''ಭೂ ಸುರಕ್ಷಾ'' ಯೋಜನೆ ಜಾರಿ ಉದ್ದೇಶ ತ್ವರಿತ, ಸರಳ ಆಡಳಿತ: ದೇವೇಂದ್ರಪ್ಪ

| Published : Jan 18 2025, 12:48 AM IST

''ಭೂ ಸುರಕ್ಷಾ'' ಯೋಜನೆ ಜಾರಿ ಉದ್ದೇಶ ತ್ವರಿತ, ಸರಳ ಆಡಳಿತ: ದೇವೇಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಭೂ ದಾಖಲೆಗಳ ಇ-ಖಜಾನೆಗಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ದಾಖಲೆಗಳ ಸರಳೀಕರಣಕ್ಕೆ ಡಿಜಿಟಲ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ತಹಸೀಲ್ದಾರ್ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ- - - ಜಗಳೂರು: ರೈತರ ಭೂ ದಾಖಲೆಗಳ ಇ-ಖಜಾನೆಗಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ದಾಖಲೆಗಳ ಸರಳೀಕರಣಕ್ಕೆ ಡಿಜಿಟಲ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೈ ಬರಹಗಳ ಭೂ ದಾಖಲೆಗಳನ್ನು ಡಿಜಿಟಲೀರಣ ಮಾಡುವುದರಿಂದ ಐದು ಪ್ರಯೋಜನಗಳು ರೈತರಿಗೆ ವರದಾನವಾಗಲಿವೆ. ತ್ವರಿತವಾಗಿ ಸರಳ ಆಡಳಿತ, ತಿದ್ದಲು ಕಳೆಯಲು ಅಸಾಧ್ಯ. ತಂತ್ರಜ್ಞಾನದಿಂದ ನಿಮ್ಮ ಕೈಗೆ ಶಕ್ತಿ, ನೇರ ಸುಲಭ ಲಭ್ಯತೆ, ದಾಖಲೆ ಸುಭದ್ರ, ಶಾಶ್ವತವಾಗಿ ಇರಲಿದೆ ಎಂದರು.

ರಾಜ್ಯದಲ್ಲಿಯೇ ದಾವಣಗೆರೆಯನ್ನು ಪೈಲೆಟ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನು ನಾನ್ ಪೈಲೆಟ್ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ನಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿ ಸರ್ವೆ ಮತ್ತು ನೋಂದಣಿಯ ಇಲಾಖೆಗಳ ಎಲ್ಲ ಭೂ ದಾಖಲೆಗಳು ಇನ್ನು ಒಂದು ವರ್ಷದಲ್ಲಿ ಡಿಜಿಟಲೀಕರಣವಾಗಲಿವೆ ಎಂದು ಮಾಹಿತಿ ನೀಡಿದರು.

ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತೆನೆ ಮಾಡಿ ರೆಕಾರ್ಡ್ ರೂಗಳಿಂದ ಪಡೆದುಕೊಳ್ಳು ಇರುವ ತೊಂದರೆಗಳು ನಿವಾರಣೆಯಾಗಲಿವೆ. ನಿಮ್ಮ ದಾಖಲೆಗಳನ್ನು ನಿಮ್ಮ ಕೈಗೆ ತಲುಪಿಸುವ ಯೋಜನೆ ಇದಾಗಿದೆ. ಅಡೆತಡೆಗಳನ್ನು ಆಲಿಸಿ, ತ್ವರಿತ ಆಡಳಿತ ಸೇವೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ, ಡಿಜಿಟಲೀಕರಣದಿಂದ ಉತ್ತಮ ಜನಪರ ಆಡಳಿತದ ಜೊತೆಗೆ ರೈತರ ಭೂ ಒಡೆತನಕ್ಕೆ ಒಂದು ಗ್ಯಾರಂಟಿ ಸಿಗಲಿದೆ. ತಾಲೂಕಿನಲ್ಲಿ 5.70 ಲಕ್ಷ ಪುಟಗಳನ್ನು ಇನ್ನೊಂದು ವರ್ಷದಲ್ಲಿ ಡಿಜಿಟಲೀಕರಣ ಮಾಡಿ ಭೂ ದಾಖಲೆಗಳನ್ನು ಇ-ಖಜಾನೆ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಸಣ್ಣಸೂರಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮದ್, ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ಭೂ ದಾಖಲೆಗಳ ಅಧಿಕಾರಿಗಳಾದ ರಾಘವೇಂದ್ರ, ಆರ್‌ಐ ಧನಂಜಯ, ಮಲ್ಲಿಕಾರ್ಜುನ್, ಪ್ರವೀಣ್‍ಕುಮಾರ್ ಇತರರು ಇದ್ದರು.

- - - -15ಜೆಎಲ್‌ಆರ್‌2:

ಜಗಳೂರು ಪಟ್ಟಣದ ತಹಸೀಲ್ದಾರ್ ಕಚೇರಿಯ ಭೂ ದಾಖಲೆಗಳ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.