ಕನ್ನಡಪ್ರಭ ವಾರ್ತೆ ನಾಗಮಂಗಲ

ಸಮಾಜದ ಆರೋಗ್ಯ ರಕ್ಷಣೆಯಲ್ಲಿ ನರ್ಸಿಂಗ್ ವೃತ್ತಿ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸೇವಾಭಾವ ಮತ್ತು ನೈತಿಕತೆಯನ್ನು ತಮ್ಮ ಬದುಕಿನಲ್ಲಿ ಆದರ್ಶವಾಗಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಆಡಿಟೋರಿಯಂನಲ್ಲಿ ಆದಿಚುಂಚನಗಿರಿ ನರ್ಸಿಂಗ್ ಕಾಲೇಜು ಹಾಗೂ ಬಿಜಿಎಸ್ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ನಿಷ್ಠೆ, ಶ್ರದ್ಧೆ, ಸಹನೆ ತಾಳ್ಮೆ ಮತ್ತು ಸೇವಾ ಮನೋಭಾವದ ಗುಣವಿರಬೇಕು. ವೃತ್ತಿಯು ಕೇವಲ ಒಂದು ಉದ್ಯೋಗವಲ್ಲ. ಸಮಾಜ ಸೇವೆ ಎಂಬುದನ್ನು ಅರಿಯಬೇಕು ಎಂದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ಮಾತನಾಡಿ, ನರ್ಸಿಂಗ್ ಸೇವೆ ಮಾನವೀಯತೆ, ಕರುಣೆ ಮತ್ತು ತ್ಯಾಗದ ಸಂಕೇತವಾಗಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಬೆಂಗಳೂರಿನ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಶ್ರೀಕಾಂತ್ ಫುಲಾರಿ ಮಾತನಾಡಿ, ನರ್ಸಿಂಗ್ ಕ್ಷೇತ್ರವು ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ರೋಗಿಗಳ ಆರೈಕೆ ಮತ್ತು ಗುಣಮುಖತೆಯಲ್ಲಿ ನರ್ಸ್‌ಗಳ ಪಾತ್ರ ಅನನ್ಯವಾಗಿದೆ. ಉತ್ತಮ ಗುಣಮಟ್ಟದ ನರ್ಸಿಂಗ್ ಶಿಕ್ಷಣದ ಮೂಲಕ ಸಮಾಜಕ್ಕೆ ಸಮರ್ಥ ಆರೋಗ್ಯ ಸೇವಕರನ್ನು ರೂಪಿಸುವ ಅಗತ್ಯವಿದೆ ಎಂದರು.

ಪ್ರೊ.ಕೆ.ಸಿ.ಶಿವಪ್ಪ ಮತ್ತು ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಕಾರ್ಯಕ್ರಮ ಕುರಿತು ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ದೀಪ ಹಚ್ಚುವ ಮೂಲಕ ನರ್ಸಿಂಗ್ ವೃತ್ತಿಯ ಪವಿತ್ರತೆಯನ್ನು ಸ್ಮರಿಸಿ ರೋಗಿಗಳ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು.


ಸಮಾರಂಭದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಆಸ್ಪತ್ರೆ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಕ್ಟೋರಿಯಾ ಸರ್ವಂದ್, ಸಸ್ಯಕಾಶಿಯ ಬಿಜಿಎಸ್ ನರ್ಸಿಂಗ್ ವಿಜ್ಞಾನ ಸಂಸ್ಥೆ ಪ್ರಾಂಶುಪಾಲೆ ಡಾ.ಎಚ್.ಕೆ.ಕೋಮಲ ಸೇರಿದಂತೆ ಹಲವರು ಇದ್ದರು.