ಗ್ಯಾರಂಟಿ ಯೋಜನೆಗಳ ಉದ್ದೇಶ ಮಹಿಳಾ ಸ್ವಾವಲಂಬನೆ

| Published : Jul 15 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಸಮರ್ಪಕ ಜಾರಿಗೆ ತಂದಿದೆ. ಆ ಮೂಲಕ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ 2 ವರ್ಷಗಳು ಪೂರ್ಣಗೊಂಡಿವೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

- ಶಕ್ತಿ ಯೋಜನೆ 2 ವರ್ಷ ಪೂರೈಸಿದ ಸಂಭ್ರಮದಲ್ಲಿ ಅಧ್ಯಕ್ಷ ಸಿ.ಎಚ್‌.ಶ್ರೀನಿವಾಸ್‌

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಸಮರ್ಪಕ ಜಾರಿಗೆ ತಂದಿದೆ. ಆ ಮೂಲಕ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ 2 ವರ್ಷಗಳು ಪೂರ್ಣಗೊಂಡಿವೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಹೇಳಿದರು.

ಸೋಮವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಅನುಷ್ಠಾನಗೊಂಡು 2 ವರ್ಷಗಳು ಪೂರೈಸಿದ ಸಂಭ್ರಮಕ್ಕಾಗಿ ಸರ್ಕಾರಿ ಬಸ್‌ಗೆ ಪೂಜೆ ಸಲ್ಲಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್‌ ಟಿಕೆಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತಂದಿದೆ. ಆ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ ಎಂದರು.

ಸಮಿತಿ ಜಿಲ್ಲಾ ಸದಸ್ಯ ಸಿ.ನಾಗರಾಜ್ ಮಾತನಾಡಿ, ಶಕ್ತಿ ಯೋಜನೆ ಜಾರಿಗೊಂಡು 2 ವರ್ಷದ ಅವಧಿಯಲ್ಲಿ 500 ಕೋಟಿಯ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಿದೆ. ₹12,669 ಕೋಟಿ ಶಕ್ತಿ ಯೋಜನೆಗೆ ಇದುವರೆಗೆ ವಿನಿಯೋಗಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತಿಗೆ ಬದ್ಧ, ಪ್ರಗತಿಗೆ ಸಿದ್ಧ ಎಂದು ತೋರಿಸಿಕೊಟ್ಟಿದೆ ಎಂದರು.

ತಾಲೂಕಿನ ಪ್ರತಿ ಗ್ರಾಮಾಂತರ ಪ್ರದೇಶಗಳಿಗೂ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ಷೇತ್ರದ ಶಾಸಕರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಚನ್ನಗಿರಿಯ ಕೆ.ಎಸ್.ಆರ್.ಟಿ.ಸಿ. ಡಿಪೋ ಉದ್ಘಾಟನೆಗೊಳ್ಳಲಿದೆ. ಡಿಪೋ ಪ್ರಾರಂಭವಾದ ತಕ್ಷಣವೇ ತಾಲೂಕಿನ ಪ್ರತಿ ಗ್ರಾಮಕ್ಕೂ ಸರ್ಕಾರಿ ಬಸ್‌ಗಳು ಬರಲಿವೆ ಎಂದರು.

ಈ ಸಂದರ್ಭ ತಾಲೂಕು ಕಾಂಗ್ರೆಸ್ ಮುಖಂಡರಾದ ಅಮಾನುಲ್ಲಾ, ಪುರಸಭೆ ಸದಸ್ಯ ಶ್ರೀಕಾಂತ್, ಶಿವು, ಶಾಮಣ್ಣ, ಕೆ.ಎಸ್.ಆರ್.ಟಿ.ಸಿಯ ಮುಖ್ಯ ಲೆಕ್ಕಾಧಿಕಾರಿ ಚಲುವೆಗೌಡ, ಟ್ರಾಫಿಕ್ ಇನ್‌ಸ್ಪೆಕ್ಟರ್ ಕೊಟ್ರೇಶ್, ಅಂಜನಪ್ಪ, ಅಭಿಯಂತರ ನಾಗರಾಜ್, ನಿವೃತ್ತ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಗುರುಮೂರ್ತಿ, ನಲ್ಲೂರು ಜಯಣ್ಣ ಮೊದಲಾದವರು ಹಾಜರಿದ್ದರು.

- - -

-14ಕೆಸಿಎನ್‌ಜಿ1.ಜೆಪಿಜೆ:

ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಅನುಷ್ಠಾನಗೊಂಡು 2 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್‌ ಸರ್ಕಾರಿ ಬಸ್‌ಗೆ ಪೂಜೆ ಸಲ್ಲಿಸಿ, ಪ್ರಯಾಣಿಕರಿಗೆ ಉಚಿತ ಟಿಕೆಟ್‌ ವಿತರಿಸಿದರು.