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು, ತಾಲೂಕು ಆರೋಗ್ಯ ವೈದ್ಯಾಧಿಕಾರಿ ರಾಘವೇಂದ್ರ ಪ್ರಸಾದ್, ನಾಗೇಶಪ್ಪ, ಕೆ.ಸಿ ನಿಂಗಪ್ಪ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ರಕ್ಷಾ ನಾಗಭೂಷಣ್, ಲಯನ್ಸ್ ಕ್ಲಬ್ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಸುರೇಶ್ ಸಾಗರ್, ದೇವಿಗೆರೆ ಮಲ್ಲಿಕಾರ್ಜುನ್, ಬಾಬಣ್ಣ, ರಮೇಶ್, ವೆಂಕಟೇಶ್, ಪಾಪಣ್ಣಿ ಹಾಗೂ ವಾಕರ್ ಅಸೋಸಿಯೇಷನ್ ಸದಸ್ಯರು, ಶಾಲಾ ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.