ಗೋಳಗುಮ್ಮಟ ಪ್ರವಾಸಿಗರ ಸಂಖ್ಯೆ ಇಳಿಮುಖ

| Published : Jul 16 2024, 12:32 AM IST / Updated: Jul 16 2024, 12:33 AM IST

ಸಾರಾಂಶ

ಜಗತ್ತಿನ 7ನೇ ಅದ್ಭುತ, ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಮುಗಿಬೀಳುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕ್ಷೀಣಗೊಂಡಿದೆ. ಮಹಾಮಾರಿ ಕೋವಿಡ್ ಆವರಿಸಿದ ಬಳಿಕ ಬಹುತೇಕ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಜಾಸ್ತಿಯಾಗಿತ್ತು. ಆದರೆ, ಈ ಬಾರಿ ಮತ್ತೆ ಕಡಿಮೆಯಾಗಿದೆ. ಈ ಸಲದ ಬರಗಾಲದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಮೇಲೂ ಬೀರಿದೆ. ನಮ್ಮ ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಯಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಾಗಿದ್ದರೇ, ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು ಕೊಂಚ ಸಮಾಧಾನ ತಂದಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಜಗತ್ತಿನ 7ನೇ ಅದ್ಭುತ, ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಮುಗಿಬೀಳುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕ್ಷೀಣಗೊಂಡಿದೆ. ಮಹಾಮಾರಿ ಕೋವಿಡ್ ಆವರಿಸಿದ ಬಳಿಕ ಬಹುತೇಕ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಜಾಸ್ತಿಯಾಗಿತ್ತು. ಆದರೆ, ಈ ಬಾರಿ ಮತ್ತೆ ಕಡಿಮೆಯಾಗಿದೆ. ಈ ಸಲದ ಬರಗಾಲದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಮೇಲೂ ಬೀರಿದೆ. ನಮ್ಮ ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಯಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಾಗಿದ್ದರೇ, ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು ಕೊಂಚ ಸಮಾಧಾನ ತಂದಿದೆ.

ದೇಶಿ ಪ್ರವಾಸಿಗರಲ್ಲಿ ನಿರಾಸಕ್ತಿ:

ಪಿಸುಗುಟ್ಟುವ ಗ್ಯಾಲರಿ ಹೊಂದಿರುವ ವಿಶ್ವವಿಖ್ಯಾತ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಸೇರಿದಂತೆ ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿ ವಿಜಯಪುರದ ಅನೇಕ ತಾಣಗಳನ್ನು ನೋಡಲು ಆಗಮಿಸುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಈ ವರ್ಷ ಇಳಿಮುಖವಾಗಿದೆ. ಈ ಬಾರಿ ಆವರಿಸಿದ ಭೀಕರ ಬರದ ಎಫೆಕ್ಟ್‌ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ 10 ಸಾವಿರಕ್ಕೂ ಅಧಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಬಾರಿಯ ಬರಗಾಲದಿಂದಲೇ ಜನರು ಪ್ರವಾಸಕ್ಕೆ ಬಂದಿಲ್ಲ ಎಂದೆಣಿಸಬಹುದಾಗಿದೆ.ಗೋಳಗುಮ್ಮಟಕ್ಕೆ ಬಂದ ಪ್ರವಾಸಿಗರ ಸಂಖ್ಯೆ

2023ರ ಜನವರಿಯಿಂದ ಜೂನ್‌ದವರೆಗೆ 4,43,513 ಭಾರತೀಯರು ಭೇಟಿ ಮಾಡಿದ್ದರೆ, 453 ವಿದೇಶಿಗರು ಭೇಟಿ ಕೊಟ್ಟಿದ್ದಾರೆ.

2024ರ ಜನವರಿಯಿಂದ ಜೂನ್‌ವರೆಗೆ 4,32,793 ಸ್ವದೇಶಿಗರು ಭೇಟಿ ಕೊಟ್ಟಿದ್ದರೇ, 694 ವಿದೇಶಿಗರು ಆಗಮಿಸಿದ್ದಾರೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದಾಗ 10,720 ಸ್ವದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇನ್ನು ವಿದೇಶಿ ಪ್ರವಾಸಿಗರಲ್ಲಿ ಹೋಲಿಕೆ ಮಾಡಿದಾಗ 241 ವಿದೇಶಿ ಪ್ರವಾಸಿಗರ ಸಂಖ್ಯೆ ಏರಿಕೆ ಕಂಡಿದೆ.

--------ಇಬ್ರಾಹಿಂ ರೋಜಾಕ್ಕೆ ಪ್ರವಾಸಿಗರು

2023 ರಲ್ಲಿ 90,045 ಭಾರತೀಯರು ಹಾಗೂ 393 ವಿದೇಶಿಗರು ಭೇಟಿ ಕೊಟ್ಟಿದ್ದಾರೆ.

2024ರಲ್ಲಿ ಅಂಕೆಸಂಖ್ಯೆ ಗಮನಿಸಿದಾಗ 88,099 ಭಾರತೀಯರು ಹಾಗೂ 587 ವಿದೇಶಿಗರು ಆಗಮಿಸಿರುವುದು ಕಂಡುಬಂದಿದೆ.

ಎರಡನ್ನೂ ಹೋಲಿಸಿದಾಗ ಕಳೆದ ವರ್ಷಕ್ಕಿಂತ ಈ ವರ್ಷ 1946 ಭಾರತೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇನ್ನು ವಿದೇಶಿಗರಲ್ಲಿ ಗಮನಿಸಿದಾಗ 194 ವಿದೇಶಿಗರು ಹೆಚ್ಚಿಗೆ ಬಂದಿದ್ದಾರೆ.

----------

ವಿಜಯಪುರದ ಪ್ರವಾಸಿ ತಾಣಗಳು:

ವಿಶ್ವದ ಅದ್ಭುತಗಳಲ್ಲೊಂದಾದ ಗೋಳಗುಮ್ಮಟ, ಹಾಗೂ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯನ್ನು ಹೊಂದಿರುವ ವಿಜಯಪುರದಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ವಾರದ ಕೊನೆಯ ಅಥವಾ ರಜಾ ದಿನಗಳಲ್ಲಿ ಸ್ನೇಹಿತರು ಅಥವಾ ಕುಟುಂಬ ಸಮೇತ ಬಂದರೆ ಇಲ್ಲಿ ಮಸ್ತ್ ಮಜಾ ಮಾಡಬಹುದಾಗಿದೆ.ನಗರದಲ್ಲಿ ಗೋಳಗುಮ್ಮಟ, ವಸ್ತುಸಂಗ್ರಹಾಲಯ, ಇಬ್ರಾಹಿಂ ರೋಜಾ, ಬಾರಾಕಮಾನ್, ಜೋಡಗುಮ್ಮಟ, ಆಸರ್ ಮಹಲ್, ಲಲಿತ ಮಹಲ್, ಸಂಗೀತ ಮಹಲ್, ಜಾಮಿಯಾ ಮಸಜೀದ್, ಶಿವಗಿರಿ ಸೇರಿದಂತೆ ಹಲವು ತಾಣಗಳನ್ನು ವೀಕ್ಷಿಸಬಹುದಾಗಿದೆ.

ಜಿಲ್ಲೆಯ ವಿವಿಧೆಡೆ ಭೇಟಿ ಕೊಟ್ಟಾಗ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ಇಂಗಳೇಶ್ವರದಲ್ಲಿ ಬಸವೇಶ್ವರ ತಾಯಿಯ ತವರು, ವಚನಶಿಲಾ ಮಂಟಪ, ಆಲಮಟ್ಟಿ ಡ್ಯಾಂ ಸೈಟ್, ಲವಕುಶ ಉದ್ಯಾನವನ, ರಾಕ್ ಗಾರ್ಡನ್, ಬೋಟಿಂಗ್, ಮುಸ್ಸಂಜೆ ವೇಳೆ ಸಂಗೀತ ಕಾರಂಜಿ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು ಹಾಗೂ ಅವುಗಳ ಮಹತ್ವ ಕುರಿತು ಇನ್ನಷ್ಟು ಪ್ರಚಾರ ಆಗಬೇಕಿದೆ. ನಗರದಲ್ಲಿ ಸ್ವಚ್ಚತೆ, ಬಂದ ಪ್ರವಾಸಿಗರಿಗೆ ಸಕಲ ವ್ಯವಸ್ಥೆಗಳು ಆದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಬಾರಿಯ ಬರಗಾಲವೂ ಸಹ ಪ್ರವಾಸಿಗರ ಮೇಲೆ ಪರಿಣಾಮ ಬೀರಿರಬಹುದು.

-ವಿಜಯಕುಮಾರ.ಎಂ.ವಿ ಪುರಾತತ್ವ ಸಂರಕ್ಷಕರು.

ವಿಜಯಪುರಕ್ಕೆ ಮೊದಲಬಾರಿಗೆ ಭೇಟಿ ನೀಡಿದ್ದೆವು, ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿದೆವು. ಅದರಲ್ಲೂ ಗೋಳಗುಮ್ಮಟ ಒಳಭಾಗದಲ್ಲಿ ನಿಂತು ಒಂದು ಬಾರಿ ಕೂಗಿದೆ 7 ಬಾರಿ ಕೆಳಿಸುವ ಅದ್ಭುತ್‌ ಶಿಲಾ ಗೋಪುರವನ್ನು ಕಂಡು ಬಹಳಷ್ಟು ಖುಷಿ ಆಯಿತು. ಇದುವರೆಗೂ ಬರದವರು ಜಿಲ್ಲೆಗೆ ಒಮ್ಮೆಯಾದರೂ ಬಂದು ಇಲ್ಲಿನ ತಾಣಗಳನ್ನು ನೋಡಬಹುದಾಗಿದೆ.

-ಧರಣೀಶ, ಪ್ರವಾಸಿಗ.