ಸಾರಾಂಶ
ಧಾರವಾಡ:
ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಒದಗಿಸುವ ದೃಷ್ಟಿಯಿಂದ 2023ರ ಸೆ. 25ರಿಂದ ಶುರುವಾದ ಜನತಾ ದರ್ಶನ, ನಿಜವಾಗಿಯೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯುತ್ತಮ ಕಾರ್ಯಕ್ರಮ. ಆದರೆ, ಇಲ್ಲಿಯ ವರೆಗೆ ಏಳು ಜನತಾದರ್ಶನಗಳಾಗಿದ್ದು, ಜನರ ಸಮಸ್ಯೆಗಳೇನು ಕಡಿಮೆಯಾಗುತ್ತಿಲ್ಲ.ಸೋಮವಾರ ಇಲ್ಲಿಯ ಜಿಪಂ ಸಭಾಭವನದಲ್ಲಿ ನಡೆದ 7ನೇ ಜನತಾ ದರ್ಶನದಲ್ಲಿ ಈ ವರೆಗೆ ನಡೆದ ಜನತಾ ದರ್ಶನಗಳಲ್ಲಿಯೇ ಅತೀ ಹೆಚ್ಚು 213 ಅರ್ಜಿಗಳು ಸ್ವೀಕರವಾಗಿದ್ದು, ಸಾರ್ವಜನಿಕರು ತಮ್ಮ ಅಹವಾಲು ಹಿಡಿದು ಪರಿಹಾರಕ್ಕಾಗಿ ಹಾತೊರೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ಜಿಲ್ಲಾಡಳಿತವು ಎಷ್ಟೇ ವ್ಯವಸ್ಥಿತವಾಗಿ ಜನತಾ ದರ್ಶನ ಆಯೋಜಿಸಿದರೂ ಎಂದಿನಂತೆ ನೂಕುನುಗ್ಗಲು ಇತ್ತು. ಕೆಲವರು ಎರಡ್ಮೂರು ಬಾರಿ ಜನತಾ ದರ್ಶನಕ್ಕೆ ಆಗಮಿಸಿ ಅಹವಾಲು ನೀಡುತ್ತಿದ್ದರು. ಇನ್ನು ಕೆಲವರು ಸಚಿವ ಸಂತೋಷ ಲಾಡ್ ಅವರಿಗೆ ಜೋರು ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದರು.
ಜಿಲ್ಲೆಯ ಮಹಾನಗರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರಿಂದ ಸುಮಾರು 213 ಅಹವಾಲುಗಳನ್ನು ಸಚಿವ ಲಾಡ್ ಸ್ವೀಕರಿಸಿದರು. ಪ್ರಮುಖವಾಗಿ ಜಲಮಂಡಳಿಯ 25ಕ್ಕೂ ಹೆಚ್ಚು ನೌಕರರು 3 ತಿಂಗಳಿಂದ ಸಂಬಂಳವಾಗಿಲ್ಲ ಎಂದು ದೂರಿದರೆ, ಸಂಗೊಳ್ಳಿ ರಾಯಣ್ಣ ನಗರದ ಅಂಬೇಡ್ಕರ್ ಭವನದ ಅವೈಜ್ಞಾನಿಕ ಕಟ್ಟಡ ನಿರ್ಮಾಣ ಕುರಿತು ಎಸ್.ಎಂ. ಹುಡೇದ ಎಂಬುವರು ಅಹವಾಲು ನೀಡಿದರು.ಅಹವಾಲು ಸ್ವೀಕರಿಸಿದ ಸಚಿವರು, ಸಲ್ಲಿಕೆ ಆಗಿರುವ ಎಲ್ಲ ಅಹವಾಲುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು. ಆದರೆ, ಕೆಲವು ಮನವಿಗಳು ಸರ್ಕಾರದ ನೀತಿ, ನಿರೂಪಣೆಗೆ ಒಳಪಡಬೇಕಾಗುತ್ತದೆ. ಮತ್ತೆ ಕೆಲವು ಕೋರ್ಟ್ ವ್ಯಾಜ್ಯಗಳಾಗಿರುತ್ತವೆ. ಇವುಗಳಿಗೆ ಹಿಂಬರಹ ನೀಡಿ, ಕಳಿಸಲಾಗುತ್ತದೆ. ಕೆಲವು ಸಾರ್ವಜನಿಕರು ತಮ್ಮ ವಯಕ್ತಿಕ ಸಮಸ್ಯೆ, ಆಸ್ತಿ ಜಗಳ, ಸಂಬಂಧಿಕರ ಕೇಸ್, ಆಂತರಿಕ ಜಗಳ ಹೀಗೆ ವಿವಿಧ ರೀತಿಯ ಸಮಸ್ಯೆಗಳನ್ನು ಸಲ್ಲಿಸುತ್ತಾರೆ. ಇವುಗಳನ್ನು ಸಹ ಸಹಾನುಬೂತಿಯಿಂದ ಪರಿಶೀಲಿಸಿ, ಸಾಧ್ಯವಾದಷ್ಟು ಅವರ ಸಮಸ್ಯೆಗಳ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸೋಮವಾರದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ 62, ಪಾಲಿಕೆ 28, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ 37, ಕಾರ್ಮಿಕ 12, ಹೆಸ್ಕಾಂ 9, ಹಿಂದುಳಿದ ವರ್ಗಗಳ ಇಲಾಖೆ 9, ಶಾಲಾ ಶಿಕ್ಷಣ ಇಲಾಖೆ 6, ಸಾರಿಗೆ ಇಲಾಖೆ 6, ಗೃಹ ಇಲಾಖೆ 5, ಸಮಾಜ ಕಲ್ಯಾಣ ಇಲಾಖೆ 5, ಆರೋಗ್ಯ ಇಲಾಖೆ 5, ಸಹಕಾರ ಇಲಾಖೆ 4, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 4, ಲೋಕೋಪಯೋಗಿ ಇಲಾಖೆ 4, ವಸತಿ ಇಲಾಖೆ 4, ಕೃಷಿ ಇಲಾಖೆ 3, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 3, ಅರಣ್ಯ ಮತ್ತು ಪರಿಸರ ಇಲಾಖೆ 2 ಸೇರಿದಂತೆ ಒಟ್ಟು 213 ಅಹವಾಲುಗಳನ್ನು ಸಲ್ಲಿಸಿದ್ದಾರೆ.ಜಿಲ್ಲಾಧಿಕಾರಿ ದಿವ್ಯಪ್ರಭು, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿದ್ದರು. ಉಪವಿಭಾಗಾಧಿಕಾರಿ ಶಲಂ ಹುಸೇನ್ ನಿರ್ವಹಿಸಿದರು. ಜಿಲ್ಲಾಮಟ್ಟದಲ್ಲಿ ಜರುಗಿದ ಕಳೆದ ಆರು ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಸುಮಾರು 1242 ಅಹವಾಲು ಮತ್ತು ಇಂದಿನ 7ನೇ ಸಭೆಯಲ್ಲಿ 213 ಅಹವಾಲು ಸೇರಿ ಈ ವರೆಗೆ ಒಟ್ಟು 1455 ಅರ್ಜಿ ಸೀಕರಿಸಲಾಗಿದೆ. ಸೋಮವಾರ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಹೊರತುಪಡಿಸಿ, ಹಿಂದಿನ ಎಲ್ಲ ಅಹವಾಲು, ಅರ್ಜಿಗಳನ್ನು ಜಿಲ್ಲಾ ಹಂತದಲ್ಲಿ ಇತ್ಯರ್ಥಗೊಳಿಸಿ, ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಗರಂ ಆದ ಲಾಡ್:
ಸಾರ್ವಜನಿಕರ ಅಹವಾಲು ಸ್ವೀಕರಿಸುವ ಜನತಾ ದರ್ಶನದಲ್ಲಿ ಸಚಿವ ಸಂತೋಷ ಲಾಡ್ ಎಷ್ಟೇ ಸಮಾಧಾನದಿಂದ ಜನರ ಸಮಸ್ಯೆ ಕೇಳುತ್ತಿದ್ದರೂ ಕೆಲವರು ಸಚಿವರನ್ನು ಸಭೆಯಲ್ಲಿ ರೊಚ್ಚಿಗೆಬ್ಬಿಸಿದ ಪ್ರಸಂಗಗಳು ನಡೆದವು. ಸಮಸ್ಯೆ ಬಗ್ಗೆ ಪದೇ ಪದೇ ವಾದ ಮಾಡುವುದು, ಸಚಿವರಿಗೆ ಸಲಹೆ ನೀಡುವುದು, ಅವರ ಎದುರು ಅಧಿಕಾರಿಗಳನ್ನು ಹಿಯಾಳಿಸುವುದು, ಬೈಯ್ಯುವುದರಿಂದ ಲಾಡ್ ಗರಂ ಆಗಿ ಕೆಲವು ಬಾರಿ ಜನರನ್ನು ದಬಾಯಿಸಿದ ಸಂದರ್ಭಗಳೂ ನಡೆದವು.